ಕಾರವಾರ: ಹೊಸ ವರ್ಷಾಚರಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು ಜನರು ನೂತನ ವರ್ಷವನ್ನು ಬರ ಮಾಡಿಕೊಳ್ಳೋದಕ್ಕೆ ಸಕತ್ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ಮೋಜು, ಮಸ್ತಿಯ ಜೊತೆಗೆ ಮದ್ಯದ ವ್ಯವಸ್ಥೆಯೂ ಜೋರಾಗಿ ನಡೆದಿದೆ. ಅದರಂತೆ ಹೊಸ ವರ್ಷದ ಪಾರ್ಟಿಗಾಗಿ ಗೋವಾದಿಂದ ಅಕ್ರಮವಾಗಿ ಮದ್ಯವನ್ನು (Illicit liquor) ಸಾಗಾಟ ಮಾಡಲು ಮುಂದಾದವರು ಕಾರವಾರದಲ್ಲಿ ಅಬಕಾರಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು, ಇದೀಗ ಇತ್ತ ಗೋವಾ ಮದ್ಯವೂ ಇಲ್ಲ, ಪಾರ್ಟಿಯೂ ಇಲ್ಲ ಎನ್ನುವ ಪರಿಸ್ಥಿತಿ ತಂದುಕೊಂಡಿದ್ದಾರೆ.
ನೆರೆಯ ರಾಜ್ಯ ಗೋವಾದಲ್ಲಿ ಕಡಿಮೆ ಬೆಲೆಗೆ ಮದ್ಯ ಸಿಗುವುದರಿಂದ ಸಾಕಷ್ಟು ಬೇಡಿಕೆ ಹೊಂದಿದೆ. ಜೊತೆಗೆ ಗೋವಾ ಮದ್ಯವನ್ನು ಕರ್ನಾಟಕದಲ್ಲಿ ತಂದು ಮಾರಾಟ ಮಾಡಿದರೆ ಅದರಿಂದ ಸಾಕಷ್ಟು ಲಾಭ ಸಿಗುತ್ತದೆ ಎನ್ನುವುದು ಸಹ ಅಷ್ಟೇ ಸತ್ಯ. ಹೀಗಾಗಿ ಗೋವಾ ಮದ್ಯವನ್ನು ಅಕ್ರಮವಾಗಿ ಕರ್ನಾಟಕಕ್ಕೆ ಸಾಗಿಸುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಗೋವಾ ರಾಜ್ಯಕ್ಕೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಹಗಲು ರಾತ್ರಿ ಅಬಕಾರಿ ಇಲಾಖೆಯ ಸಿಬ್ಬಂದಿ ಅಕ್ರಮ ಮದ್ಯ ಸಾಗಾಟಗಾರರ ಮೇಲೆ ಹದ್ದಿನ ಕಣ್ಣಿರಿಸಿರುತ್ತಾರೆ. ಅದರಂತೆ ತಪಾಸಣೆ ವೇಳೆ ಗುರುವಾರ (ಡಿ.29) ಅಬಕಾರಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಹೊಸ ವರ್ಷಾಚರಣೆ ಬೆನ್ನಲ್ಲೇ ಅಕ್ರಮವಾಗಿ ಗೋವಾ ಮದ್ಯವನ್ನು ಕರ್ನಾಟಕಕ್ಕೆ ಸಾಗಿಸುತ್ತಿದ್ದ ಎರಡು ಪ್ರಕರಣಗಳನ್ನ ಪತ್ತೆ ಮಾಡಿದ್ದು ಭರ್ಜರಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಬೆಳಗಿನ ಜಾವ 2 ಗಂಟೆ ವೇಳೆಗೆ ಲಾರಿಯೊಂದರಲ್ಲಿ ಕರ್ನಾಟಕ ಬೆವರೇಜಸ್ ಕಾರ್ಪೊರೇಷನ್‌ಗೆ ಪರವಾನಗಿ ಹೊಂದಿದ್ದ ಮದ್ಯವನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿದಾಗ ಲಾರಿಯಲ್ಲಿ 400 ಬಾಕ್ಸ್ ಸಕ್ರಮ ಮದ್ಯದ ಜೊತೆ 9 ಬಾಕ್ಸ್ ಅಕ್ರಮ ಗೋವಾ ಮದ್ಯ ಇರಿಸಿರುವುದು ಪತ್ತೆಯಾಗಿದೆ. 400 ಬಾಕ್ಸ್‌ಗಳಲ್ಲಿದ್ದ 4,800 ಬಾಟಲ್‌ಗಳಲ್ಲಿ 3,600 ಲೀಟರ್ ಪರವಾನಗಿ ಹೊಂದಿದ ಕರ್ನಾಟಕ ಮದ್ಯವಿದ್ದು ಅದರ ಮೌಲ್ಯ 1.17 ಕೋಟಿ ರೂಪಾಯಿ ಹಾಗೂ 9 ಬಾಕ್ಸ್‌ಗಳಲ್ಲಿದ್ದ 108 ಬಾಟಲ್‌ಗಳಲ್ಲಿ ಸುಮಾರು 81 ಲೀಟರ್ ಗೋವಾ ಮದ್ಯವಿದ್ದು ಅದರ ಮೌಲ್ಯ ಸುಮಾರು 29 ಸಾವಿರ ರೂ.ಗಳಾಗಿವೆ. ಅದರಂತೆ ಒಟ್ಟು 1,17,85,944 ರೂ. ಮೌಲ್ಯದ 3,681 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದು, ಮದ್ಯ ಸಾಗಾಟಕ್ಕೆ ಬಳಸಿದ್ದ ವಾಹನ ಸೇರಿ ಒಟ್ಟು 1.37 ಕೋಟಿ ರೂ. ಮೊತ್ತದ ಸ್ವತ್ತುಗಳನ್ನು ಅಬಕಾರಿ ಉಪ ಆಯುಕ್ತರಾದ ವನಜಾಕ್ಷಿ ಎಂ ಜಪ್ತಿ ಮಾಡಿದ್ದಾರೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಬೆಳಗಿನ ಜಾವ 3 ಗಂಟೆ ವೇಳೆಗೆ ಗೋವಾದಿಂದ ಹೊನ್ನಾವರಕ್ಕೆ ಹೊರಟಿದ್ದ ಕಾರೊಂದರಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಕಾರಿನ ಡಿಕ್ಕಿಯಲ್ಲಿ ಸುಮಾರು 8 ಸಾವಿರ ರೂ. ಮೌಲ್ಯದ 30 ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲು ಮುಂದಾಗಿದ್ದು ಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿ ಮದ್ಯ ಸಹಿತ 12 ಲಕ್ಷ ರೂ. ಮೌಲ್ಯದ ವಾಹನವನ್ನು ಜಪ್ತಿ ಪಡಿಸಿದ್ದಾರೆ. ಈ ವೇಳೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕುಮಟಾ ಮೂಲದ ಕೃಷ್ಣ ನಾಯ್ಕ, ಗಣೇಶ ಮೇಸ್ತ್ರಿ ಹಾಗೂ ಕೀರ್ತಿ ನಾಯ್ಕ ಎಂಬುವವನ್ನು ವಶಕ್ಕೆ ಪಡೆಯಲಾಗಿದ್ದು ಕಾರವಾರ ಅಬಕಾರಿ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ | Baby Injured | ಮನೆ ಮುಂದೆ ಆಟವಾಡುತ್ತಿದ್ದಾಗಲೇ ಮಗು ತಲೆ ಮೇಲೆ ಬಿತ್ತು ದೊಡ್ಡ ತೆಂಗಿನ ಕಾಯಿ; ವಿಡಿಯೊ ವೈರಲ್
ಅಬಕಾರಿ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಹೊಸ ವರ್ಷಾಚರಣೆ ಅವಧಿಯಲ್ಲಿ ನೆರೆಯ ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಹರಿದು ಬರುತ್ತಿರುವುದು ರಾಜ್ಯದ ಬೊಕ್ಕಸಕ್ಕೆ ಕತ್ತರಿ ಹಾಕುತ್ತಿತ್ತು. ಇದೀಗ ಅಬಕಾರಿ ಅಧಿಕಾರಿಗಳು ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಕ್ರಮ ಮದ್ಯ ಸಾಗಾಟದಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಇದರೊಂದಿಗೆ ಮುಂಬರುವ ಚುನಾವಣೆಯ ಸಂದರ್ಭದಲ್ಲೂ ಇದೇ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Gautam Adani | ನೀವು ಪ್ರಧಾನಿ ಮೋದಿಯವರ ಪರಮಾಪ್ತರೇ? ಎಂಬ ಪ್ರಶ್ನೆಗೆ ಉದ್ಯಮಿ ಗೌತಮ್ ಅದಾನಿ ನೀಡಿದ ಉತ್ತರ..