ಚಿಕ್ಕಮಗಳೂರು: 1915ರ ಟೆಲಿಸ್ಕೋಪ್ ಅನ್ನು ಕಡೂರಿನಲ್ಲಿ ವ್ಯಾಪಾರಿಯೊಬ್ಬರಿಗೆ ಅಕ್ರಮವಾಗಿ ಮಾರಾಟ (Illegal trade) ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಕೆಂಪರಾಜು ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಇದು ವಿಕ್ಟೋರಿಯಾ ರಾಣಿ ಕಾಲದ ಹಿತ್ತಾಳೆ ಟೆಲಿಸ್ಕೋಪ್ ಎಂದು ಹೇಳಲಾಗಿದ್ದು, ಇದರ ಮಾರಾಟಕ್ಕೆ ಹಲವು ಕಡೆ ಪ್ರಯತ್ನಿಸಿದ್ದ ಎನ್ನಲಾಗಿದೆ. ಅಲ್ಲದೆ, ಈ ಹಿತ್ತಾಳೆ ಟೆಲಿಸ್ಕೋಪ್ ಅನ್ನು ಮೈಸೂರಿನಲ್ಲಿ ವ್ಯಕ್ತಿಯೊಬ್ಬರ ಬಳಿ ಕಡಿಮೆ ಬೆಲೆಗೆ ಖರೀದಿಸಿದ್ದಾಗಿ ಈತ ಹೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಕೆಂಪರಾಜ್‌ಗೆ ಮಾರಾಟ ಮಾಡಿದ ವ್ಯಕ್ತಿ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಡೂರಿನಲ್ಲಿ ಮಾರಾಟ ಯತ್ನ
ಕಡೂರಿನ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಯೊಬ್ಬರನ್ನು ಹೇಗೋ ಸಂಪರ್ಕಿಸಿದ ಕೆಂಪರಾಜು, ತನ್ನ ಬಳಿ ವಿಕ್ಟೋರಿಯಾ ರಾಣಿ ಕಾಲದ ಹಿತ್ತಾಳೆ ಟೆಲಿಸ್ಕೋಪ್ ಇದ್ದು, ಉತ್ತಮ ದರ ಕೊಟ್ಟರೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದಾನೆ. ಅವರ ಬಳಿ ಇದಕ್ಕೆ ಸಾಕಷ್ಟು ಚೌಕಾಸಿ ವ್ಯಾಪಾರ ನಡೆಸಿ ಕೊನೆಗೆ ೧೫ ಲಕ್ಷ ರೂಪಾಯಿಗೆ ಕೊಡಲು ಕೆಂಪರಾಜು ಒಪ್ಪಿಕೊಂಡಿದ್ದಾನೆ.
ಬಲ್ಲ ಮೂಲಗಳಿಂದ ಈ ವಿಷಯ ತಿಳಿದ ಪೊಲೀಸರು, ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ | Samartha Bharata | ಜ.12ರಿಂದ ಸಮರ್ಥ ಭಾರತದಿಂದ ರಾಜ್ಯಾದ್ಯಂತ Be Good Do Good ಅಭಿಯಾನ