Site icon Vistara News

Ullal News: ಎಸ್‌ಡಿಪಿಐ ಜತೆ ಒಳ ಒಪ್ಪಂದ; ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರಿಬ್ಬರ ಉಚ್ಚಾಟನೆ

ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಗೆ ಬೆಂಬಲಿಸಿದ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ಜಿಲ್ಲಾಧ್ಯಕ್ಷರ ಆದೇಶದಂತೆ ತಕ್ಷಣದಿಂದ ಪಕ್ಷದ ಚಟುವಟಿಕೆಗಳಿಂದ ಉಚ್ಚಾಟಿಸಲಾಗಿದ್ದು, ಮುಂದಿನ 6 ವರ್ಷಗಳ ಕಾಲ ಪಕ್ಷಕ್ಕೆ ಬರದಂತೆ ನಿರ್ಬಂಧಿಸಲಾಗಿದೆ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್‌ ಪಂಡಿತ್‌ ಹೌಸ್‌ ಹೇಳಿದ್ದಾರೆ.

ಪಂಡಿತ್‌ ಹೌಸ್‌ನ ಚುನಾವಣಾ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ತಲಪಾಡಿ ಗ್ರಾ.ಪಂ.ನ ಒಟ್ಟು ಸದಸ್ಯಬಲ 24 ಇದ್ದು, 13 ಬಿಜೆಪಿ ಬೆಂಬಲಿತರು, 9 ಮಂದಿ ಎಸ್‌ಡಿಪಿಐ ಬೆಂಬಲಿತರು ಹಾಗೂ ಒಬ್ಬರು ಕಾಂಗ್ರೆಸ್‌ ಬೆಂಬಲಿತ ಸದಸ್ಯರಿದ್ದರು. ಬಿಜೆಪಿಯ ಎಲ್ಲಾ ಸದಸ್ಯರು ಸತ್ಯರಾಜ್‌ ಎಂಬುವರನ್ನು ಅಧ್ಯಕ್ಷರಾಗಿ ಮಾಡಲು ಒಮ್ಮತದ ತೀರ್ಮಾನ ಮಾಡಿದ್ದರು. ಆದರೆ, ಎಸ್‌ಡಿಪಿಐನ ಆಸೆ ಆಮಿಷಗಳಿಗೆ ಬಲಿಯಾಗಿ ಮಹಮ್ಮದ್‌ ಫಯಾಝ್‌ ಮತ್ತು ಮಹಮ್ಮದ್‌ ಎಂಬ ಬಿಜೆಪಿ ಬೆಂಬಲಿತ ಇಬ್ಬರು ಪಂಚಾಯಿತಿ ಸದಸ್ಯರು ಅಡ್ಡ ಮತದಾನ ಮಾಡಿ ಎಸ್‌ಡಿಪಿಐ ಗೆಲುವಿಗೆ ಕಾರಣರಾಗಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮೊಹಮ್ಮದ್‌ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಫಯಾಝ್‌ ಮಾತ್ರ ಚುನಾವಣಾ ಕಾರ್ಯಾಲಯದಲ್ಲಿ ಕ್ಷೇತ್ರ ಬಿಜೆಪಿ ಕರೆದಿದ್ದ ಸಭೆಗೆ ಗೈರಾಗಿದ್ದಾರೆ. ಎಸ್‌ಡಿಪಿಐ ಜತೆಗೆ ಒಳ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಸಭೆಗೆ ಅವರು ಗೈರು ಹಾಜರಾಗಿದ್ದಾರೆ. ಬಿಜೆಪಿ ಯಾವುದೇ ಕಾರಣಕ್ಕೆ ಎಸ್‌ಡಿಪಿಐ ಸಿದ್ಧಾಂತವನ್ನು ಒಪ್ಪುವುದಿಲ್ಲ, ಬೆಂಬಲ ಕೂಡ ನೀಡುವುದಿಲ್ಲ. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರನ್ನು ಉಚ್ಚಾಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಹಿಂದುಳಿದ ವರ್ಗ ಬಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ಪಕ್ಷ ದ್ರೋಹ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ 6 ವರ್ಷಗಳ ಕಾಲ ಪಕ್ಷದ ಸಾಮಾನ್ಯ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Gruha Lakshmi : ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ ರಾಹುಲ್‌ ಆಗಮನ, ಸೋನಿಯಾ ಗಾಂಧಿಗೂ ಆಹ್ವಾನ

ಜಿಲ್ಲಾ ಉಪಾಧ್ಯಕ್ಷ ಸಂತೋಷ್‌ ರೈ ಬೋಳಿಯಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಕಾರ್ಯದರ್ಶಿಗಳಾದ ರಣದೀಪ್‌ ಕಾಂಚನ್‌, ಸತೀಶ್‌ ಕುಂಪಲ, ಜಯಶ್ರೀ ಕರ್ಕೇರ, ಹೇಮಂತ್‌ ಶೆಟ್ಟಿ, ನವೀನ್‌ ಪಾದಲ್ಪಾಡಿ, ತಲಪಾಡಿ ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ತಲಪಾಡಿ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಉಪಸ್ಥಿತರಿದ್ದರು.

Exit mobile version