Site icon Vistara News

The Kerala Story : ಕೇರಳ ಸ್ಟೋರಿ ಸಿನಿಮಾ ನೋಡಲು ರಜೆ ಕೊಟ್ಟ ಕಾಲೇಜು, ವಿರೋಧ ವ್ಯಕ್ತವಾದ ಬಳಿಕ ಹಿಂದೇಟು

Kerala story show at Ilakal draws oppostion

Kerala story show at Ilakal draws oppostion

ಬೆಂಗಳೂರು: ಬಾಗಲಕೋಟೆಯ ಇಳಕಲ್‌ನಲ್ಲಿರುವ ಶ್ರೀ ವಿಜಯ ಮಹಾಂತೇಶ್‌ ಆಯುರ್ವೇದಿಕ್‌ ಕಾಲೇಜಿನಲ್ಲಿ (Ilakal Ayurvedic college) ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ ʻದಿ ಕೇರಳ ಸ್ಟೋರಿʼ (The Kerala Story) ಸಿನಿಮಾವನ್ನು ನೋಡಲು ರಜೆ ನೀಡಿದ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿದೆ.

ಮೇ 24ರಂದು ನಗರದ ಚಿತ್ರ ಮಂದಿರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷ ಉಚಿತ ಪ್ರದರ್ಶನ (Special free Show) ಏರ್ಪಡಿಸಲಾಗಿದ್ದು, ಎಲ್ಲರೂ ಸಿನಿಮಾವನ್ನು ನೋಡಬೇಕು. ಹೀಗಾಗಿ ಮೇ 24ರಂದು ಮಧ್ಯಾಹ್ನದ ಬಳಿಕ ಕಾಲೇಜಿನಲ್ಲಿ ತರಗತಿಗಳು ಇರುವುದಿಲ್ಲ ಎಂದು ಘೋಷಿಸಲಾಗಿತ್ತು.

ಮೇ 23ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಪ್ರಿನ್ಸಿಪಾಲ್‌ ಡಾ. ಕೇಶವ್‌ ದಾಸ್‌ ಅವರು, ಇಳಕಲ್‌ನ ಶ್ರೀನಿವಾಸ ಟಾಕೀಸ್‌ನಲ್ಲಿ ಮೇ 24ರಂದು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಕೇರಳ ಸ್ಟೋರಿ ಸಿನಿಮಾದ ಪ್ರದರ್ಶನವಿದೆ. ಬಿಎಎಂಎಸ್‌ ಎಲ್ಲ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸಿನಿಮಾವನ್ನು ವೀಕ್ಷಿಸುವಂತೆ ಸೂಚಿಸಲಾಗಿದೆ. ಇದು ಉಚಿತ ಪ್ರದರ್ಶನವಾಗಿದ್ದು, ಆವತ್ತು ಬೆಳಗ್ಗೆ 9ರಿಂದ 12 ಗಂಟೆಯವರೆಗೆ ಮಾತ್ರ ತರಗತಿಗಳಿರುತ್ತವೆ. ನೀವೆಲ್ಲರೂ ಕಡ್ಡಾಯವಾಗಿ ಸಿನಿಮಾ ನೋಡಬೇಕುʼʼ ಎಂದು ತಿಳಿಸಿದ್ದರು.

ಮೇ 5ರಂದು ದೇಶಾದ್ಯಂತ ಬಿಡುಗಡೆಯಾದ ಕೇರಳ ಸ್ಟೋರಿ ಸಿನಿಮಾವು ಕೇರಳದಲ್ಲಿ ಹಿಂದು ಯುವತಿಯರನ್ನು ಆಮಿಷದ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅವರನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೇರಿಸಿದ ನೈಜ ಕಥೆಗಳನ್ನು ಹೊಂದಿದೆ ಎಂದು ನಿರ್ದೇಶಕರು ತಿಳಿಸಿದ್ದರು.

ಬುಧವಾರ ಮಾಧ್ಯಮದ ಮುಂದೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಈ ಸಿನಿಮಾವನ್ನು ತೋರಿಸುವ ಉದ್ದೇಶ ಪ್ರಮುಖವಾದ ಸಾಮಾಜಿಕ ಸಂದೇಶವನ್ನು ತಲುಪಿಸುವುದಾಗಿದೆ ಹೇಳಿದ್ದರಲ್ಲದೆ, ಸಾರ್ವಜನಿಕರು ಕೂಡಾ ಇದನ್ನು ನೋಡಬೇಕು ಎಂದು ಹೇಳಿದ್ದರು.

ಆದರೆ, ಸುತ್ತೋಲೆಯ ಬಗ್ಗೆ ವಿವಾದ ಸಿಡಿದೇಳುತ್ತಿದ್ದಂತೆಯೇ, ʻʻನಾನು ವಿದ್ಯಾರ್ಥಿಗಳು ಸಿನಿಮಾ ನೋಡಿ ಎಂದು ಹೇಳಿದ್ದ ಆದೇಶವನ್ನು ಹಿಂದೆ ಪಡೆದಿದ್ದೇನೆ. ಮೇ 24ರಂದು ಎಂದಿನಂತೆ ತರಗತಿಗಳು ನಡೆಯಲಿವೆ. ತರಗತಿಗಳನ್ನು ರದ್ದು ಮಾಡಿ ಸಿನಿಮಾ ನೋಡಲು ಹೋಗಿ ಎಂದು ಸುತ್ತೋಲೆ ಹೊರಡಿಸಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆʼʼ ಎಂದು ಪ್ರಿನ್ಸಿಪಾಲ್‌ ಕೇಶವ್‌ ದಾಸ ಹೇಳಿದ್ದಾರೆ.

ಭಾರತೀಯ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಸಂಘಟನೆಯ ಇಳಕಲ್‌ ಘಟಕದ ಅಧ್ಯಕ್ಷರಾಗಿರುವ ಆಸೀಫ್‌ ಹುಣಚಗಿ ಅವರು ಈ ಘಟನೆಯನ್ನು ಖಂಡಿಸಿದ್ದು, ಜಿಲ್ಲಾ ಪ್ರಾಧಿಕಾರಕ್ಕೆ ಈ ಬಗ್ಗೆ ದೂರು ನೀಡಿದ್ದಾರೆ.

ಇಳಕಲ್‌ ಮಠದ ಶೀ ಗುರುಮಹಾಂತ ಸ್ವಾಮಿ ಅವರು ಶ್ರೀ ವಿಜಯ ಮಹಾಂತೇಶ್‌ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಇಳಕಲ್‌ ಮತ್ತು ಸುತ್ತಮುತ್ತ 13 ಶಿಕ್ಷಣ ಸಂಸ್ಥೆಗಳಿವೆ.

ಈ ನಡುವೆ, ಬಿಜೆಪಿ ನಾಯಕರೂ ಆಗಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಬಾಗಲಕೋಟೆಯ ಚಂದನ್‌ ಥಿಯೇಟರ್‌ನಲ್ಲಿ ಮೂರು ದಿನಗಳ ಕಾಲ ಕೇವಲ ವಿದ್ಯಾರ್ಥಿಗಳಿಗಾಗಿಯೇ ಉಚಿತ ಶೋ ಏರ್ಪಡಿಸಿದ್ದರು. ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: The Kerala Story : ಕೇರಳ ಸ್ಟೋರಿಯ ನಟಿ ಅದಾ ಶರ್ಮಾ ಮೊಬೈಲ್​ ನಂಬರ್​ ಲೀಕ್​, ಶುರುವಾಯ್ತು ಕಿರುಕುಳ

Exit mobile version