Site icon Vistara News

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅಕ್ರಮ: ಏಳು ಅಧಿಕಾರಿಗಳ ಎತ್ತಂಗಡಿ

ಸೆಂಟ್ರಲ್‌ ಜೈಲ್

ಬೆಂಗಳೂರು: ನಗರದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ವಿವಿಧ ಅಕ್ರಮ ನಡೆದ ಹಿನ್ನೆಲೆಯಲ್ಲಿ ಅಲರ್ಟ್ ಆದ ರಾಜ್ಯ ಸರ್ಕಾರ, ಎಡಿಜಿಪಿ ಮುರುಗನ್‌ ವರದಿ ಆಧರಿಸಿ ಏಳು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ ವರ್ಗಾಯಿಸಿದೆ.

ಜೈಲಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಗಾಂಜಾ ದಂಧೆ, ಸೆರೆಮನೆಯಲ್ಲಿ ಇದ್ದುಕೊಂಡೇ ಪರೋಕ್ಷವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿ, ಕೈದಿಗಳಿಗೆ ಐಶಾರಾಮಿ ಸೌಲಭ್ಯ ಕಲ್ಪಿಸಲು ಲಂಚ ಪಡೆಯುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಎಡಿಜಿಪಿ ಮುರುಗನ್‌ ಅವರಿಗೆ ಸೂಚಿಸಿತ್ತು. ಹೀಗಾಗಿ 18 ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ‌ ಜರುಗಿಸಲು ಹಾಗೂ ಜೈಲಿನಲ್ಲಿ ಆಗಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ಅವರು ವರದಿ ಸಲ್ಲಿಸಿದ್ದರು. ಇದೀಗ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಅಧಿಕಾರಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಿ ಕಾರಾಗೃಹ ಇಲಾಖೆ ಆದೇಶ ಹೊರಡಿಸಿದೆ.

ಎನ್.‌ ಅಶೋಕ್ (ವಿಜಯಪುರ), ಎಸ್.ಎನ್.ರಮೇಶ್ (ಬಳ್ಳಾರಿ) , ಶಿವಾನಂದ ಕೆ. ಗಾಣಿಗಾರ್ (ಬೆಳಗಾವಿ), ಉಮೇಶ್ ಆರ್.ದೊಡ್ಡಮನಿ (ಮೈಸೂರು), ಲೊಕೇಶ್ ಪಿ. (ಧಾರವಾಡ), ಭೀಮಣ್ಣ ದೇವಪ್ಪ ನೆದಲಗಿ (ಶಿವಮೊಗ್ಗ), ಮಹೇಶ್ ಸಿದ್ದನಗೌಡ ಪಾಟೀಲ್( ಕಲಬುರಗಿ) ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ | ಬೆಳಗಾವಿಯಲ್ಲಿ ನಕಲಿ ಎಸಿಬಿ ಅಧಿಕಾರಿಗಳ ಬಂಧನ

Exit mobile version