ಬೆಂಗಳೂರು: ಗ್ಯಾರಂಟಿ ಯೋಜನೆಗಳ (Congress Guarantee Scheme) ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ಗೆ ಈಗ ಅವುಗಳಿಗೆ ಅನುದಾನ ಹೊಂದಾಣಿಕೆ ಮಾಡುವ ಸವಾಲು ಎದುರಾಗಿದೆ. ಅಲ್ಲದೆ, ಅಭಿವೃದ್ಧಿ ಕಾರ್ಯಗಳಿಗೂ ಅನುದಾನವನ್ನು ನೀಡಬೇಕು. ಇದಕ್ಕೆ ಆದಾಯ ಮೂಲಗಳ ಹುಡುಕಾಟದಲ್ಲಿ ಸರ್ಕಾರ ಇದೆ. ಆದರೆ, ಯಾವುದೇ ಸರ್ಕಾರ ಬಂದರೂ ಮೊದಲು ಕಾಣುವುದು ಅಬಕಾರಿ ಇಲಾಖೆ. ಮದ್ಯದ ಮೇಲೆ ತೆರಿಗೆಯನ್ನು ಹೆಚ್ಚು ಮಾಡಿ ಸರ್ಕಾರದ ಬೊಕ್ಕಸವನ್ನು ತುಂಬಿಸಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಈಗಾಗಲೇ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಅಬಕಾರಿ ಸುಂಕವನ್ನು (Excise Duty) ಶೇಕಡಾ 20ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಹೊಸ ವರ್ಷಕ್ಕೆ (New Year) ಮದ್ಯದ ಕಂಪನಿಗಳು (Liquor Company) ದರ ಹೆಚ್ಚಳ (Liquor Price hike) ಮಾಡಲು ಮುಂದಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ.
ಒಟ್ಟಾರೆಯಾಗಿ ಮದ್ಯ ಪ್ರಿಯರಿಗೆ ಸರ್ಕಾರದಿಂದಲೂ ಹೊಡೆತ, ಮದ್ಯ ಕಂಪನಿಗಳಿಂದಲೂ ಬಡಿತ ಎನ್ನುವಂತಾಗಿದೆ. ಹೊಸ ವರ್ಷ ಬಂದಿದೆ. ಈ ವೇಳೆ ಮದ್ಯದ ಮಾರಾಟ ಸಹ ಭರದಿಂದ ಆಗಲಿದೆ. ಜತೆಗೆ ಖರ್ಚುಗಳು ಸಹ ಹೆಚ್ಚಾಗಿರುವುದರಿಂದ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಮದ್ಯ ಕಂಪನಿಗಳು ಮುಂದಾಗಿವೆ.
36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅಬಕಾರಿ ಇಲಾಖೆಯಿಂದ 35,000 ಕೋಟಿ ರೂಪಾಯಿ ಗುರಿಯನ್ನು ಬಜೆಟ್‌ನಲ್ಲಿ ನಿಗದಿಪಡಿಸಿತ್ತು. ಬಳಿಕ ಬಂದ ಸಿದ್ದರಾಮಯ್ಯ ಅವರು ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ 36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಿದ್ದಾರೆ. ಆ ಮೂಲಕ ತಮ್ಮ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಮುಂದಾಗಿದ್ದಾರೆ.
ಮದ್ಯದ ಹೊಸ ದರ ಪಟ್ಟಿ ಹೀಗಿದೆ
ಜನವರಿ 1ರಿಂದ ಮದ್ಯದ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಹಾಲಿ ಓಟಿ 180 ಎಂಎಲ್‌ಗೆ 100 ರೂಪಾಯಿ ಇದೆ. ಆದರೆ, ಜನವರಿ 1ರಿಂದ ಇದರ ಬೆಲೆಯಲ್ಲಿ ಏರಿಕೆಯಾಗಲಿದೆ. ಜ. 1ರಿಂದ ಓಟಿ ಬೆಲೆ 123 ರೂ.ಗೆ ಏರಿಕೆಯಾಗಲಿದೆ. ಬಿಪಿ ದರ ಹಾಲಿ 123 ರೂ. ಇದ್ದು ಜನವರಿಯಿಂದ 159 ರೂ. ಆಗಲಿದೆ. 8ಪಿಎಂ ದರ ಹಾಲಿ 100 ರೂ. ಇದ್ದು 123 ರೂ.ಗೆ ಏರಲಿದೆ.
ಏಕೆ ಈ ನಿರ್ಧಾರ?
ಕಂಪನಿಗಳು ದರ ಹೆಚ್ಚಳ ಮಾಡುವ ನಿರ್ಧಾರಕ್ಕೆ ಬರಲು ಒಂದು ಕಾರಣ ಇದೆ. ಏನೆಂದರೆ ಮದ್ಯದ ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿವೆ. ಇದರಿಂದ ಲಾಭಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ವೆಚ್ಚವನ್ನು ಅನಿವಾರ್ಯವಾಗಿ ಗ್ರಾಹಕರ ಮೇಲೆ ಹಾಕಬೇಕಾಗಿದೆ ಎಂದು ಹೇಳಲಾಗಿದೆ. ಜನವರಿ 1ರಿಂದ ನೂತನ ದರ ಪಟ್ಟಿಯಂತೆ ವಸೂಲಿ ಮಾಡಲು ಬಾರ್ ಮಾಲೀಕರಿಗೆ ಕಂಪನಿಗಳೂ ಸೂಚಿಸಿವೆ.
ಇದನ್ನೂ ಓದಿ: ST Somashekhar: ಕಾಂಗ್ರೆಸ್ ಸಿಎಲ್‌ಪಿಗೆ ಹೋಗಿಲ್ಲ; ಔತಣಕೂಟಕ್ಕಷ್ಟೇ ಹೋಗಿದ್ದೆ ಎಂದ ಎಸ್.ಟಿ. ಸೋಮಶೇಖರ್
ಎಂಆರ್‌ಪಿ ಬಾರ್‌ಗಳಿಗೂ ಅನ್ವಯ
ಈ ನೂತನ ದರವು ಎಂಆರ್‌ಪಿ ಬಾರ್ ಮಾಲೀಕರಿಗೆ ಬಹು ಮುಖ್ಯವಾಗಿ ಅನ್ವಯವಾಗುತ್ತದೆ. ಈ ಸಂಬಂಧ ಕಂಪನಿಗಳು ಮೆಸೇಜ್ ಮೂಲಕ ಬಾರ್ ಮಾಲೀಕರಿಗೆ ಸೂಚನೆಯನ್ನು ನೀಡಿವೆ.