ಬೆಂಗಳೂರು: ರಾಜಧಾನಿಯಲ್ಲಿ ಸುಮಾರು ೨೫ಕ್ಕೂ ಅಧಿಕ ಚಿನ್ನದ ವ್ಯಾಪಾರಿಗಳ ಮನೆಗೆ ಆದಾಯ ತೆರಿಗೆ ಇಲಾಖೆ (IT Raid) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚಿಸಿ ಚಿನ್ನದ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಆರೋಪಗಳ ಆಧಾರದಲ್ಲಿ ಈ ದಾಳಿ ನಡೆದಿದ್ದು, ಬೆಳಗ್ಗೆ ಆರಂಭವಾದ ಪರಿಶೀಲನೆ ಮುಂದುವರಿದಿದೆ.
ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ಸೇರಿದಂತೆ ಹಲವು ಸ್ಥಳಗಳಲ್ಲಿ ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳು ಪ್ರಮುಖವಾಗಿ ರಾಜಸ್ಥಾನ, ಗುಜರಾತ್ ಮೂಲದ ವ್ಯಾಪಾರಿಗಳ ಮನೆಗಳಿಗೆ ದಾಳಿ ಮಾಡಿದ್ದಾರೆ.
೨೫ ಉದ್ಯಮಿಗಳಿಗೆ ಸೇರಿದ 300ಕ್ಕೂ ಅಧಿಕ ಕಚೇರಿ ಮತ್ತು ಮನೆಗಳಿಗೆ ದಾಳಿ ನಡೆಸಿ ಶೋಧ ಮಾಡಲಾಗಿದೆ. ದಾಳಿಯ ವೇಳೆ ಭದ್ರತೆಗಾಗಿ ಸಿಎಆರ್ ಸಿಬ್ಬಂದಿಯನ್ನು ತಂಡ ವಿಶೇಷವಾಗಿ ನಿಯೋಜಿಸಿಕೊಂಡಿದೆ.
ಜಯನಗರದಲ್ಲಿರುವ ರಾಜೇಶ್ ಕುಮಾರ್ ಜೈನ್ ಮನೆ ಮೇಲೆ ದಾಳಿ ನಡೆಸಿದ್ದು, ಇವರು ಜುವೆಲರಿ ಶಾಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಜತೆಗೆ ಪಾರ್ಶ್ವ ಫಾರ್ಮಾಸ್ಯುಟಿಕಲ್ಸ್‌ನಲ್ಲೂ ವ್ಯವಹಾರ ಹೊಂದಿದ್ದಾರೆ. ಬನಶಂಕರಿಯಲ್ಲಿರುವ ಪಾರ್ಶ್ವ ಫಾರ್ಮಾಸ್ಯುಟಿಕಲ್ ಸಂಸ್ಥೆ ಇವರದು ಎನ್ನಲಾಗಿದೆ.
ಪ್ರಮುಖವಾಗಿ ದಾಳಿ ನಡೆದಿರುವ ಇನ್ನೊಬ್ಬ ಉದ್ಯಮಿ ಎಂದರೆ ಶಂಕರಪುರಂನ ಉತ್ತಮ್ ಜೈನ್. ಉತ್ತಮ್ ಜೈನ್ ಅವರ ಶಂಕರ್ ಪುರಂನ ಫ್ಲ್ಯಾಟ್ ಮೇಲೆ ದಾಳಿ ನಡೆದಿದೆ. ಇಲ್ಲಿಗೆ ಮೂರು ಇನೋವಾಗಳಲ್ಲಿ ಬಂದಿರುವ 15 ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಅರಿಹಂತ್ ಕಾಸ್ಟಲ್ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ಉತ್ತಮ ಜೈನ್ ಅವರ ಮನೆ ಇದೆ. ಅವರ ಮೇಲೆ ತೆರಿಗೆ ವಂಚನೆಯ ಆರೋಪವಿದೆ ಎನ್ನಲಾಗಿದೆ.
ಇದನ್ನೂ ಓದಿ : IT Raid : ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕನ ಮನೆ ಮೇಲೆ ಐಟಿ ದಾಳಿ; ಚಿಕ್ಕಮಗಳೂರು ಕಾಂಗ್ರೆಸ್ ಕಿಡಿ