Site icon Vistara News

Lok Sabha Election : ಒಂದೇ ದಿನ ಹತ್ತು ಗ್ರಾಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಡಾ. ಸುಧಾಕರ್ ಸಜ್ಜು

K Sudhakar

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದದ ಬಿಜೆಪಿ (ಎನ್​ಡಿಎ) ಅಭ್ಯರ್ಥಿ ಡಾ. ಕೆ ಸುಧಾಕರ್ (D. K Sudhakar) ಅವರು ಗುರವಾರ ಒಂದೇ ದಿನ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಮೂಲಕ ಅವರು ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election) ಮಿಂಚಿನ ಪ್ರಚಾರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅವರು ಭರ್ಜರಿ ಪ್ರಚಾರ ಕಾರ್ಯ ಕೈಗೊಳ್ಳಲು ಮುಂದಾಗಿದ್ದಾರೆ.

ಬೆಳಗ್ಗೆ‌ 8:00 ಗಂಟೆಯಿಂದ ಆರಂಭಗೊಂಡ ಅವರ ಪ್ರಚಾರ ಕಾರ್ಯ ರಾತ್ರಿ 10 ಗಂಟೆಯ ತನಕ ಮುಂದುವರಿಯಲಿದೆ. ಹಳೇಹಳ್ಳಿ, ಶ್ಯಾಂಪುರ, ಗೌಡಗೆರೆ, ಪುರ, ಜರಬಂಡಹಳ್ಳಿ, ಮಿಣಕನಗುರ್ಕಿ, ಮಂಚೇನಹಳ್ಳಿ, ದೊಡ್ಡಪೈಲಗುರ್ಕಿ, ಮಂಡಿಕಲ್ ಮತ್ತು ಅಡ್ಡಗಲ್, ಕಮ್ಮಗುಟ್ಟಹಳ್ಳಿ, ಪರೇಸಂದ್ರ ಮತ್ತು ಅರೂರು ಗ್ರಾಮ ಪಂಚಾಯಿತಿಗಳಲ್ಲಿ ಸುಧಾಕರ್ ಅವರು ಪ್ರಚಾರ ಕಾರ್ಯ ನಡೆಸಲಿದ್ದಾರೆ.

ಗೆದ್ದೇ ಗೆಲ್ಲುವ ಛಲದೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸುಧಾಕರ್ ಅವರು ಸ್ಥಳೀಯ ಕಾರ್ಯಕರ್ತರ ಬಲದೊಂದಿಗೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆರಂಭದಲ್ಲಿ ಭುಗಿಲೆದ್ದಿದ್ದ ಅಸಮಾಧಾನ ಹಾಗೂ ಬೇಸರ ಸಂಪೂರ್ಣ ಶಮನವಾಗಿರುವ ಹಿನ್ನೆಲೆಯಲ್ಲಿ ಅವರು ಉತ್ಸಾಹದಿಂದ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ.

ಮೋದಿ ಅಲೆಯಿಂದಲೇ ಗೆಲುವು

ನರೇಂದ್ರ ಮೋದಿ ಅವರ ಅಲೆಯ ನೆರವಿನಲ್ಲಿ ತಮ್ಮ ಗೆಲವು ನಿಶ್ಚಿತ ಎಂಬುದಾಗಿ ಸುಧಾಕರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳೂ ನೆರವಿಗೆ ನಿಲ್ಲುತ್ತದೆ ಎಂಬುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

ಯಲಹಂಕ ಶಾಸಕ ಹಾಗೂ ಬಿಜೆಪಿ ಮುಖಂಡ ಎಸ್. ಆರ್​ ವಿಶ್ವನಾಥ್ ಅವರು ಸುಧಾಕರ್ ಅವರ ಪರವಾಗಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್​ ಅವರ ಗೆಲುವು ನಿಶ್ಚಿತ ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: Assault Case: ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ್ದಕ್ಕೆ ಜೆಡಿಎಸ್‌ ಗ್ರಾಪಂ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತದೆ. ಯಾವುದೇ ಕಾರಣಕ್ಕೆ ಕಾಂಗ್ರೆಸ್‌ಗೆ ತಲೆ ಎತ್ತಲು ಬಿಡುವುದಿಲ್ಲ. ನಮ್ಮ ಸಮಾಧಾನವನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಪ್ರಯತ್ನಿಸಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮೊಳಗಿನ ಎಲ್ಲ ಗೊಂದಲಗಳನ್ನು ಪರಿಹರಿಸಿಕೊಂಡಿದ್ದೇವೆ. ಗೆಲುವಿಗಾಗಿ ನಮ್ಮ ಕಾರ್ಯಕರ್ತರಲ್ಲಿ ಪಣತೊಡುವಂತೆ ಹೇಳಿದ್ದೇವೆ. ನಾಳೆಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರವಾಸ ಆರಂಭಿಸುತ್ತೇವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಲೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದುವೇ ನಮಗೆ ದೊಡ್ಡ ಶಕ್ತಿ ಎಂಬುದರಲ್ಲಿ ಸಂದೇಹವಿಲ್ಲ ಎಂಬುದಾಗಿ ವಿಶ್ವನಾಥ್ ಅವರು ಬುಧವಾರ ಮಾಧ್ಯಮಗಳ ಜತೆ ಮಾತನಾಡುತ್ತಾ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದರು.

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಪರ ಪ್ರೀತಂಗೌಡ ಪ್ರಚಾರ

ಹಾಸನ: ಹೈಕಮಾಂಡ್ ಸೂಚನೆಗೆ ಮಣಿದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಕೊನೆಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಪ್ರಚಾರ ಆರಂಭಿಸಿದ್ದಾರೆ. ವಿದ್ಯಾನಗರದಲ್ಲಿ ಬುಧವಾರ ಕರಪತ್ರಗಳನ್ನು ಹಂಚುವ ಮೂಲಕ ಪ್ರೀತಂಗೌಡ ಮತಯಾಚನೆ ಮಾಡಿದರು.

ನಂತರ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಅವರು, ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ನರೇಂದ್ರಮೋದಿ ಅವರು ಪ್ರಧಾನಮಂತ್ರಿ ಆಗಬೇಕು ಎಂದು ಪ್ರಚಾರ ಆರಂಭಿಸಿದ್ದೇನೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವ ಮೂಲಕ ಇಡೀ ದೇಶದಲ್ಲಿ 400ಕ್ಕೂ ಹೆಚ್ಚು ಸೀಟ್‌ಗಳನ್ನು ಗೆಲ್ಲಬೇಕು. ಹಿರಿಯರು ನಮಗೆ ಒಂದು ಜವಾಬ್ದಾರಿ ಕೊಟ್ಟಿದ್ದಾರೆ. ನಮ್ಮ ಬೂತ್ ನಂಬರ್ 89 ರಿಂದ ಪ್ರಚಾರ ಆರಂಭಿಸಿದ್ದೇವೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು. ಹಾಸನ ಲೋಕಸಭಾ ಕ್ಷೇತ್ರಕ್ಕೆ 2021 ಬೂತ್ ಬರುತ್ತವೆ. ನಾಳೆ ಸಿಮೆಂಟ್ ಮಂಜು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಲೂರಿನಲ್ಲಿ ಪ್ರಚಾರ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

Exit mobile version