Site icon Vistara News

ರಾಜ್ಯದ ವಿವಿಧೆಡೆ ಕಂಪಿಸಿದ ಭೂಮಿ, ಜನತೆಯಲ್ಲಿ ಆತಂಕ

vijayapura

ಬೆಂಗಳೂರು: ರಾಜ್ಯಾದ್ಯಂತ ಮಳೆ ಹಾಗೂ ರೆಡ್‌ ಅಲರ್ಟ್‌ ಮುಂದುವರಿದಿರುವಂತೆಯೇ ಶನಿವಾರ ವಿವಿಧೆಡೆ ಭೂಕಂಪನದಿಂದ ಜನರಲ್ಲಿ ಆತಂಕ ಮೂಡಿತ್ತು. ಪ್ರಮುಖವಾಗಿ ರಾಜ್ಯದ ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ.

ರಿಕ್ಟರ್‌ ಮಾಪಕದಲ್ಲಿ 3 ರಿಂದ 4.4 ಪ್ರಮಾಣದಲ್ಲಿ ಕಂಪನವಾಗಿದ್ದು, ಕೆಲವು ಕಡೆ ಮನೆ ಬಿರುಕು ಬಿಟ್ಟಿದೆ. ತೀವ್ರ ಹಾನಿಯಾಗಿಲ್ಲವಾದರೂ, ಭೂಮಿ ಕಂಪಿಸಿದ್ದಕ್ಕೆ ಜನರು ಭಯಭೀತವಾಗಿದ್ದಾರೆ.

ವಿಜಯಪುರದಲ್ಲಿ ಕಂಪನ

ಬೆಳ್ಳಂಬೆಳಗ್ಗೆ ವಿಜಯಪುರ ನಗರದ ಜನತೆಗೆ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 6.22 ಕ್ಕೆ ೩ರಿಂದ ೪ ಸೆಕೆಂಡುಗಳ ಕಾಲ ಭೂಮಿ ಕಂಪಿಸಿತು. ಭಾರಿ ಶಬ್ದಕ್ಕೆ ಬೆಚ್ಚಿದ ಜನ ಆತಂಕಗೊಂಡು ಮನೆಯಿಂದ ಹೊರಗೆ ಧಾವಿಸಿದರು.

ಈ ಹಿಂದೆಯೂ ಹಲವಾರು ಬಾರಿ ಈ ರೀತಿಯ ಕಂಪನದ ಅನುಭವ ಆಗಿದ್ದು, ಕಂಪನದ ತೀವ್ರತೆ ಕುರಿತು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ. ಕಳೆದ ಮೂವತ್ತು ವರ್ಷದ ಇತಿಹಾಸದಲ್ಲೇ ಇಷ್ಟು ಸದ್ದು ಆಗಿರಲಿಲ್ಲ ಎಂದು ಕೆಲವರು ಹೇಳಿದ್ದಾರೆ. ವಿಜಯಪುರದ ನಗರದ ರೇಲ್ವೆ ಸ್ಟೇಷನ್, ಗೋಳಗುಮ್ಮಟ, ಗ್ಯಾಂಗಬಾವಡಿ, ಆಶ್ರಮ ಕಾಲೋನಿ, ಫಾರೇಖ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿತು. ರಿಕ್ಟರ್ ಮಾಪಕದಲ್ಲಿ 4.9 ತೀರ್ವತೆ ದಾಖಲಾಗಿದೆ.

ವಿಜಯಪುರ, ಇಂಡಿ, ಸೊಲ್ಲಾಪುರ, ಜಮಖಂಡಿ, ಬಾಗಲಕೋಟೆ, ಮುಂಬೈ, ಪುಣೆ ಭಾಗಗಳಲ್ಲಿ ಭೂಕಂಪನದ ತೀವ್ರತೆ ದಾಖಲಾಗಿದೆ. 6.22ರ ಭೂಕಂಪನದ ಕೇಂದ್ರ ಸ್ಥಾನ ಮಹಾರಾಷ್ಟ್ರದ ಸಾಂಗಲಿಯಾದರೆ, 6.24ರ ಭೂಕಂಪನದ ಕೇಂದ್ರ ಮಹಾರಾಷ್ಟ್ರದ ಸೊಲ್ಲಾಪುರವಾಗಿದೆ. ಜನತೆ ಮನೆ ಮತ್ತು ಅವರ ಬೀದಿಗಳಲ್ಲಿ ಅಳವಡಿಸಲಾದ ಸಿಸಿಟಿವಿಗಳಲ್ಲಿ ದಾಖಲಾಗಿದೆ. ಭೂಕಂಪನದಿಂದಾಗಿ ವಿದ್ಯುತ್ ತಂತಿಗಳು ಅಲುಗಾಡಿದ್ದು ಸಹ ಕಂಡುಬಂದಿದೆ.

ಭೂಕಂಪನದ ವಿಚಾರ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಸಿದ್ಧರಾಮ‌ ಭೋಸಗಿ ವಿವಿಧ ಬಡಾವಣೆಗಳಿಗೆ ಭೇಟಿ ಹಾನಿ ಕುರಿತಂತೆ ಮಾಹಿತಿ ಪಡೆದರು. ಭೂಕಂಪನದ ಕೇಂದ್ರ ಸ್ಥಾನವಾದ ಕನ್ನೂರ ಗ್ರಾಮಕ್ಕೂ ಭೇಟಿ, ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

ಇದನ್ನೂ ಓದಿ | Earthquake In Karnataka | ಕೊಡಗಿನಲ್ಲಿ ಮತ್ತೆ ನಡುಗಿದ ಭೂಮಿ: ಮಧ್ಯರಾತ್ರಿ ಭೂಕಂಪನ

ಬಾಗಲಕೋಟೆಯಲ್ಲಿ ಕಂಪನ

ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಬೆಳಗ್ಗೆ ೬:೧೫-೬:೩೦ರ ವೇಳೆ ಭೂಕಂಪನದ ಅನುಭವವಾಗಿದೆ. ೪-೫ ಸೆಕೆಂಡ್ ಗಳಷ್ಟು ಭೂಮಿ ಕಂಪಿಸಿದ್ದು, ತೇರದಾಳ ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿ ಭೂಕಂಪನದ ಅನುಭವ ಹೆಚ್ಚಾಗಿದೆ. ಮನೆಯ ಪಾತ್ರ ಪಗಡಿಗಳು ಅಲುಗಾಡಿದ ಶಬ್ದ ಕೇಳಿಬಂದಿದೆ ಎಂದು ಪಾಲಿಕೆ ಸದಸ್ಯ ಫಜಲ್‌ ಅತರಾವುತ ಹೇಳಿದ್ದಾರೆ.…

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಹಾಗೂ ಜಮಖಂಡಿ ನಗರದ ಹುಡ್ಕೊ ಕಾಲನಿ ಬಳಿ ಭೂಮಿ ಕಂಪಿಸಿದೆ. 2-3 ಸೆಕೆಂಡ್‌ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಕುರಿತು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಲಾಗಿದೆ ಎಂದು ಡಿಸಿಪಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಭೂ ಕಂಪನದ ಅನುಭವವಾಗಿದೆ.

ಬೆಳಗಾವಿಯಲ್ಲಿ ಕಂಪನ

ಬೆಳಗ್ಗೆ ೬:೪೫ ರ ಸುಮಾರಿಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಭೂಕಂಪನದ ಅನುಭವ ಆಗಿದೆ.‌ ಗ್ರಾಮದ ಜನ ನಿತ್ಯಕ ಕೆಲಸ ಕಾರ್ಯ ಆರಂಭಿಸುವ ವೇಳೆಗೆ ಭೂಮಿ ನಡುಗಲು ಶುರುವಾಗಿದೆ. ಭಯಭೀತರಾಗಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಗ್ರಾಮದ ಕೆಲ ಮನೆಗಳು ಬಿರುಕು ಬಿಟ್ಟಿವೆ. ಈ ಹಿಂದೆ ಎಂದೂ ಗ್ರಾಮದಲ್ಲಿ ಈ ರೀತಿ ಆಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಶಿರಹಟ್ಟಿ ಗ್ರಾಮಕ್ಕೆ ಅಥಣಿ ತಹಶೀಲ್ದಾರ್ ಸುರೇಶ ಮುಂಜಿ, ಅಥಣಿ ಡಿವೈಎಸ್‌ಪಿ ಎಸ್. ವಿ. ಗಿರೀಶ್ ಹಾಗೂ ಸಿಪಿಐ ಬಸನಗೌಡ ಪಾಟೀಲ್, ಪಿಎಸ್‌ಐ ಕುಮಾರ್ ಹಾಡಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಪಚಾಯತ್‌ನಲ್ಲಿ ಜನರೊಂದಿಗೆ ಸಭೆ ನಡೆಸಿದ ಅಧಿಕಾರಗಳು, ರಿಕ್ಟರ್ ಮಾಪನಲ್ಲಿ ಮೂರಕ್ಕಿಂತ ಕಡಿಮೆ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಹೆದರುವುದು ಬೇಡ ಎಂದು ಮನವಿ ಮಾಡಿದರು. ಇಂತಹ ಘಟನೆಗಳು ನಡೆದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ತಹಶೀಲ್ದಾರ್ ಸುರೇಶ್ ಮುಂಜಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ | ವಿಜಯಪುರದಲ್ಲಿ ಮತ್ತೊಮ್ಮೆ ಭೂಕಂಪನ: ನನಗೂ ಅನುಭವವಾಯಿತು ಎಂದ ಎಂ.ಬಿ.ಪಾಟೀಲ್‌

Exit mobile version