ಬೆಂಗಳೂರು/ಕೊಪ್ಪಳ: ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲೆ ಹಾಗೂ ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿ, ಅರ್ಧ ದಿನ ಕಳೆಯುವಷ್ಟರಲ್ಲೇ ಹಳೇ ಆದೇಶವನ್ನು ರದ್ದುಪಡಿಸಿ, ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ರಾಜ್ಯ ಸರ್ಕಾರವು ಇತ್ತೀಚೆಗೆ ಇಂತಹ ಅನೇಕ ಆತುರದ ನಿರ್ಧಾರವನ್ನು ಪ್ರಕಟಿಸುತ್ತಾ ಬಂದಿದೆ.
ಜನವರಿ 24ರಂದು ಕೊಪ್ಪಳ ಜಿಲ್ಲೆಗೆ ಆನಂದ್ ಸಿಂಗ್ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ವಿಜಯನಗರ ಜಿಲ್ಲೆ ಉಸ್ತುವಾರಿ ವಹಿಸಿ ಸರ್ಕಾರ ಆದೇಶ ನೀಡಿತ್ತು. ಆದರೆ, ಆನಂದ್ ಸಿಂಗ್, ನೂತನ ಜಿಲ್ಲೆ ವಿಜಯನಗರವನ್ನು ವೇಗವಾಗಿ ಅಭಿವೃದ್ಧಿಪಡಿಸಬೇಕಾದ ಅಗತ್ಯವಿರುವ ಹಿನ್ನೆಲೆಯಲ್ಲಿ ತವರು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಜಯನಗರ ಜಿಲ್ಲೆಗೆ ಉಸ್ತುವಾರಿಯನ್ನಾಗಿ ಮಾಡಿ ರಾಜ್ಯ ಸರ್ಕಾರವು ಶನಿವಾರ ಆದೇಶ ಹೊರಡಿಸಿತ್ತು. ವಿಜಯನಗರದ ಉಸ್ತುವಾರಿಯಾಗಿದ್ದ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಕೊಪ್ಪಳ ಉಸ್ತುವಾರಿಯನ್ನಾಗಿ ಮಾಡಿ ಆದೇಶಿಸಲಾಗಿತ್ತು.
ಶನಿವಾರ ಬೆಳಗ್ಗೆಯಷ್ಟೇ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಅದಲು-ಬದಲು ಮಾಡಿ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಆದರೆ, ಸಂಜೆ ವೇಳೆಗೆ ಪುನಃ ಮತ್ತೊಂದು ಆದೇಶವನ್ನು ಹೊರಡಿಸಿದ್ದು, ಹಿಂದಿನ ಆದೇಶವನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ | Multi specialty hospital | ಸಿಎಂಗೆ ವಾರದ ಗಡುವು, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವೆಂದ ಉತ್ತರ ಕನ್ನಡಿಗರು