ಚಿಕ್ಕಮಗಳೂರು: ನಾಡಿನೆಲ್ಲೆಡೆ ಯುಗಾದಿ ಸಂಭ್ರಮ ಮನೆ ಮಾಡಿದ್ದರೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮೇಗೂರಿನ ಹಿತ್ಲೆಗುಳಿ ಗ್ರಾಮದಲ್ಲಿ ಶೋಕಾಚರಣೆ ಕಾಣಿಸಿಕೊಂಡಿದೆ. ಯಾಕೆಂದರೆ, ಇಲ್ಲಿ ವ್ಯಕ್ತಿಯೊಬ್ಬರು ಯುಗಾದಿ ಹಬ್ಬದ ದಿನವೇ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ.
ಗ್ರಾಮದಲ್ಲಿ ನಕಲಿ ಮದ್ಯ ಹಾವಳಿ ಹೆಚ್ಚಾಗಿದ್ದು, ಅದರ ವಿರುದ್ದ ಜನಾಕ್ರೋಶ ಜೋರಾಗಿದೆ. ಆದರೆ, ಅದನ್ನು ತಡೆಯಲು ಸಾಧ್ಯವಾಗದೆ ಜನರು, ಅದರಲ್ಲೂ ಮಹಿಳೆಯರು ಹತಾಶರಾಗಿದ್ದಾರೆ. ಇದೀಗ ಗ್ರಾಮದ ಪುಟ್ಟೇಗೌಡ ಎಂಬವರು ಯುಗಾದಿ ದಿನವೇ ನಕಲಿ ಮದ್ಯ ಸೇವಿಸಿ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶ ಮತ್ತೊಮ್ಮೆ ಭುಗಿಲೆದ್ದಿದೆ.
ಕೊಪ್ಪ ತಾಲೂಕಿನ ಮೇಗೂರಿನ ಹಿತ್ಲೆಗುಳಿ ಗ್ರಾಮದಲ್ಲಿ ಪುಟ್ಟೇಗೌಡ ಸೇರಿ ಕಳೆದ ಕೆಲವು ಸಮಯದಲ್ಲಿ ಮೂವರು ನಕಲಿ ಮದ್ಯಕ್ಕೆ ಬಲಿಯಾದಂತಾಗಿದೆ. ನಕಲಿ ಮದ್ಯ ಕುರಿತು ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಜನರ ಆಕ್ರೋಶ.
ಹೀಗಾಗಿ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಆಗಮಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದು, ಅವರು ಬರುವವರೆಗೆ ಮೃತದೇಹ ವಿಲೇವಾರಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲೇಬೇಕು, ನಮ್ಮ ಊರಿಗೆ ಮದ್ಯ ವ್ಯಾಪಾರ ಬೇಡ ಎಂದು ಜನರು ಘೋಷಣೆಗಳನ್ನು ಕೂಗಿದರು. ಮಹಿಳೆಯರೇ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ. ಪೊಲೀಸರು ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಮತ್ತು ಎಸ್ಪಿ ಬರಲೇಬೇಕು ಎಂದು ಜನರು ಹಠ ಹಿಡಿದಿದ್ದಾರೆ.
ಇದನ್ನೂ ಓದಿ : Road accident : ಮದ್ಯ ಸಾಗಿಸುತ್ತಿದ್ದ ಲಾರಿ ಅದಿರು ಸಾಗಾಟದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಮೃತ್ಯುವಶ