ಗದಗ: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಎಲ್ಲೆಡೆ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಜಿಲ್ಲೆಯ ನರಗುಂದ ಕ್ಷೇತ್ರದಲ್ಲಿ ಸಚಿವ ಸಿ.ಸಿ. ಪಾಟೀಲ್ ಕುಟುಂಬಸ್ಥರು ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದಾರೆ. ಒಂದು ಕಡೆ ಸಿ.ಸಿ. ಪಾಟೀಲ್, ಮತ್ತೊಂದು ಕಡೆ ಅವರ ಪುತ್ರರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ನರಗುಂದ ಕ್ಷೇತ್ರದ ಹೊಳೆ ಮಣ್ಣೂರು, ಗಾಡಗೋಳಿ, ಕುರವಿನಕೊಪ್ಪ, ಬೆನಹಾಳ, ಮೇಲ್ಮಠ, ಹುಲ್ಲೂರು ಗ್ರಾಮದಲ್ಲಿ ಸಚಿವ ಸಿ.ಸಿ. ಪಾಟೀಲ್ ಪ್ರಚಾರ ಮಾಡಿದರು. ಇನ್ನು ಅವರ ಪುತ್ರರಾದ ಮಹೇಶಗೌಡ ಹಾಗೂ ಉಮೇಶಗೌಡ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪ್ರಚಾರ ನಡೆಸಿದರು. ನರಸಾಪೂರ, ಹಾತಲಗೇರಿ, ಲಕ್ಕುಂಡಿ ಗ್ರಾಮದ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ.
ಕುಟುಂಬಸ್ಥರು ನಾಲ್ಕು ತಂಡಗಳನ್ನಾಗಿ ಮಾಡಿಕೊಂಡು ಕಾರ್ಯಕರ್ತರ ಪಡೆಯೊಂದಿಗೆ ಅಖಾಡಕ್ಕೆ ಧುಮುಕಿದ್ದಾರೆ. ಕ್ಷೇತ್ರಾದ್ಯಂತ ಸಿ.ಸಿ ಪಾಟೀಲ್ ಕುಟುಂಬಸ್ಥರ ಪ್ರಚಾರ ಭರಾಟೆ ಕಾರ್ಯ ಬಲು ಜೋರಾಗಿದೆ. ಲೋಕೋಪಯೋಗಿ ಇಲಾಖೆ ಸಚಿವರಾದ ನಂತರ ಕ್ಷೇತ್ರದಲ್ಲಿ ತಂದೆ ಮಾಡಿದ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಮಕ್ಕಳು ಮತ ಕೇಳುತ್ತಿದ್ದಾರೆ.
ಇದನ್ನೂ ಓದಿ | Modi in Karnataka : ನೀವು ಮತ ಹಾಕುವುದು ಸರ್ಕಾರ ರಚನೆಗಲ್ಲ, ರಾಜ್ಯವನ್ನು ದೇಶದಲ್ಲೇ ನಂ. 1 ಮಾಡಲು; ಮೋದಿ ಹೊಸ ವ್ಯಾಖ್ಯಾನ
ಇನ್ನು ಈ ಬಾರಿ ಹೆಚ್ಚಿನ ಮತಗಳಿಂದ ಸಿ.ಸಿ. ಪಾಟೀಲ್ ಅವರು ಜಯಶಾಲಿ ಆಗಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಜನರ ಆಸೆಯಂತೆ ತಂದೆ ಅವರು ಸರ್ಕಾರದಲ್ಲಿ ಉನ್ನತ ಸ್ಥಾನ ಪಡೆದರೆ ಕ್ಷೇತ್ರದ ಅಭಿವೃದ್ಧಿ ನೋಟವೇ ಬದಲಾಗುತ್ತದೆ. ಹೀಗಾಗಿ ಜನರ ಆಶೀರ್ವಾದ ಸದಾ ಸಿ.ಸಿ. ಪಾಟೀಲರ ಮೇಲೆ ಇರಲಿ ಎಂದು ಸಚಿವರ ಮಗ ಮಹೇಶಗೌಡ ಪಾಟೀಲ ಮತದಾರರ ಬಳಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.