Site icon Vistara News

CAPF Exam In Kannada: ಕನ್ನಡದಲ್ಲಿ ಸಿಎಪಿಎಫ್‌ ಪರೀಕ್ಷೆ ಬರೆಯಲು ಅಸ್ತು; ಕೇಂದ್ರ ಐತಿಹಾಸಿಕ ತೀರ್ಮಾನ

CAPF

ನವದೆಹಲಿ/ಬೆಂಗಳೂರು: ಕನ್ನಡದಲ್ಲಿಯೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಯ ಪರೀಕ್ಷೆ ಬರೆಯಲು ಕರ್ನಾಟಕ ಸೇರಿ ದಕ್ಷಿಣ ಭಾರತದಾದ್ಯಂತ ಆಗ್ರಹ ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಕನ್ನಡ ಸೇರಿ 15 ಸ್ಥಳೀಯ ಭಾಷೆಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (CAPF Exam In Kannada)ಯ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ, ಇದು ಐತಿಹಾಸಿಕ ನಿರ್ಧಾರ ಎನಿಸಿದೆ.

ಇನ್ನು ಮುಂದೆ ಸಿಎಪಿಎಫ್‌ ವ್ಯಾಪ್ತಿಗೆ ಬರುವ ಸಿಆರ್‌ಪಿಎಫ್‌, ಗಡಿ ಭದ್ರತಾ ಪಡೆ (BSF), ಸಶಸ್ತ್ರ ಸೀಮಾ ದಳ, ಇಂಡೋ-ಟಿಬೆಟಿಯನ್‌ ಗಡಿ ಪೊಲೀಸ್‌ (ITBP) ಸೇರಿ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಬಹುದಾಗಿದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೂ ಅನುಕೂಲವಾಗಲಿದೆ. ಕೇಂದ್ರ ಸರ್ಕಾರದ ವಿರುದ್ಧ ಹಿಂದಿ ಹೇರಿಕೆಯ ಆರೋಪಗಳು ಕೇಳಿಬರುತ್ತಿರುವ ಹೊತ್ತಿನಲ್ಲಿಯೇ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವುದು ಮಹತ್ವದ ವಿಷಯವಾಗಿದೆ.

ಕೇಂದ್ರ ಗೃಹ ಸಚಿವಾಲಯದ ಆದೇಶ

ಈಗಾಗಲೇ ಸೇನೆಯು ಸಿಆರ್‌ಪಿಎಫ್‌ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ರಾಜ್ಯದಲ್ಲಿನ 466 ಹುದ್ದೆಗಳು ಸೇರಿದಂತೆ ಒಟ್ಟು 9,212 ಕಾನ್ಸ್‌ಟೇಬಲ್‌ (ಟೆಕ್ನಿಕಲ್‌ ಮತ್ತು ಟ್ರೇಡ್ಸ್‌ಮನ್‌) ನೇಮಕಕ್ಕೆ ಸಿಆರ್‌ಪಿಎಫ್‌ ಇತ್ತೀಚೆಗೆ ಅಧಿಸೂಚನೆ (CRPF Recruitment 2023) ಹೊರಡಿಸಿದ್ದು, ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು ಅವಕಾಶ ನೀಡಿದೆ.

ಯಾವ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು?

ಕನ್ನಡ ಸೇರಿ 15 ಪ್ರಾದೇಶಿಕ ಭಾಷೆಗಳಲ್ಲಿ ಸಿಎಪಿಎಫ್‌ ಪರೀಕ್ಷೆಗಳನ್ನು ಬರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕನ್ನಡ, ಉರ್ದು, ತಮಿಳು, ಮಲಯಾಳಂ, ತೆಲುಗು, ಅಸ್ಸಾಮೀಸ್‌, ಬೆಂಗಾಲಿ, ಗುಜರಾತಿ, ಕೊಂಕಣಿ, ಮಣಿಪುರಿ, ಮರಾಠಿ, ಒಡಿಯಾ ಹಾಗೂ ಪಂಜಾಬಿ ಸೇರಿ 15 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ.

ಕರ್ನಾಟಕ ಬಿಜೆಪಿ ಟ್ವೀಟ್

ಈ ಹುದ್ದೆಗಳ ನೇಮಕಕ್ಕೆ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಿತ್ತು. ಆದರೆ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಿರುವಾಗಲೇ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಪ್ರಕಟಿಸಿದೆ. ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಕನ್ನಡ ಭಾಷೆಯಲ್ಲಿಯೂ ಸಿಆರ್‌ಪಿಎಫ್‌ ಪರೀಕ್ಷೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದ್ದರು.

CRPF Recruitment: ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ನೇಮಕಾತಿ ಪರೀಕ್ಷೆ; ಸಿಆರ್‌ಪಿಎಫ್‌ ಸ್ಪಷ್ಟ ನಿಲುವು

ಕಾನ್ಸ್‌ಟೇಬಲ್‌ (ಸಿಟಿ/ಜಿಡಿ) ನೇಮಕಕ್ಕೆ ಈ ಹಿಂದೆ ನಡೆಸಿದ್ದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು ಕೇವಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲಾಗಿತ್ತು. ಇದರಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಭ್ಯರ್ಥಿಗಳ ಭಾಗವಹಿಸುವಿಕೆ “ಸಾಮಾನ್ಯ”ವಾಗಿತ್ತು ಎಂದು ಇದಕ್ಕೂ ಮೊದಲು ಸಿಆರ್‌ಪಿಎಫ್‌ ಸಷ್ಟಪಡಿಸಿತ್ತು.

Exit mobile version