ಕಾರವಾರ: ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಅರಣ್ಯದಲ್ಲಿ ಅಡಗಿಸಿಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ (Illegal Goa Liquor) ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಕಾರವಾರದಲ್ಲಿ ನಡೆದಿದೆ.
ತಾಲೂಕಿನ ಹೋಟೆಗಾಳಿ ಗ್ರಾಮದ ಭೀಮಕೋಲ್ ಡ್ಯಾಂ ಸಮೀಪದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ದಾಸ್ತಾನು ಮಾಡಲಾಗಿತ್ತು. ಈ ಕುರಿತು ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಉಪಾಧೀಕ್ಷಕ ಬಸವರಾಜ ಕರವಿನಕೊಪ್ಪ, ನಿರೀಕ್ಷಕ ದಯಾನಂದ, ಉಪನಿರೀಕ್ಷಕ ಎಂ.ಎಂ.ನಾಯ್ಕ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಲಾಗಿದ್ದ ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ. ಇದರಲ್ಲಿ 89.280 ಲೀ ಗೋವಾ ಮದ್ಯ, 305.500 ಲೀ ಗೋವಾ ಪೆನ್ನಿ, 120 ಲೀ ಗೋವಾ ಬಿಯರ್ ಸೇರಿ ಸುಮಾರು 1.88 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Shravanabelagola Swameeji : ಶ್ರೀಗಳ ನಿಧನಕ್ಕೆ ಹೃದಯಾಘಾತ ಕಾರಣವಲ್ಲ, ನಿಜವಾದ ಕಾರಣ ಹೇಳಿದ ಜಿಲ್ಲಾಧಿಕಾರಿ
ಅಕ್ರಮ ಗೋವಾ ಮದ್ಯವನ್ನು ದಾಸ್ತಾನು ಇರಿಸಿದ್ದ ಸಂಬಂಧ ಹೋಟೆಗಾಳಿ ಮೂಲದ ಆನಂದ ಮಾಳ್ಸೇಕರ್, ಸತ್ಯವಿಜಯ ಮಾಳ್ಸೇಕರ್ ಹಾಗೂ ಮನೋಜ ಕೋಳಂಬಕರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ರಮವಾಗಿ ಮದ್ಯ ದಾಸ್ತಾನು ಇರಿಸಿದ್ದ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್; ಭಾರತಕ್ಕೆ ನಾಲ್ಕು ಪದಕ ಖಾತ್ರಿ