Site icon Vistara News

ಐಎನ್‌ಎಸ್‌ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಅಗ್ನಿ ಅವಘಡ; ಬೆಂಕಿ ನಂದಿಸಿದ ಸಿಬ್ಬಂದಿ

ಐಎನ್‌ಎಸ್‌ ವಿಕ್ರಮಾದಿತ್ಯ

ಕಾರವಾರ: ತಾಲೂಕಿನ ಕದಂಬ ನೌಕಾನೆಲೆಯ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಲ್ಲಿದ್ದ ದೇಶದ ಪ್ರತಿಷ್ಠಿತ ಯುದ್ಧವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬುಧವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ ಎಂದು ಭಾರತೀಯ ನೌಕಾಸೇನೆ ಮಾಹಿತಿ ನೀಡಿದೆ.

ಯುದ್ಧನೌಕೆಯಲ್ಲಿ ಅಳವಡಿಸಲಾದ ಅಗ್ನಿಶಾಮಕ ವ್ಯವಸ್ಥೆಯ ಸಹಕಾರದಿಂದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 47,000 ಟನ್ ತೂಕದ ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆ, ಅದರ ಮರುಹೊಂದಾಣಿಕೆ ಕಾರ್ಯದ ನಂತರ ಸಮುದ್ರದಲ್ಲಿ ನಿಗದಿತ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ವೇಳೆ ಸಮುದ್ರದಲ್ಲಿ ಕೆಲವೊಂದು ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದಾಗ ಈ ಅಗ್ನಿ ಅವಘಡ ಉಂಟಾಗಿದೆ. ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತನಿಖಾ ಸಮಿತಿಗೆ ನೌಕಾಪಡೆ ಆದೇಶಿಸಿದೆ.

ಈ ಯುದ್ಧ ನೌಕೆಯನ್ನು 2014ರ ಜನವರಿಯಲ್ಲಿ ರಷ್ಯಾದಿಂದ ಭಾರತ ಖರೀದಿಸಿತ್ತು. ಇದು ಸದ್ಯ ಕಾರವಾರದ ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಭಾರತೀಯ ನೌಕಾಪಡೆಯ ಅತಿದೊಡ್ಡ ಮತ್ತು ಭಾರವಾದ ಯುದ್ಧ ನೌಕೆಯಾಗಿದೆ.

ಇದನ್ನೂ ಓದಿ | ಕಾರವಾರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ವಶ

Exit mobile version