ಚಾಮರಾಜನಗರ: ಅಕ್ರಮವಾಗಿ ಅರಣ್ಯ ಪ್ರವೇಶಿಸಿ ವನ್ಯ ಪ್ರಾಣಿಗಳನ್ನು ಬೇಟೆಯಾಡಲು (Illegal Hunting) ಬಂದಿದ್ದ ತಮಿಳುನಾಡು ಬೇಟೆಗಾರರು ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿರುವುದು ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ವೇಳೆ ಬೇಟೆಗಾರನೊಬ್ಬ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತಿಯೊಬ್ಬನ ಶವವೊಂದು ಕಾವೇರಿ ನದಿಯಲ್ಲಿ ಪತ್ತೆಯಾಗಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಕಾವೇರಿ ವನ್ಯಜೀವಿ ವಿಭಾಗದ ಪಾಲಾರ್ ಅರಣ್ಯ ವಲಯದಲ್ಲಿ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ತಮಿಳುನಾಡಿನ ಒಂದಷ್ಟು ಮಂದಿ ಬೇಟೆಯಾಡಲು ಬಂದಿದ್ದಾರೆ. ಆಗ ಈ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಕಣ್ಣಿಗೆ ಬಿದ್ದಿದ್ದಾರೆ. ಇದರಿಂದ ಗಾಬರಿಗೊಂಡ ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಪ್ರಾರಂಭಿಸಿದ್ದಾರೆ. ಇದರಿಂದ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿಯೂ ಪ್ರತಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Karnataka budget 2023 : ರಾಜ್ಯದ ತಲಾ ಆದಾಯ ಮೊದಲ ಬಾರಿಗೆ 3 ಲಕ್ಷ ರೂ.ಗೆ ಏರಿಕೆ
ಗುಂಡಿನ ಚಕಮಕಿ ನಡೆದಿದ್ದರಿಂದ ಈ ವೇಳೆ ಒಬ್ಬ ಬೇಟೆಗಾರ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಆತನ ಶವ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ತಮಿಳುನಾಡಿನ ಮೂಲದ ವ್ಯಕ್ತಿ ಈತ ಎಂದು ಗುರುತಿಸಲಾಗಿದ್ದು, ಯಾರು? ಏನು? ಎಂಬ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಅದೃಷ್ಟವಶಾತ್ ಗುಂಡಿನ ದಾಳಿ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ಈ ಸಂಬಂಧ ಅರಣ್ಯಾಧಿಕಾರಿಗಳಿಂದ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.