ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ಹಗರಣದಲ್ಲಿ ಹಣ ಕಳೆದುಕೊಂಡ ಗ್ರಾಹಕರ ಖಾತೆಗೆ ಶೇಕಡವಾರು ಹಣ ಜಮೆ ಮಾಡಲಾಗುತ್ತಿದೆ. ಸರ್ಕಾರ ಜಪ್ತಿ ಮಾಡಿ ಇ-ಹರಾಜು ಮಾಡಿದ್ದ 68 ಕೋಟಿ ರೂ. ಹಣವನ್ನು ಕಾಂಪಿಟೆಂಟ್ ಅಥಾರಿಟಿ ಹಂಚಿಕೆ ಮಾಡುತ್ತಿದೆ.
ಮನ್ಸೂರ್ ಅಲಿಖಾನ್ ಒಡೆತನದ ಐಎಂಎ ಜ್ಯುವೆಲರಿಯಲ್ಲಿ ಚಿನ್ನಾಭರಣಗಳನ್ನು ಸರ್ಕಾರ ಜಪ್ತಿ ಮಾಡಿತ್ತು. ಡೈಮಂಡ್, ಗೋಲ್ಡ್, ಸಿಲ್ವರ್ ಜಪ್ತಿ ಮಾಡಿ ಇ-ಹರಾಜು ಮಾಡಲಾಗಿತ್ತು. ಈ ಪೈಕಿ 68 ಕೋಟಿಗೂ ಅಧಿಕ ಹಣ ಸಂಗ್ರಹವಾಗಿತ್ತು.
ಹಿರಿಯ ಐಎಎಸ್ ಅಧಿಕಾರಿ ಅಮಲನ್ ಆದಿತ್ಯ ಬಿಸ್ವಾಸ್ ನೇತೃತ್ವದ ಕಾಂಪಿಟೆಂಟ್ ಅಥಾರಿಟಿ ಕಳೆದ ಫೆಬ್ರವರಿಯಲ್ಲಿ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ದೇಶದ ಪ್ರತಿಷ್ಠಿತ ಒಂಬತ್ತಕ್ಕೂ ಹೆಚ್ಚು ಜ್ಯುವೆಲರಿ ಕಂಪೆನಿಗಳು ಇ-ಹರಾಜಿನಲ್ಲಿ ಭಾಗವಹಿಸಿದ್ದವು. ಫೆಬ್ರವರಿ 6 ರಂದು ಸೆಬಿ ಸಿ-ಒನ್ ಇ ಪೋರ್ಟಲ್ ಮೂಲಕ ಇ-ಹರಾಜು ಪ್ರಕ್ರಿಯೆ ಮಾಡಲಾಗಿತ್ತು.
ಐಎಂಎ ಹಗರಣದಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಆರೋಪ ಮುಕ್ತ
ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ಹಗರಣದಲ್ಲಿ (IMA Scam) ಭಾಗಿಯಾದ ಆರೋಪಕ್ಕೆ ಗುರಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಆರೋಪ ಮುಕ್ತರಾಗಿದ್ದಾರೆ. ಇವರ ಮೇಲಿನ ಆರೋಪ ಸಾಬೀತಾಗಿಲ್ಲ ಎಂಬ ತನಿಖಾಧಿಕಾರಿ ವರದಿ ಆಧರಿಸಿ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಐಎಂಎ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿತ್ತು. ಈ ಸಂಬಂಧ ವಿಸ್ತೃತ ತನಿಖೆ ನಡೆಸಿದ್ದ ಸಿಬಿಐ, ಅಂದಿನ ಅಪರಾಧ ತನಿಖಾ ದಳದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಹೇಮಂತ್ ನಿಂಬಾಳ್ಕರ್ ವಿರುದ್ಧ ಸಾಮಾನ್ಯ ಇಲಾಖಾ ಕ್ರಮಕ್ಕೆ ಶಿಫಾರಸ್ಸು ಮಾಡಿತ್ತು. ಎಐಎಸ್ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿ ನಿಂಬಾಳ್ಕರ್ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ನಿಂಬಾಳ್ಕರ್ ಅವರು, ಕರ್ನಾಟಕ ಹೈಕೋರ್ಟ್ ತನ್ನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಿರುವುದರಿಂದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು ಎಂದು 2021ರ ಮೇ 18ರಂದು ಪತ್ರ ಬರೆದಿದ್ದರು. ಇದಕ್ಕೆ ರಾಜ್ಯ ಸರ್ಕಾರವು ಕ್ರಿಮಿನಲ್ ಪ್ರಕ್ರಿಯೆ ಮತ್ತು ಇಲಾಖಾ ವಿಚಾರಣೆಯನ್ನು ವಿಭಿನ್ನ ತತ್ವದ ಮೇಲೆ ನಡೆಸಲಾಗುತ್ತದೆ. ಈ ಎರಡನ್ನೂ ಹೋಲಿಕೆ ಮಾಡಬಾರದು. ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಿರುವುದು ಇಲಾಖಾ ವಿಚಾರಣೆಯ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದಿತ್ತು.
ನಿಂಬಾಳ್ಕರ್ ಅವರು ತಮ್ಮ ರಕ್ಷಣೆಗೆ ಮುಂದಾಗದಿದ್ದಾಗ ಅಖಿಲ ಭಾರತ ಸೇವಾ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿ ರಾಜ್ಯ ಸರ್ಕಾರವು ಹೇಮಂತ್ ನಿಂಬಾಳ್ಕರ್ ಮತ್ತು ಇನ್ನೊಬ್ಬ ಐಪಿಎಸ್ ಅಧಿಕಾರಿ ಎಸ್. ಮುರುಗನ್ ವಿರುದ್ಧ ವಿಚಾರಣೆಗಾಗಿ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಂ. ತಿಮ್ಮಯ್ಯ ಅವರನ್ನು ನೇಮಕ ಮಾಡಿತ್ತು. ವಿಚಾರಣಾಧಿಕಾರಿಯು ನಿಂಬಾಳ್ಕರ್ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದರು..ಈ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದ್ದು, ನಿಂಬಾಳ್ಕರ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತ್ತು.
ಮತ್ತೊಬ್ಬ ಅಧಿಕಾರಿಗೆ ರಿಲೀಫ್
ಐಎಂಎ ಬಹುಕೋಟಿ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ ರಿಲೀಫ್ ಸಿಕ್ಕಿದೆ. ಈಗಾಗಲೇ ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತಗೊಳಿಸಿದ್ದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಪ್ರಕರಣ ರದ್ದು ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ