ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಈ ಚುನಾವಣೆಯು ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಹಲವು ಅಚ್ಚರಿಯ ಫಲಿತಾಂಶಗಳಿಗೂ ಕಾರಣವಾಗಿದೆ. ಈ ಬಾರಿ 10 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದು, ವಿಧಾನಸಭೆ ಪ್ರವೇಶಿಸಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ನಾಲ್ಕು ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಿದೆ. ಆಗ 6 ಮಹಿಳಾ ಪ್ರತಿನಿಧಿಗಳು ಇದ್ದರು. ಕಾಂಗ್ರೆಸ್ ಪಕ್ಷದಿಂದ ನಾಲ್ವರು, ಬಿಜೆಪಿಯಿಂದ ಮೂವರು, ಜೆಡಿಎಸ್ ಪಕ್ಷದಿಂದ ಒಬ್ಬರು ಮಹಿಳಾ ಅಭ್ಯರ್ಥಿ ಗೆದ್ದರೆ, ಒಬ್ಬರು ಪಕ್ಷೇತರರಿದ್ದಾರೆ. ಆದರೆ, ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಇಷ್ಟಕ್ಕೆ ತೃಪ್ತಿಪಡಬೇಕೇ ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡದೇ ಇರದು. ಪ್ರಸಕ್ತ ಸನ್ನಿವೇಶವನ್ನು ಗಮನಿಸಿದರೆ, ಪುರುಷ ಸರಿಸಮಾನವಾದ ಮಹಿಳಾ ಪ್ರಾತಿನಿಧ್ಯ ಅಗತ್ಯವಿದೆ.
ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ರಾಜ್ಯದಲ್ಲಿ ಒಟ್ಟು 5.21 ಕೋಟಿ ಮತದಾರರಿದ್ದು, ಈ ಪೈಕಿ 2.6 ಕೋಟಿ ಪುರುಷ ಹಾಗೂ 2.5 ಕೋಟಿ ಮಹಿಳಾ ಮತದಾರರನ್ನು ಕಾಣಬಹುದು. ಈ ಸಂಖ್ಯೆಯನ್ನು ಆಧರಿಸಿ ಹೇಳುವುದಾದರೆ ವಿಧಾನಸಭೆಯಲ್ಲಿ ಹೆಚ್ಚು ಕಡಿಮೆ ಪುರುಷ ಪ್ರತಿನಿಧಿಗಳು ಇದ್ದಷ್ಟೇ ಮಹಿಳಾ ಪ್ರತಿನಿಧಿಗಳು ಇರಬೇಕಿತ್ತು. ಆದರೆ, ಪರಿಸ್ಥಿತಿ ಹಾಗಿಲ್ಲ. ಕೇವಲ 10 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದರೆ, ರಾಜಕೀಯವಾಗಿ ಈಗಲೂ ಪುರುಷ ಪ್ರಧಾನ ವ್ಯವಸ್ಥೆ ವಿಜೃಂಭಿಸುತ್ತಿರುವುದು ಖಚಿತವಾಗುತ್ತದೆ. ಹೀಗಿರುವಾಗ, ಮಹಿಳೆ ಸಮಸ್ಯೆಗಳ ಪರಿಹಾರವಾಗಲೀ ಅಥವಾ ಮಹಿಳಾ ಕೇಂದ್ರೀಕೃತ ಚರ್ಚೆಗಳಿಗೆ ಶೇ.100ರಷ್ಟು ನ್ಯಾಯ ಸಲ್ಲುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಹಾಗೆ ನೋಡಿದರೆ, ಈಗ ಆಯ್ಕೆಯಾಗಿರುವ ಮಹಿಳೆಯರಲ್ಲಿ ಹೆಚ್ಚಿನವರು ರಾಜಕೀಯವಾಗಿ ಗುರುತಿಸಿಕೊಂಡ ಕುಟುಂಬಗಳಿಂದಲೇ ಬಂದವರೇ ಹೊರತು, ಸಾಮಾನ್ಯರಲ್ಲ. ಇಲ್ಲವೇ, ಗಂಡನ ಬದಲಿಗೆ ಹೆಂಡತಿಗೆ ಟಿಕೆಟ್ ನೀಡಿದ ಕಾರಣಕ್ಕೋ ಅಥವಾ ಇನ್ನಾವುದೇ ರಾಜಕೀಯ ಕಾರಣಕ್ಕೆ ಬಂದವರೇ ಹೊರತು ಸ್ವ ಸಾಮರ್ಥ್ಯದಿಂದ ಬದವರ ಸಂಖ್ಯೆ ತೀರಾ ಕಡಿಮೆ.
ಇನ್ನು ದೇಶದ ಮಟ್ಟಿಗೆ ನೋಡುವುದಾದರೆ, ಭಾರತದಲ್ಲಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಮುಂತಾದ ಅತ್ಯುನ್ನತ ಸ್ಥಾನಗಳನ್ನು ಮಹಿಳೆ ಅಲಂಕರಿಸಿದ್ದಾಳೆ. ಹಾಲಿ ರಾಷ್ಟ್ರಪತಿ ಮಹಿಳೆಯೇ ಆಗಿದ್ದಾರೆ. ಮಿಲಿಟರಿಯ ಪ್ರಮುಖ ಅತ್ಯುನ್ನತ, ನಿರ್ಧಾರ ಕೈಗೊಳ್ಳುವ ಸ್ಥಾನಗಳಲ್ಲಿ ಮಹಿಳೆ ಇದ್ದಾಳೆ. ಖ್ಯಾತ ಬೃಹತ್ ಕಂಪನಿಗಳ ಅತ್ಯುನ್ನತ ಸಿಇಒ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ. ಆದರೆ ಪ್ರಾತಿನಿಧ್ಯ ಎಂಬ ವಿಚಾರಕ್ಕೆ ಬಂದಾಗ, ಶಾಸನ ಸಭೆಗಳಲ್ಲಿ ಮಹಿಳೆಗೆ ಎಷ್ಟು ಸ್ಥಾನವಿದೆ ಎಂಬುದೂ ಮುಖ್ಯವಾಗುತ್ತದೆ. ಲೋಕಸಭೆಯಲ್ಲಿ 543, ರಾಜ್ಯಸಭೆಯಲ್ಲಿ 245 ಸದಸ್ಯ ಸ್ಥಾನಗಳಿವೆ. ಆದರೆ, ಲೋಕಸಭೆಯಲ್ಲಿ ಇರುವ ಮಹಿಳಾ ಸದಸ್ಯರ ಸಂಖ್ಯೆ 78 ಆಗಿದ್ದರೆ, ರಾಜ್ಯಸಭೆಯಲ್ಲಿ ಇವರ ಪ್ರಮಾಣ 25 ಮಾತ್ರ. ಅಂದರೆ ಒಟ್ಟು ಸಂಸತ್ ಸದಸ್ಯರಲ್ಲಿ ಮಹಿಳೆಯರ ಪಾಲು ಶೇ.13 ಮಾತ್ರ (ಒಟ್ಟು 103). ದೇಶದ ಮೊದಲ ಚುನಾವಣೆ ನಡೆದಾಗಲೂ ಹೆಚ್ಚು ಕಡಿಮೆ ಇಷ್ಟೇ ಇತ್ತು. ಈಗಲೂ ಅಂಥ ಬದಲಾವಣೆ ಏನೂ ಆಗಿಲ್ಲ.
ಈ ಎರಡು ಲೆಕ್ಕಾಚಾರಗಳನ್ನು ವಿಶ್ಲೇಷಿಸುವುದಾದರೆ, ರಾಜಕೀಯ ಪ್ರಾತಿನಿಧ್ಯ ವಿಷಯದಲ್ಲಿ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಪುರುಷರಷ್ಟೇ ಸರಿಸಮಾನವಾಗಿ ಮಹಿಳೆಯರು ರಾಜಕೀಯವಾಗಿ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬುದು ನಮ್ಮ ಸಂವಿಧಾನದ ಆಶಯವಾಗಿದೆ. ಆ ಕಾರಣಕ್ಕಾಗಿ ಮಹಿಳಾ ಮೀಸಲು ವಿಧೇಯಕಕ್ಕೆ ಮಹತ್ವವಿದೆ. ವಿಪರ್ಯಾಸ ಎಂದರೆ, ಕಳೆದ 27 ವರ್ಷಗಳಿಂದ ಅದು ನನೆಗುದಿಯಲ್ಲಿ ಬಿದ್ದಿದೆ. ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನಗಳನ್ನು ಮೀಸಲಿಡಬೇಕು ಎಂಬುದು ಈ ವಿಧೇಯಕದ ಪ್ರಮುಖ ಉದ್ದೇಶವಾಗಿದೆ. ಈವರೆಗೆ ಒಟ್ಟು ಐದು ಬಾರಿ ಈ ವಿಧೇಯಕ ಮತ್ತೆ ಮತ್ತೆ ಮಂಡನೆಯಾಗಿದೆ. ಆದರೆ ಮತಕ್ಕೆ ಹಾಕದೆ, ಹಾಕಿದರೆ ಅಂಗೀಕಾರವಾಗದೆ ಉಳಿಯುತ್ತಿದೆ. ಇದಕ್ಕೆ ಕಾರಣ ಪಕ್ಷಗಳ ಹಿಂಜರಿಕೆ, ಇಚ್ಛಾಶಕ್ತಿಯ ಕೊರತೆ. ಮಹಿಳಾ ಸಬಲೀಕರಣದ ಮಂತ್ರವನ್ನು ಆಯಕಟ್ಟಿನ ಹೊತ್ತಿನಲ್ಲಿ ಪಠಿಸುವ ರಾಜಕೀಯ ಪಕ್ಷಗಳ್ಯಾವುವೂ ಈ ವಿಧೇಯಕವನ್ನು ಅಂಗೀಕಾರ ಮಾಡುವ ಗೋಜಿಗೇ ಹೋಗಿಲ್ಲ. ವಿಶೇಷ ಎಂದರೆ, ಗ್ರಾಮೀಣ ಪಂಚಾಯಿತಿ ವ್ಯವಸ್ಥೆಯಲ್ಲಿ ಈ ಶೇ.50 ಮೀಸಲು ವ್ಯವಸ್ಥೆ ಯಶಸ್ವಿಯಾಗಿ ಜಾರಿಯಲ್ಲಿದೆ. ಉನ್ನತ ಮಟ್ಟದಲ್ಲಿ ಜಾರಿ ಮಾಡಲು ಮಾತ್ರ ಪಕ್ಷಗಳು ಮುಂದಾಗುತ್ತಿಲ್ಲ ಎಂಬುದು ಕಟು ವಾಸ್ತವ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸ್ಪಷ್ಟ ಜನಾದೇಶ, ಕಾಂಗ್ರೆಸ್ ಗೆಲುವು ತಂದ ಸ್ಥಿರತೆ, ಬಿಜೆಪಿಗೆ ಆತ್ಮಾವಲೋಕನದ ಕಾಲ
ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಈವರೆಗೆ ನಡೆದ ಚರ್ಚೆಗಳು ಮತ್ತು ರಾಜಕೀಯ ಪಕ್ಷಗಳ ಹಿಂಜರಿಕೆಯನ್ನು ನೋಡಿದರೆ, ಮಹಿಳಾ ಮೀಸಲು ವಿಧೇಯಕವೇನೂ ಸದ್ಯಕ್ಕೆ ಪಾಸಾಗುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ಪ್ರಾತಿನಿಧ್ಯಕ್ಕಾಗಿ ಮಹಿಳೆಯರು ಸಂಘಟಿತ ಪ್ರಯತ್ನ ಮಾಡಬೇಕಾದ ಅಗತ್ಯವೇ ಹೆಚ್ಚಾಗಿದೆ. ಚುನಾವಣೆ ವೇಳೆ, ಮಹಿಳಾ ಮತದಾರರನ್ನು ಓಲೈಸಲು ಮುಂದಾಗುವ ಪಕ್ಷಗಳಿಗೆ ತಮ್ಮ ಬೇಡಿಕೆಯನ್ನು ಮನದಟ್ಟು ಮಾಡಿಕೊಡಬೇಕು. ಆಯ್ಕೆಯಾಗಿ ಬರುವ ಪಕ್ಷವು ಮಹಿಳಾ ಮೀಸಲು ಜಾರಿಗೆ ಬದ್ಧವಾಗಿರುವಂತೆ ತಂತ್ರಗಾರಿಕೆಯನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಯೋಚಿಸುವುದು ಒಳ್ಳೆಯದು.