Site icon Vistara News

Rain News | ನಿಲ್ಲದ ಮಳೆ ಗೋಳು, ಜಲಾವೃತ ಪ್ರದೇಶಗಳು ಸಾಲು ಸಾಲು

ಜಲಾವೃತ

ಬೆಂಗಳೂರು: ರಾಜ್ಯದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ವಿವಿಧೆಡೆ ಭಾರಿ ಅವಾಂತರವನ್ನು ಸೃಷ್ಟಿಸಿದೆ. ಮಳೆಯಿಂದ ನದಿ ನೀರು ಅಪಾಯದ ಮಟ್ಟ ತಲುಪುತ್ತಿರುವುದರಿಂದ ಸೇತುವೆಗಳು ಜಲಾವೃತವಾಗಿವೆ. ಹಲವೆಡೆ ಗುಡ್ಡ, ರಸ್ತೆಗಳು ಕುಸಿದು, ವಿದ್ಯುತ್‌ ಕಂಬಗಳು, ಮರಗಳು ನೆಲಕಚ್ಚಿದ್ದು, ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಹಾಗಾಗಿ ಮಳೆ ಗೋಳು ಇನ್ನೂ ಮುಗಿದಿಲ್ಲ ಎನ್ನುವಂತಾಗಿದೆ.

ಚಿಕ್ಕಮಗಳೂರಿನ ಹೇರೂರಿಲ್ಲಿ ಭೂಕುಸಿತ

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮದಲ್ಲಿ ಭಾರಿ ಮಳೆಯಿಂದ ಮತ್ತೊಂದು ಕಡೆ ರಸ್ತೆ ಕುಸಿತವಾಗಿದೆ. ಕಳೆದ ಎರಡು ವರ್ಷಗಳ ಹಿಂದೆಯೂ ಇದೇ ಜಾಗದಲ್ಲಿ ಭೂಮಿ ಕುಸಿದಿತ್ತು. ಇದೀಗ ಮತ್ತೆ ರಸ್ತೆ ಕುಸಿತವಾಗಿದ್ದರಿಂದ ಉತ್ತಿನಗದ್ದೆ-ಶುಂಠಿಕೂಡಿಗೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪರದಾಡುವಂತಾಗಿದೆ.

ಉಡುಪಿಯಲ್ಲಿ ಹಲವು ಗ್ರಾಮಗಳು ಜಲಾವೃತ

ಉಡುಪಿ: ಜಿಲ್ಲೆಯಲ್ಲಿ ಮಳೆಯ ಅಬ್ಬರದಿಂದ ಹಲವು ಗ್ರಾಮಗಳು ಜಲಾವೃತವಾಗಿವೆ. ಬೈಂದೂರು ತಾಲೂಕಿನ ತಗ್ಗರ್ಸೆ, ಉದ್ದಾಬೆಟ್ಟು, ಪಡುಕೋಣೆ ಹಾಗೂ ನಾಡ ಗ್ರಾಮ ನಾವುಂದ, ಸಾಲ್ಬುಡ, ಕುದ್ರು ಗ್ರಾಮದ ಜನರು ನೆರೆ ಸೃಷ್ಟಿಯಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ನೆರೆ ಹಾವಳಿ ಪ್ರದೇಶದ ಜನರು ಹಾಗೂ ಜಾನುವಾರುಗಳನ್ನು ರಕ್ಷಿಸಿದ್ದಾರೆ. ಕುದ್ರು ಮತ್ತು ಸಾಲ್ಬುಡ ಪ್ರದೇಶದಲ್ಲಿ 100 ಮನೆಗಳು ಜಲಾವೃತವಾಗಿದ್ದು, ಬಂಟ್ವಾಡಿ ಕಿಣಿ ಅಣೆಕಟ್ಟಿನಿಂದ ನೀರು ಬಿಡುಗಡೆಯಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಭೂ ಕುಸಿತವಾಗಿ ತಿಮ್ಮಯ್ಯ ಎಂಬುವವರ ಮನೆ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಆತಂಕ ಎದುರಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃಷಿ ಬೆಳೆಗಳಿಗೆ ನುಗ್ಗಿದ ನೀರು

ಹಾವೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೃಷಿ ಬೆಳೆಗಳು ಜಲಾವೃತವಾಗಿವೆ. ಹಾನಗಲ್ ತಾಲೂಕಿನ ಹೆರೂರ ಗ್ರಾಮದಲ್ಲಿ ಚೆಂಡು ಹೂವಿನ ಗಿಡಗಳು ಜಲಾವೃತವಾಗಿ ಬೆಳೆ ಹಾನಿ ಸಂಭವಿಸಿದೆ. ನಿರಂತರ ಮಳೆಗೆ ವಿವಿಧೆಡೆ ಹೊಲಗದ್ದೆಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದೆ.

ಗದಗದಲ್ಲಿ ಬೆಳೆಗಳಿಗೆ ಹಳದಿ ರೋಗ

ಗದಗ: ಜಿಲ್ಲೆಯಲ್ಲೂ ವರುಣನ ಆರ್ಭಟ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆಗೆ ಜನ ಹೈರಾಣಾಗಿದ್ದಾರೆ. ಗದಗ, ಗಜೇಂದ್ರಗಡ, ರೋಣ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ ಭಾರಿ ಮಳೆ ಆಗುತ್ತಿದೆ. ಕೆಲವು ಬೆಳೆಗಳು ಹಳದಿ ರೋಗಕ್ಕೆ ತುತ್ತಾಗಿ ನಾಶವಾಗುತ್ತಿವೆ. ಆದರೆ, ಹೊಲಗಳಿಗೆ ತೆರಳಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಹಳ್ಳಕ್ಕೆ ಸೇತುವೆ ನಿರ್ಮಿಸಲು ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಮನವಿ

ಹೊನ್ನಳ್ಳಿ ಗ್ರಾಮದ ಹಳ್ಳದ ಎದುರು ನಿಂತು ಸಮಸ್ಯೆ ಹೇಳಿಕೊಂಡಿರುವ ತುಳಸಿ ಗೌಡ.

ಕಾರವಾರ: ನಿರಂತರ ಮಳೆಯಿಂದ ಹಳ್ಳದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎಂದು ಅಂಕೋಲಾದ ಹೊನ್ನಳ್ಳಿ ಗ್ರಾಮದ ನಿವಾಸಿ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಮನವಿ ಮಾಡಿದ್ದಾರೆ. ಮನೆ ಎದುರಿನ ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಓಡಾಟಕ್ಕೆ ತೊಂದರೆಯಾಗಿರುವುದರಿಂದ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಕೈಮುಗಿದು ಕೇಳಿಕೊಂಡಿದ್ದು, ಮುಖ್ಯಮಂತ್ರಿಯವರು ಶೀಘ್ರ ಪರಿಹಾರ ಮಾಡುವಂತೆ ಕೋರಿದ್ದಾರೆ.

ಕಾರವಾರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಕಾರವಾರದಲ್ಲಿ ಸುರಿದಿದೆ. ಕಾರವಾರ ತಾಲೂಕಿನ ಚೆಂಡಿಯಾದಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ KSNDMC, ಜುಲೈ 7ರ ಬೆಳಗ್ಗೆ 8:30ರಿಂದ ಜುಲೈ 8ರ ಬೆಳಗ್ಗೆ 8:30ರ ಅವಧಿಯಲ್ಲಿ ಚೆಂಡಿಯಾದಲ್ಲಿ 260 ಮಿಮೀ ಮಳೆ ದಾಖಲೆಯಾಗಿದ್ದು, ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.

ಉಕ್ಕಡಗಾತ್ರಿ ಕ್ಷೇತ್ರ ಸಂಪರ್ಕ ರಸ್ತೆ ಮುಳುಗಡೆ

ದಾವಣಗೆರೆ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿದೆ. ಹರಿಹರದ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ದೇವಸ್ಥಾನದ ಬಳಿ ತುಂಗಾಭದ್ರ ನೀರು ನುಗಿದ್ದರಿಂದ ಸ್ನಾನಘಟ್ಟ, ಜವಳಘಟ್ಟ, ಕೆಲ ಅಂಗಡಿಗಳು ಮುಳುಗಡೆಯಾಗಿವೆ. ಅದೇ ರೀತಿ ನಂದಿಗುಡಿ ಕಡೆಯಿಂದ ಉಕ್ಕಡಗಾತ್ರಿಗೆ ಬರುವ ಸಂಪರ್ಕ ರಸ್ತೆ ಮುಳುಗಡೆಯಾಗಿದ್ದು, ಶ್ರೀ ಕ್ಷೇತ್ರಕ್ಕೆ ಬರುವವರು ಪರ್ಯಾಯ ಮಾರ್ಗವಾಗಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿದ್ದು, ಗ್ರಾಮೀಣ ಭಾಗದಲ್ಲಿ 6 ಮನೆಗಳು ಕುಸಿತವಾಗಿವೆ.

ದಕ್ಷಿಣ ಕನ್ನಡದಲ್ಲಿ ರೆಡ್‌ ಅಲರ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆಗೆ ಮಂಗಳೂರು ಹೊರವಲಯದ ಕಣ್ಣೂರು ಬಳಿ ಎರಡು ಮನೆಗಳ ಮೇಲೆ ಗುಡ್ಡ ಕುಸಿದಿದ್ದು, ಹತ್ತಾರು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಭಾರಿ ಪ್ರಮಾಣದ ನೀರಿನ ಹರಿವಿನಿಂದ ಕುಸಿದ ಗುಡ್ಡ ಕುಸಿದಿದ್ದರಿಂದ ಏಳು ಮನೆಗಳ ಜನರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಮಂಗಳೂರು ಹೊರವಲಯದ ಕಣ್ಣೂರು ಬಳಿ ಗುಡ್ಡ ಕುಸಿತವಾಗಿರುವುದು.

ನದಿ ಪಾತ್ರದ ನಿವಾಸಿಗಳಿಗೆ ಸಂಕಷ್ಟ

ಉತ್ತರ ಕನ್ನಡ: ಕರಾವಳಿ ಜಿಲ್ಲೆಯಲ್ಲಿ ರೆಡ್‌ ಅಲರ್ಟ್ ಮುನ್ಸೂಚನೆ ಬೆನ್ನಲ್ಲೇ ತಡರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ರಾತ್ರಿಯಿಡೀ ಎಡೆಬಿಡದೇ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ನದಿ ಪಾತ್ರದ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ.

ಎರಡು ದಿನಗಳ ಕಾಲ ಭಾರಿ ಮಳೆಯ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲೆಯ ಕರಾವಳಿಯ ಎಲ್ಲ ತಾಲೂಕುಗಳು ಹಾಗೂ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ ತಾಲೂಕುಗಳ ಎಲ್ಲ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಶುಕ್ರವಾರ ರಜೆ ಘೋಷಿಸಿದ್ದಾರೆ.

ಜಿಲ್ಲೆಯ ಪ್ರಮುಖ ನದಿಗಳಾದ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ಸೇರಿ ಹಲವು ನದಿಗಳು ಮೈದುಂಬಿ ಹರಿಯುತ್ತಿದ್ದು, ಕುಮಟಾ ತಾಲೂಕಿನ ಊರುಕೇರಿ, ಬಡಗಣಿ, ಹೆಗಡೆ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಹೊನ್ನಾವರ ತಾಲೂಕಿನ ಗುಂಡಬಾಳ, ಹಡಿನಬಾಳ ಸೇರಿ ಹಲವೆಡೆ ಮನೆ ಹಾಗೂ ತೋಟಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರವೂ ರೆಡ್ ಅಲರ್ಟ್ ಮುನ್ಸೂಚನೆ ಹಿನ್ನೆಲೆಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಅಗತ್ಯವಿರುವಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಆಯಾ ಪಂಚಾಯಿತಿ ವ್ಯಾಪ್ತಿಯ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಜಿಲ್ಲೆಯ ಕುಮಟಾ, ಹೊನ್ನಾವರದಲ್ಲಿ ಮಳೆ ಅಬ್ಬರಿಸಿದ್ದು, ಬಡಗಣಿ, ಮಾಸ್ಕೇರಿ, ಕೆಕ್ಕಾರ್, ಬಾಸ್ಕೇರಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೋಟ್ ಮೂಲಕ ಜನರನ್ನು ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗುತ್ತಿದ್ದು, ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಎಸ್.ಡಿ.ಆರ್.ಎಫ್ ತಂಡದಿಂದ ನೆರೆ ಸಂತ್ರಸ್ತರ ರಕ್ಷಣೆ ಮಾಡಲಾಗುತ್ತಿದೆ.

ಇನ್ನು ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಬಳಿ ಹೆದ್ದಾರಿ ಮೇಲೆ ಅಪಾರ ಪ್ರಮಾಣದ ಹಳ್ಳದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಬಂದ್‌ ಆಗಿದೆ. ಕಾರವಾರದಿಂದ ಮಂಗಳೂರು, ಹುಬ್ಬಳ್ಳಿ, ಶಿರಸಿ, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್‌ ಆಗಿದೆ. ಈ ಹಿನ್ನೆಲೆಯಲ್ಲಿ ಕಾರವಾರ ಭಾಗದಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಬೆಳಗ್ಗೆ ಕೆಲಸಕ್ಕೆ ತೆರಳುವ ನೌಕರರು, ಸಿಬ್ಬಂದಿ ಪರದಾಡಿದರು.

ವಿವಿಧೆಡೆ ಕಳೆದ ಒಂದು ವಾರದಿಂದ ಸುರಿದ ಮಳೆ ವಿವರ

ಕಳೆದ ಒಂದು ವಾರದಲ್ಲಿ ಉಡುಪಿ ಜಿಲ್ಲೆಯಲ್ಲಿ ೭೦೧ ಮಿ.ಮೀ., ದಕ್ಷಿಣ ಕನ್ನಡ ೬೪೯ ಮಿ.ಮೀ. , ಉತ್ತರ ಕನ್ನಡ ೪೧೪ ಮಿ.ಮೀ., ಕೊಡಗು ೩೮೪ ಮಿ.ಮೀ., ಶಿವಮೊಗ್ಗ ೩೨೭ ಮಿ.ಮೀ., ಚಿಕ್ಕಮಗಳೂರು ೨೬೩ ಮಿ.ಮೀ., ಹಾಸನ ೧೦೦ ಮಿ.ಮೀ., ಬೆಳಗಾವಿ ೬೭ ಮಿ.ಮೀ. ಮಳೆಯಾಗಿದ್ದು, ಮುಂದಿನ ೩ರಿಂದ ೫ ದಿನಗಳವರೆಗೆ ಇದೇ ಪ್ರಮಾಣದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೀದರ್‌ ೫೮ ಮಿ.ಮೀ., ಕಲಬುರಗಿ ೩೬, ಹಾವೇರಿ ಜಿಲ್ಲೆಯಲ್ಲಿ ೫೮ ಮಿ.ಮೀ. ಮಳೆಯಾಗಿದ್ದು, ಮುಂದಿನ ಮೂರು ದಿನಗಳವರೆಗೆ ಇದೇ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಹಾವೇರಿ ಜಿಲ್ಲೆಯಲ್ಲಿ ೫೮ ಮಿ.ಮೀ. ಮಳೆಯಾಗಿದ್ದು, ಮುಂದಿನ ೩ ರಿಂದ ೫ ದಿನಗಳ ವರೆಗೆ ಭಾರಿ ಮಳೆಯಾಗಲಿದ್ದು, ಮೈಸೂರು ೫೩ ಮಿ.ಮೀ. ಬೆಂಗಳೂರು ನಗರದಲ್ಲಿ ೧೫ ಮಿ.ಮೀ. ಮಳೆಯಾಗಿದೆ.

ಇದನ್ನೂ ಓದಿ | Rain News | ನಿಲ್ಲದ ಧಾರಾಕಾರ ಮಳೆ; ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ, ನೂರಾರು ಎಕರೆ ಬೆಳೆ ಜಲಾವೃತ

Exit mobile version