ಬೆಂಗಳೂರು: ಇಲ್ಲಿನ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಸಿ ನಗರ ಕೊಳೆಗೇರಿಯೊಂದರಲ್ಲಿ ಅನೈತಿಕ ಸಂಬಂಧಕ್ಕೆ (Illicit Relationship) ಮಹಿಳೆಯೊಬ್ಬಳು ಬಲಿಯಾಗಿರುವ ಘಟನೆ ಬುಧವಾರ (ಏ.26) ನಡೆದಿದೆ. ಸರವಣ (35) ಮೃತ ಮಹಿಳೆ.
ಸರವಣ ವಯಸ್ಸಿನಲ್ಲಿ ತನಗಿಂತಲೂ 13 ವರ್ಷ ಚಿಕ್ಕವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಗಣೇಶ್ (22) ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸರವಣ, 50 ಸಾವಿರ ರೂ. ಹಣವನ್ನು ನೀಡಿ, ಮನೆಯೊಂದನ್ನು ಮಾಡಿಕೊಟ್ಟಿದ್ದಳು.
ಈ ಮಧ್ಯೆ ಗಣೇಶ್ ಬೇರೆ ಮಹಿಳೆ ಜತೆ ಆತ್ಮೀಯವಾದ ಸಲುಗೆ ಹೊಂದಿರುವುದು ತಿಳಿದು ಗರಂ ಆಗಿದ್ದಳು. ಈ ವಿಚಾರವಾಗಿ ಗಣೇಶ್ ಜತೆ ಮಾತನಾಡಬೇಕೆಂದು ಬುಧವಾರ ಮನೆಗೆ ಕರೆಸಿಕೊಂಡಿದ್ದಳು. ನಾನೇ ಹಣ ಕೊಟ್ಟು, ಮನೆ ಮಾಡಿಕೊಟ್ಟು ನೋಡಿಕೊಳ್ಳುತ್ತಿದ್ದೇನೆ. ನೀನು ಯಾರೊಟ್ಟಿಗೆ ಓಡಾಡಿಕೊಂಡು ಇದ್ದೀಯಾ ಎಂದು ಪ್ರಶ್ನೆ ಮಾಡಿ ಗಲಾಟೆ ಶುರು ಮಾಡಿದ್ದಳು. ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಪಟ್ಟು ಹಿಡಿದಿದ್ದಳು.
ಗಲಾಟೆ ಮಧ್ಯೆ ಗಣೇಶ್, ತಾನು ಸಾಯುತ್ತೇನೆ ಎಂದು ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಈ ವೇಳೆ ಗಣೇಶ್‌ಗೆ ಅಡ್ಡ ಬಂದ ಸರವಣ ಆ ಬಳಿಕ ನಾನೇ ಸಾಯುತ್ತೇನೆ ಎಂದವಳೇ ನೇಣಿನ ಕುಣಿಕೆ ಹಾಕಿಕೊಂಡಿದ್ದಾಳೆ. ಆಗ ಗಣೇಶ್ ಹಗ್ಗ ಎಳೆದು ಚೇರ್ ಒದ್ದಿದ್ದು, ಈ ವೇಳೆ ಹಗ್ಗ ಕತ್ತಿಗೆ ಬಿಗಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: Modi Virtual Samvada: ಉಳಿದ 10 ದಿನದಲ್ಲಿ ಕಾರ್ಯಕರ್ತರು ಏನು ಮಾಡಬಹುದು? ಮೋದಿ ಕೊಟ್ಟ ಸಲಹೆ ಏನು?
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜತೆಗೆ ಆರೋಪಿ ಗಣೇಶ್‌ನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಸರವಣ ಮದುಯಾಗಿ ಇಬ್ಬರು ಮಕ್ಕಳಿದ್ದರೂ ಗಣೇಶ್ ಜತೆಗೆ ಅನೈತಿಕ ಸಂಬಂಧವನ್ನು ಹೊಂದಿದ್ದಳು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯು ಮುಂದುವರಿದಿದೆ.