ಬೆಂಗಳೂರು: ಕಳೆದ 2005ರ ಡಿಸೆಂಬರ್‌ನಲ್ಲಿ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ (iisc campus) ನಡೆದ ಗುಂಡಿನ ದಾಳಿಯಲ್ಲಿ ವಿಜ್ಞಾನಿಯೊಬ್ಬರು ಮೃತಪಟ್ಟಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಕ್ಯಾಂಪಸ್‌ನಲ್ಲಿ ಭದ್ರತಾ ಲೋಪದ ಆರೋಪ ಕೇಳಿ ಬಂದಿದೆ.
ಇಲ್ಲಿನ ಸದಾಶಿವನಗರ ಸಮೀಪದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕ್ಯಾಂಪಸ್‌ನಲ್ಲಿ ಪದೇ ಪದೆ ನಿಗೂಢ ಕಳವು ಪ್ರಕರಣಗಳು ನಡೆಯುತ್ತಿದ್ದವು. ಇದು ಅಲ್ಲಿನ ಸಿಬ್ಬಂದಿ ಸಹಿತ ಅಧಿಕಾರಿ ವರ್ಗಗಳ ತಲೆ ಕೆಡಿಸಿತ್ತು, ವಿದ್ಯಾರ್ಥಿಗಳ ಸಿಟ್ಟು ದುಪ್ಪಟ್ಟು ಆಗಿತ್ತು. ಕ್ಯಾಂಪಸ್‌ನಲ್ಲಿ ಲೂಟಿ ಮಾಡುವ ಕಳ್ಳ ಯಾರು ಎಂದು ಸೆಕ್ಯೂರಿಟಿ ಗಾರ್ಡ್ಸ್ ನಿದ್ದೆ ಬಿಟ್ಟರೆ, ವಿದ್ಯಾರ್ಥಿ ವೃಂದ ತಾಳ್ಮೆಯನ್ನು ಕಳೆದುಕೊಂಡಿತ್ತು. ಇದೀಗ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಜಿಯಾವುಲ್ಲಾ ಮಲ್ಲಿಕ್ ಬಂಧಿತ ಆರೋಪಿಯಾಗಿದ್ದಾನೆ.
ಹೈ ಸೆಕ್ಯುರಿಟಿ ನಡುವೆ ಕ್ಯಾಂಪೆಸ್‌ನೊಳಗೆ ನುಗ್ಗುವ ಚೋರ ಯಾರೆಂದು ತಿಳಿಯಲು ಚೌಕಿದಾರರು ಹಿಂದೆ ಬಿದ್ದಿದ್ದರು. ತಿಂಗಳುಗಟ್ಟಲೆ ಕಳ್ಳತನ ಮಾಡುತ್ತಿದ್ದರೂ ಆ ಕಳ್ಳ ಯಾರು ಎಂದು ಮಾತ್ರ ತಿಳಿದಿರಲಿಲ್ಲ. ಹೀಗಾಗಿ ಕ್ಯಾಂಪಸ್ ಪ್ರವೇಶಿಸುವ ಎಲ್ಲರ ಮೇಲೂ ಸೆಕ್ಯೂರಿಟಿ ಗಾರ್ಡ್‌ಗಳು ಹದ್ದಿನ ಕಣ್ಣಿಟ್ಟಿದ್ದರು.
ಸ್ಟೂಡೆಂಟ್ ಐಡಿ ಕಾರ್ಡ್ ಬಳಸಿ ಎಂಟ್ರಿ
ಜಿಯಾವುಲ್ಲಾ ಮಲ್ಲಿಕ್ ವಿದ್ಯಾರ್ಥಿ ಐಡಿ ಕಾರ್ಡ್ ಬಳಸಿ ಕ್ಯಾಂಪಸ್ ಒಳಗೆ ನುಸುಳುತ್ತಿದ್ದ. ಎಂ.ಟೆಕ್ ವಿದ್ಯಾರ್ಥಿ ಎಂಬಂತೆ ರಸ್ತೆಯಲ್ಲಿ ಸಿಕ್ಕ ಯಾವುದೋ ವಿದ್ಯಾರ್ಥಿಯ ಐಡಿ ಕಾರ್ಡ್ ಬಳಸಿಕೊಂಡು ರಾಜಾರೋಷವಾಗಿ ಕ್ಯಾಂಪಸ್‌ನಲ್ಲಿ ಓಡಾಡುತ್ತಿದ್ದ. ಹೀಗೆ ಓಡಾಡುತ್ತಿದ್ದವನ ಮೇಲೆ ಸೆಕ್ಯೂರಿಟಿ ಗಾರ್ಡ್‌ಗಳ ಗಮನ ಹೋಗಿದೆ. ಕೂಡಲೇ ಇವನನ್ನು ತಡೆದು ಪ್ರಶ್ನೆ ಮಾಡಿ, ಐಡಿ ಕಾರ್ಡ್ ಬಗ್ಗೆಯೂ ವಿಚಾರಿಸಿದ್ದಾರೆ. ಈ ವೇಳೆ ತಬ್ಬಿಬ್ಬದ ಜಿಯಾವುಲ್ಲಾ ಮಲ್ಲಿಕ್‌ನ ಅಸಲಿತನ ಬಯಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಜಿಯಾವುಲ್ಲಾ ಮಲ್ಲಿಕ್, ನಗರದ ಯಶವಂತಪುರದಲ್ಲಿ ವಾಸವಾಗಿದ್ದಾನೆ. ಮಲ್ಲಿಕ್‌ನನ್ನು ಪರಿಶೀಲನೆ ನಡೆಸಿದ ಸೆಕ್ಯೂರಿಟಿ ಮತ್ತು ಸೂಪರ್ ವೈಸರ್‌ಗಳು ಆತನ ಬಳಿ ಪತ್ತೆಯಾದ ಐಐಎಸ್‌ಸಿ ಎಂಟೆಕ್ ವಿದ್ಯಾರ್ಥಿಯ ಐಡಿ ಕಾರ್ಡ್ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕ್ಯಾಂಪಸ್‌ನಲ್ಲಿ ನಡೆದಿದ್ದ ಸರಣಿ ಕಳ್ಳತನಕ್ಕೆ ಈತನೇ ರೂವಾರಿ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Weather Report: ವೀಕೆಂಡ್‌ನಲ್ಲಿ ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ; ಈ ಜಿಲ್ಲೆಗಳಿಗೂ ಅಲರ್ಟ್
ರಸ್ತೆಯಲ್ಲಿ ಸಿಕ್ಕ ವಿದ್ಯಾರ್ಥಿ ಐಡಿ ಕಾರ್ಡ್ ಬಳಸಿಕೊಂಡು ಕಳ್ಳತನ ಮಾಡುತ್ತಿದ್ದ. ವಿದ್ಯಾರ್ಥಿ ವೇಷಧಾರಿಯಾಗಿ ಬಂದು ಕ್ಯಾಂಪಸ್‌ನ ಬಾಯ್ಸ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಲ್ಯಾಪ್ ಟಾಪ್, ಕ್ಯಾಮೆರಾ, ಮೊಬೈಲ್ ಹಾಗೂ ನಗದು ಹಣ, 200 ಯುಎಸ್ ಡಾಲರ್, 5 ಯೂರೋ ಸೇರಿ ಹಲವು ವಸ್ತುಗಳನ್ನು ಕದ್ದಿದ್ದ. ಇದೆಲ್ಲವನ್ನೂ ಸದಾಶಿವನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ