ಬೆಂಗಳೂರು: ಹಾಲಿನ ಪ್ರೋತ್ಸಾಹ ಧನ ಲೀಟರ್‌ಗೆ 1.50 ರೂಪಾಯಿ ಕಡಿತ ಮಾಡಿ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟವು (Bamul) ಆದೇಶವನ್ನು ಹೊರಡಿಸಿದೆ. ಈ ಮೂಲಕ ಬೇಸಿಗೆಯಲ್ಲಿ ಕೊಟ್ಟಿದ್ದ ಆಫರ್ ಮಳೆಗಾಲಕ್ಕೆ ಮುಗಿದಂತೆ ಆಗಿದೆ.
ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರೂಪಾಯಿ ವಿಶೇಷ ಪ್ರೋತ್ಸಾಹ ಧನವನ್ನು ಘೋಷಿಸಲಾಗಿತ್ತು. ಮೇವು ಸೇರಿದಂತೆ ಇನ್ನಿತರ ಸಮಸ್ಯೆಗಳು ರೈತರಿಗೆ ಭಾದಿಸದಿರಲಿ ಎಂಬ ಕಾರಣಕ್ಕೆ ಪ್ರೋತ್ಸಾಹ ಧನವನ್ನು ನೀಡಿ ಆದೇಶಿಸಲಾಗಿತ್ತು. ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಏ. 1ರಿಂದ ಮೇ 31 ರವರೆಗೆ ವಿಶೇಷ ಪ್ರೋತ್ಸಾಹ ಧನವನ್ನು ನೀಡಿತ್ತು.
ಈಗ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವುದಲ್ಲದೆ, ಹಸಿರು ಮೇವಿನ ಲಭ್ಯತೆಯೂ ಸಹ ಸಾಕಷ್ಟು ಪ್ರಮಾಣದಲ್ಲಾಗಿದೆ. ಹೀಗಾಗಿ ಹಸಿರು ಮೇವಿನ ಸಮಸ್ಯೆ ಬಗೆಹರಿದಿದ್ದು, ಹಾಲು ಉತ್ಪಾದನೆಯಲ್ಲೂ ಹೆಚ್ಚಳವಾಗುತ್ತಿದೆ. ಈ ಕಾರಣಕ್ಕಾಗಿ ಪ್ರೋತ್ಸಾಹ ಧನ ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Weather Report: ಇನ್ನೆರಡು ದಿನ ಮಳೆನಾಡಾಗಲಿದೆ ಮಲೆನಾಡು; ರಾಜ್ಯದ ಎಲ್ಲೆಲ್ಲಿದೆ ವರ್ಷಧಾರೆ?
ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿ ದಿನ 13.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಈಗ 16 ಲಕ್ಷ ಲೀಟರ್‌ಗೆ ಹಾಲು ಉತ್ಪಾದನೆ ತಲುಪಿದೆ. ದಿನದಲ್ಲಿ ಸುಮಾರು 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು, ಇದರಿಂದಾಗಿ ಲೀಟರ್‌ಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನದಲ್ಲಿ 1.50 ರೂಪಾಯಿ ಕಡಿತ ಮಾಡಲಾಗಿದೆ.