Site icon Vistara News

Free Bus Rides: ತಕ್ಷಣವೇ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿ ಮಾಡಿ; ಸಿಎಂಗೆ ಸಾರಿಗೆ ಯೂನಿಯನ್‌ ಮೊರೆ

siddaramaiah and free bus unioun

ಬೆಂಗಳೂರು: ಈ ಬಾರಿಯ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ನಿಂದ 5 ಗ್ಯಾರಂಟಿಯನ್ನು ಘೋಷಣೆ ಮಾಡಲಾಗಿತ್ತು. ಅದರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವೂ (Free Bus Rides) ಒಂದಾಗಿದೆ. ಈಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವುದರಿಂದ ರಾಜ್ಯದ ಹಲವು ಕಡೆ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಟಿಕೆಟ್‌ಗೆ ಹಣ ನೀಡಲು ನಿರಾಕರಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೀವ್ರ ವಾಗ್ವಾದ, ಗಲಾಟೆಗಳನ್ನೂ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಸಿಬ್ಬಂದಿಗೆ ತೀವ್ರ ತೊಂದರೆಯಾಗುತ್ತಿದೆ. ಶೀಘ್ರ ಪರಿಹಾರವನ್ನು ಕಂಡುಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಸಾರಿಗೆ ಯೂನಿಯನ್ ವತಿಯಿಂದ ಪತ್ರ ಬರೆಯಲಾಗಿದೆ.

ಮನವಿಯ ಸಾರಾಂಶವೇನು?

ಈಗ ಬಸ್‌ನಲ್ಲಿ ಮಹಿಳೆಯರಿಂದ ಹಣ ಪಡೆಯುವುದು ಕಷ್ಟವಾಗುತ್ತಿದೆ. ಮಹಿಳೆಯರು ಹಣ ನೀಡಲು ನಿರಾಕರಿಸುತ್ತಿದ್ದಾರೆ. ಇದರಿಂದ ನಮ್ಮ ಸಿಬ್ಬಂದಿಗೆ ಟಿಕೆಟ್ ಪಡೆಯುವುದೇ ಸಾಹಸವಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಸರ್ಕಾರ ಯೋಜನೆಯನ್ನು ಜಾರಿಗೆ ತರಬೇಕು. ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾರಿಗೆ ಯೂನಿಯನ್ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ. ಜತೆಗೆ ಈ ಯೋಜನೆ ಜಾರಿಯಿಂದ ನಿಗಮಕ್ಕಾಗುವ ಹೊರೆಯನ್ನು ಸರ್ಕಾರ ಭರಿಸಬೇಕು. ಮುಂಗಡವಾಗಿಯೇ ಹಣ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಯೂನಿಯನ್‌ ಮನವಿ ಮಾಡಿದೆ.

ಪತ್ರದಲ್ಲೇನಿದೆ?

ತಾವು ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿರುವುದಕ್ಕೆ ತಮ್ಮನ್ನು ಹಾರ್ದಿಕವಾಗಿ ಅಭಿನಂದಿಸುತ್ತೇವೆ. ತಾವು ಚುನಾವಣಾ ಸಂದರ್ಭದಲ್ಲಿ ಕೊಟ್ಟಿರುವ ಚುನಾವಣಾ ಪ್ರಣಾಳಿಕೆ ಮತ್ತು ಭರವಸೆಗಳು ಜನಮಾನಸವನ್ನು ಹೊಕ್ಕಿ ರಾಜ್ಯದ ಜನತೆಯೂ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಪಕ್ಷಕ್ಕೆ ನಿಚ್ಚಳ ಬಹುಮತವನ್ನು ಕೊಟ್ಟು 5 ವರ್ಷಗಳ ಕಾಲ ಅಧಿಕಾರ ನಡೆಸಲು ಆಶೀರ್ವದಿಸಿದೆ ಎಂದು ನಾವು ಭಾವಿಸುತ್ತೇವೆ.

ಯಾವುದೇ ಸರ್ಕಾರ ಬಂದ ತಕ್ಷಣ, ಅದು ಎಲ್ಲ ಭರವಸೆಗಳನ್ನು ತಕ್ಷಣ ಜಾರಿ ಮಾಡಲು ಸಾಧ್ಯವಿಲ್ಲವೆಂಬುದು ನಮಗೂ ತಿಳಿದ ವಿಷಯವಾಗಿದೆ. ಆದರೂ ಕೂಡ ಕೆಲವು ಭರವಸೆಗಳನ್ನು ಹೆಚ್ಚು ವಿಳಂಬವಿಲ್ಲದೆ ಜಾರಿ ಮಾಡುವುದು ಬಹು ಅವಶ್ಯಕವಾಗಿದೆ. ಉದಾಹರಣೆಗೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಾಹನಗಳಲ್ಲಿ ಉಚಿತ ವಾಹನ ಸೇವೆಯನ್ನು ಕಲ್ಪಿಸುವ ಒಂದು ಅಂಶವಿದೆ. ಸಹಜವಾಗಿಯೇ ಮಹಿಳೆಯರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಕೂಡಲೇ ಈ ಸೌಲಭ್ಯವನ್ನು ಬಯಸುತ್ತಾರೆ. ನಮಗೆ ತಳಮಟ್ಟದಿಂದ ಬಂದಿರುವ ಮಾಹಿತಿಯಂತೆ ಅನೇಕ ಕಡೆ ಮಹಿಳಾ ಪ್ರಯಾಣಿಕರು ಹಣ ಕೊಡದೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕೆಂದು ನಿರ್ವಾಹಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಬಸ್ ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯುತ್ತಿದೆ. ಇದು ಒಳ್ಳೆಯ ಸೂಚನೆಯಲ್ಲ.

ಆದ್ದರಿಂದ ತಾವು ಶೀಘ್ರದಲ್ಲಿಯೇ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ.

ಇದನ್ನೂ ಓದಿ: Free Bus Rides: ನಾನ್ ರೊಕ್ಕ ಕೊಡಂಗಿಲ್ಲ ಅಂದ್ರೆ ಕೊಡಂಗಿಲ್ಲ ಎಂದು ಬಸ್‌ ಟಿಕೆಟ್‌ ಪಡೆಯದೆ ಅಜ್ಜಿ ಕಿರಿಕ್‌!

ಈ ಮೇಲ್ಕಂಡ ತೀರ್ಮಾನವನ್ನು ಜಾರಿ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆಗುವ ಆರ್ಥಿಕ ಹೊರೆಯನ್ನು ಸೂಕ್ತ ಅಂದಾಜು ಮಾಡಿ ನಿಗಮಗಳಿಗೆ ವೆಚ್ಚದ ಮುಂಗಡವನ್ನು ಮಂಜೂರು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಸಾರಿಗೆ ಯೂನಿಯನ್ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

Exit mobile version