ಬೆಂಗಳೂರು: ವಿಧಾನಸೌಧದಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ೧೦.೫ ಲಕ್ಷ ರೂಪಾಯಿಯನ್ನು ವಿಧಾನಸೌಧ ಪೊಲೀಸರು ಜಪ್ತಿ ಮಾಡಿದ್ದಾರೆ. ಪಿಡಬ್ಲ್ಯುಡಿ ಎಂಜಿನಿಯರ್ ಒಬ್ಬರು ದಾಖಲೆ ಇಲ್ಲದೆ ಹಣ (Illegal cash found) ಸಾಗಾಟ ಮಾಡುತ್ತಿದುದು ಕಂಡು ಬಂದಿದ್ದು, ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.
ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ ಅವರಿಂದ ಹಣವನ್ನು ಜಪ್ತಿ ಮಾಡಲಾಗಿದೆ. ಕೆಲಸ ನಿಮಿತ್ತ ಬುಧವಾರ (ಜ.೪) ಸಂಜೆ ವಿಕಾಸಸೌಧಕ್ಕೆ ಹಣ ತಂದಿದ್ದ ಇಂಜಿನಿಯರ್ ಜಗದೀಶ್, ವಿಧಾನಸೌಧ ವೆಸ್ಟ್ ಗೇಟ್ ಬಳಿ ಪ್ರವೇಶಿಸುವಾಗ ಸಿಕ್ಕಿಬಿದ್ದಿದ್ದಾರೆ.
ಇಷ್ಟು ಮೊತ್ತದ ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ತಂದಿದ್ದೇನೆ. ಕೆಲವು ಬಿಲ್ ಕ್ಲಿಯರ್ ಮಾಡಬೇಕಿತ್ತು ಎಂದು ಜಗದೀಶ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ದಾಖಲೆ ಕೇಳಿದರೆ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕೂಡಲೇ ಹಣವನ್ನು ಜಪ್ತಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೋರ್ಟ್‌ಗೆ ಹಣ ನೀಡಿದ್ದಾರೆ. ಕೋರ್ಟ್‌ಗೆ ದಾಖಲೆ ಸಲ್ಲಿಸಿ ಹಣ ಬಿಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ತನಿಖೆ ನಂತರ ತಿಳಿಯಲಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಯಾವ ಉದ್ದೇಶಕ್ಕಾಗಿ ಹಾಗೂ ಯಾರಿಗೆ ಕೊಡಲು ಹಣ ತಂದಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ. ಎಂಜಿನಿಯರ್ ಹೇಳಿಕೆ ಪಡೆದ ಬಳಿಕವಷ್ಟೇ ಗೊತ್ತಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Custodial death | ಬೆಂಗಳೂರಿನಲ್ಲಿ ಲಾಕಪ್ ಡೆತ್: ಠಾಣೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಆರೋಪಿ