Site icon Vistara News

Independence Day 2023: ಮುಂಬಯಿ ಕರ್ನಾಟಕದಾದ್ಯಂತ ವ್ಯಾಪಿಸಿತ್ತು ಸ್ವಾತಂತ್ರ್ಯ ಹೋರಾಟದ ಜ್ವಾಲೆ

Halagali Bedaru

-ಅಲಕಾ ಕೆ
ಬ್ರಿಟನ್ನಿನ ಈಸ್ಟ್‌ ಇಂಡಿಯಾ ಕಂಪನಿಯು ತನ್ನ ವಸಾಹತುಗಳನ್ನು ಭಾರತದಲ್ಲಿ ಸ್ಥಾಪಿಸುವ ಮುನ್ನವೇ ಭಾರತಕ್ಕೆ ಕಾಲಿಟ್ಟವರು ಪೋರ್ಚುಗೀಸರು. ಹೀಗೆ ಬಂದಂಥ ವಿದೇಶಿ ಅಧಿಕಾರದಾಹಿಗಳು ಹಾಗೂ ವಸಾಹತುಶಾಹಿಗಳನ್ನು ವಿರೋಧಿಸುವ ಸ್ವಾಭಿಮಾನಿ ಪ್ರವೃತ್ತಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕಿಂತ ಹಲವು ಶತಮಾನಗಳ ಹಿಂದೆಯೇ ಅಲ್ಲಲ್ಲಿ ಕಾಣಸಿಗುತ್ತದೆ. ಪೋರ್ಚುಗೀಸರನ್ನು ವಿರೋಧಿಸಿದವರು ಹಲವರಾದರೂ, ಹದಿನಾರನೇ ಶತಮಾನದಲ್ಲಿ ಮಲೆನಾಡು ಮತ್ತು ಕರಾವಳಿಯ ಇಬ್ಬರು ರಾಣಿಯರು ಪ್ರಮುಖವಾಗಿ ಕಾಣುತ್ತಾರೆ. ಉಳ್ಳಾಳದ ರಾಣಿ ಅಬ್ಬಕ್ಕ ಮತ್ತು ನಗಿರೆ-ಹಾಡುವಳ್ಳಿಯ ಅರಸಿ ಚೆನ್ನಭೈರಾದೇವಿ. ಆನಂತರ ವಿದೇಶೀ ವಸಾಹತುಶಾಹಿಗಳನ್ನು ವಿರೋಧಿಸಿ ದಾಖಲಾದ ಸುದೀರ್ಘ ಸಂಘರ್ಷದ ಚರಿತ್ರೆಯಲ್ಲಿ ಕನ್ನಡ ನಾಡಿನ ರಾಣಿಯರಲ್ಲಿ ಪ್ರಮುಖವಾಗಿ ಕಾಣುವವಳು ಕಿತ್ತೂರಿನ ಅರಸಿ ಚೆನ್ನಮ್ಮ. ಬ್ರಿಟಿಷರ ವಿರುದ್ಧ ಹೋರಾಡಿದ ಅರಸಿಯರಲ್ಲಿ ಈಕೆ ಅಗ್ರಗಣ್ಯಳು.

ಕಿತ್ತೂರು ಚೆನ್ನಮ್ಮನ ಹೋರಾಟ…

ಕಿತ್ತೂರಿನ ರಾಜ ಶಿವಲಿಂಗ ರುದ್ರಸರ್ಜನಿಗೆ ಆಕೆಯನ್ನು ವಿವಾಹ ಮಾಡಲಾಗಿತ್ತು. ಈಗಿನ ಧಾರವಾಡ ಮತ್ತು ಬೆಳಗಾವಿಯ ಹಲವು ಭಾಗಗಳನ್ನು ಅಂದಿನ ಕಿತ್ತೂರು ಸಂಸ್ಥಾನ ಒಳಗೊಂಡಿತ್ತು. ಮರಾಠರ ಛತ್ರಛಾಯೆಯಲ್ಲಿದ್ದ ಈ ಸಂಸ್ಥಾನ, 1818ರಲ್ಲಿ ಮರಾಠರ ಅವನತಿಯ ನಂತರ ಬ್ರಿಟಿಷರ ಲಾಲಸೆಯ ನೋಟಕ್ಕೆ ತುತ್ತಾಯಿತು. ಚೆನ್ನಮ್ಮ ಮತ್ತು ರುದ್ರಸರ್ಜ ದಂಪತಿಗೆ ಮಕ್ಕಳಿರಲಿಲ್ಲ. 1824ರಲ್ಲಿ ರುದ್ರಸರ್ಜ ಅನಾರೋಗ್ಯದಿಂದ ಮರಣಹೊಂದಿದ ಮೇಲೆ, ದತ್ತು ಪುತ್ರನಿಗೆ ಪಟ್ಟ ಕಟ್ಟಿ, ತಾನೇ ಆಡಳಿತ ನಡೆಸಿದಳು ಚೆನ್ನಮ್ಮ. ಇದನ್ನು ಒಪ್ಪದ ಬ್ರಿಟಿಷರು ಅಧಿಕಾರವನ್ನು ತಮಗೊಪ್ಪಿಸುವಂತೆ ಒತ್ತಡ ಹೇರತೊಡಗಿದರು. ಕೋಟೆಯನ್ನು ಭದ್ರಪಡಿಸಿ, ಸೇನೆಯನ್ನು ಸನ್ನದ್ಧಗೊಳಿಸಿ, ತಾನೇ ಅಭಿಯೋಗ ಸಾರಿದಳು ಚೆನ್ನಮ್ಮ. ಈ ಯುದ್ಧದಲ್ಲಿ ಬ್ರಿಟಿಷರಿಗೆ ಸೋಲಾಗಿ, ಕಂಪನಿಯ ಹಲವಾರು ಸೈನಿಕರನ್ನು ಕಿತ್ತೂರಿನ ವೀರರು ಬಂಧಿಸಿದರು. ಹೆಚ್ಚಿನ ಸೇನೆಯೊಂದಿಗೆ ಬ್ರಿಟಿಷರು ದಾಳಿ ಮಾಡಿದಾಗ ಚೆನ್ನಮ್ಮ ಸಂಧಾನಕ್ಕೆ ಯತ್ನಿಸಿದಳು. ಆದರೆ ಯತ್ನ ಫಲಿಸದೆ, ಯುದ್ಧ ಆರಂಭವಾಯಿತು. ಆದರೆ ತನ್ನದೇ ಕಡೆಯ ಧೂರ್ತರಿಂದಾಗಿ ಯುದ್ಧದಲ್ಲಿ ಕೈ ಸೋತಾಗ ಅಲ್ಲಿಂದ ತಪ್ಪಿಸಿಕೊಂಡು ಸಂಗೊಳ್ಳಿಯತ್ತ ಹೋಗುವಾಗ ಆಕೆಯನ್ನು ಬಂಧಿಸಲಾಯಿತು. ಬೈಲಹೊಂಗಲದ ಸೆರೆಯಲ್ಲಿ ಸುಮಾರು ಐದು ವರ್ಷಗಳ ಕಾಲ ಇದ್ದ ಆಕೆ, ನಂತರ ಇಲ್ಲಿಯೇ ಮರಣ ಹೊಂದಿದಳು.

ಸಿಂದಗಿಯ ಬಂಡಾಯ…

ಅದೇ ವರ್ಷ, ಅಂದರೆ 1824ರಲ್ಲೇ ಸಿಂದಗಿಯಲ್ಲಿನ ಬಂಡಾಯವೂ ಬ್ರಿಟಿಷರ ವಿರುದ್ಧದ ದಂಗೆಯ ಇತಿಹಾಸಕ್ಕೆ ಇನ್ನೊಂದು ಪುಟವನ್ನು ಸೇರಿಸುತ್ತದೆ. ವಿಜಯಪುರದಿಂದ ಸಿಂದಗಿಯವರೆಗೂ ಈ ಬಂಡಾಯ ಹರಡಿತ್ತು. ಬ್ರಿಟಿಷರು ಕಂದಾಯ ಸಂಗ್ರಹಿಸುತ್ತಿದ್ದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಸ್ಥಳೀಯ ಸರದಾರ ಚಿದಂಬರ ದೀಕ್ಷಿತ, ಆತನ ಮಗ ದಿವಾಕರ ದೀಕ್ಷಿತ, ಸಹವರ್ತಿಗಳಾದ ಶೆಟ್ಟ್ಯಪ್ಪ, ರಾವ್‌ಜಿ ಬಾಲಾಜಿ ದೇಶಪಾಂಡೆ ಮುಂತಾದವರು ಸಿಂದಗಿಯಲ್ಲಿ ಸ್ವತಂತ್ರ ಆಡಳಿತ ಸ್ಥಾಪಿಸಿ, ಆಡಳಿತ ನಡೆಸಿದರು. ಇದನ್ನು ಸಹಿಸದ ಬ್ರಿಟಿಷ್‌ ಸರಕಾರ ಸೇನೆ ಕಳುಹಿಸಿತು. ಸಿಂದಗಿಯ ಜನರಲ್ಲೇ ಒಬ್ಬನ ಮೋಸದಿಂದಾಗಿ ಈ ನಾಯಕರು ಸೆರೆಯಾದರು. ಸಣ್ಣ ಪ್ರದೇಶಕ್ಕೆ ಮಾತ್ರವೇ ಈ ಬಂಡಾಯ ಸೀಮಿತವಾಗಿದ್ದರೂ, ಜನರಲ್ಲಿ ಸ್ವಾಂತ್ರ್ಯದ ಕಿಡಿಯನ್ನು ಹಚ್ಚುವುದರಲ್ಲಿ ಸಫಲವಾಗಿತ್ತು.

ಸಂಗೊಳ್ಳಿಯ ಸಿಂಹ

ಚೆನ್ನಮ್ಮನ ಸೋಲಿನ ನಂತರವೂ ಆಕೆ ಹೊತ್ತಿಸಿದ್ದ ಬಂಡಾಯದ ಕಿಡಿ, ಮುಂದಿನ ಹಲವಾರು ವರ್ಷಗಳವರೆಗೆ ಜ್ವಲಿಸುತ್ತಲೇ ಇತ್ತು. ಕಿತ್ತೂರಿನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ, ದೇಸಾಯಿಗಳ ಅತ್ಯಂತ ನಿಷ್ಠನಾಗಿದ್ದ ಸಂಗೊಳ್ಳಿಯ ರಾಯಣ್ಣ ಮುಂದಿನ ಕೆಲವು ವರ್ಷಗಳ ಕಾಲ ಬಂಡಾಯದ ಮುಂಚೂಣಿಯಲ್ಲಿದ್ದ. ಸುರಪುರದ ನಾಯಕನ ನೆರವಿನಿಂದ, 1829ರಲ್ಲಿ ರಾಯಣ್ಣ ಸೇನೆಯೊಂದನ್ನು ಕಟ್ಟಿದ. ಬ್ರಿಟಿಷರು ಮತ್ತು ಅವರ ಅನುಯಾಯಿಗಳನ್ನು ಗುರಿಯಾಗಿಸಿಕೊಂಡು ಆತನ ಸೇನೆ ದಾಳಿ ಮಾಡತೊಡಗಿತು. ಆತನನ್ನು ಸಾಮಾನ್ಯರಂತೆ ಯುದ್ಧದಲ್ಲಿ ಮಟ್ಟ ಹಾಕುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ಕಂಪನಿ ಆಡಳಿತ ಮೋಸದ ದಾರಿ ಹಿಡಿಯಿತು. ಆತನ ಜೊತೆಗಾರರೇ ಆತನ ಇರುವಿಕೆಯ ಸುಳಿವು ನೀಡಿದ್ದರಿಂದ, ರಾಯಣ್ಣ ಬ್ರಿಟಿಷರಿಗೆ ಬಲಿಯಾದ.

ಮುಂದಿನ ಹಲವಾರು ವರ್ಷಗಳು ಮುಂಬಯಿ ಪ್ರಾಂತ್ಯ ಮತ್ತು ಮದರಾಸು ಪ್ರಾಂತ್ಯದ ಆಡಳಿತದಡಿಯಲ್ಲಿದ್ದ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯ ಬಹಳಷ್ಟು ಕಡೆಗಳಲ್ಲಿ ಸಣ್ಣ-ಪುಟ್ಟ ಪ್ರತಿರೋಧಗಳು ಏಳುತ್ತಲೇ ಹೋದವು. 1833ರಲ್ಲಿ ಶಂಕರಣ್ಣ, 1836ರಲ್ಲಿ ನಾಗಪ್ಪ ಗಜಪತಿ ಸೆಟ್ಟಿ, ರುದ್ರಪ್ಪ ಕೊಟಗಿ ಮುಂತಾದ ಅನೇಕ ವೀರರು ಬ್ರಿಟಿಷರ ವಿರುದ್ಧ ಎದೆ ಸೆಟೆಸಿದರು. ಆದರೆ ಅವರಾರಿಗೂ ಜಯ ದೊರೆಯಲಿಲ್ಲ. 1830ರ ವೇಳೆಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಬ್ರಿಟಿಷರ ತೆರಿಗೆಯ ವಿರುದ್ಧ ರೈತರು ದಂಗೆಯೆದ್ದರು. ವರ್ಷವಿಡೀ ನಡೆದ ಪ್ರತಿರೋಧವನ್ನು ಎದುರಿಸಲು ಬ್ರಿಟಿಷರು ಹಲವರು ರೀತಿಯಲ್ಲಿ ಪ್ರಯತ್ನಿಸಬೇಕಾಯಿತು. 1839ರ ವೇಳೆಗೆ ಸತಾರ ಅರಸೊತ್ತಿಗೆ ಬೆಂಬಲಿಗರು ಸೇನೆಯೊಂದನ್ನು ಕಟ್ಟಿ ಬ್ರಿಟಿಷರನ್ನು ಎದುರಿಸಿದರು. ಬೆಳಗಾವಿಯ ನಿಪ್ಪಾಣಿಯಲ್ಲಿ ಸ್ಥಳೀಯ ಜಮೀನುದಾರ ರಘುನಾಥ ರಾಯನ ಮುಂದಾಳತ್ವದಲ್ಲಿ 1840ರ ವೇಳೆಗೆ ಸೇನೆಯೊಂದು ಯುದ್ಧಕ್ಕಿಳಿಯಿತು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ, ರಾಜ್ಯದ ಉದ್ದಗಲಕ್ಕೆ ಇಂಥ ಬಹಳಷ್ಟು ಬಂಡಾಯಗಳು ಉಲ್ಕೆಗಳಂತೆ ಉರಿದುಹೋಗುತ್ತಲೇ ಇದ್ದವು.

ಕೊಡಗುನಲ್ಲಿಯೂ ಸ್ವಾಂತ್ರ್ಯದ ಕಿಡಿ…

ಸ್ವತಂತ್ರ ರಾಜ್ಯ ಎನಿಸಿಕೊಂಡಿದ್ದ ಕೊಡಗು ಸಹ ಈ ಅಲೆಯಿಂದ ಹೊರಗುಳಿಯಲಿಲ್ಲ. ಟಿಪ್ಪುವಿನ ಮರಣಾನಂತರ, ಕೊಡಗನ್ನು ಹಿಂದಿನ ಹಾಲೇರಿ ವಂಶದವರೇ ಆಳುತ್ತಿದ್ದರು. ಅಲ್ಲಿನ ಅರಸ ಚಿಕವೀರ ರಾಜನನ್ನು ಬದಿಗಿರಿಸಿದ ಬ್ರಿಟಿಷರು ಅಧಿಕಾರ ಪಡೆಯಲೆತ್ನಿಸಿದಾಗ, ಇದನ್ನು ವಿರೋಧಿಸಿ 1835ರಲ್ಲಿ ಅಪರಂಪರಾನಂದ ಮತ್ತು ಕಲ್ಯಾಣಸ್ವಾಮಿ ಎಂಬುವರು ಸೇನೆಯನ್ನು ಬಲಿದರು. ಅವರು ಸುಳ್ಯ, ಪುತ್ತೂರು, ಬಂಟವಾಳ, ಮಂಗಳೂರು, ಕಾಸರಗೋಡು ಮುಂತಾದೆಡೆ ಪ್ರತಿ ಸರ್ಕಾರವನ್ನು ಸ್ಥಾಪಿಸಿದರು. ಇವರನ್ನು ಬ್ರಿಟಿಷರು ಸೆರೆ ಹಿಡಿದರೂ ದಂಗೆ ನಿಲ್ಲಲಿಲ್ಲ. ಪುಟ್ಟಬಸಪ್ಪ, ಗುಡ್ಡೆಮನೆ ಅಪ್ಪಯ್ಯ ಮುಂತಾದವರು ತಯಾರಾದರು. ಆದರೆ ಕಂಪನಿ ಸೇನೆ ಅವರನ್ನೂ ಬಂಧಿಸಿತು.

ಮೊದಲ ಸ್ವಾತಂತ್ರ್ಯ ಸಂಗ್ರಾಮದ ಅವಧಿ…

ಬ್ರಿಟಿಷ್‌ ಸೇನೆಯಲ್ಲಿದ್ದ ಭಾರತೀಯ ಸೈನಿಕರಿಂದ ಉತ್ತರ ಭಾರತದಲ್ಲಿ 1857ರಲ್ಲಿ ಭುಗಿಲೆದ್ದ ಸಂಗ್ರಾಮದ ಜ್ವಾಲೆ, ದೇಶದೆಲ್ಲೆಡೆ ವ್ಯಾಪಿಸತೊಡಗಿತ್ತು. ಭಾರತದ ವಿವಿಧೆಡೆಯ ಅರಸೊತ್ತಿಗೆಗಳು ಇದಕ್ಕೆ ಬೆಂಬಲ ನೀಡಿದ್ದವು. ಕರ್ನಾಟಕದಲ್ಲೂ ಕರಾವಳಿಯ ಜಿಲ್ಲೆಗಳು, ರಾಯಚೂರು, ಕೊಪ್ಪಳ, ಬಿಜಾಪುರ, ಧಾರವಾಡ, ಶೃಂಗೇರಿ, ಹಾಸನದವರೆಗೂ ಇದರ ಪ್ರತಿಧ್ವನಿಗಳು ಹಲವು ವಿಧದಲ್ಲಿ ಕೇಳತೊಡಗಿದವು. ಮುಂಬಯಿಯಿಂದ ಹಲವಾರು ಹೋರಾಟಗಾರರು ಕರಾವಳಿ ಮತ್ತು ಮಲೆಸೀಮೆಯ ದಟ್ಟಾರಣ್ಯಗಳಲ್ಲಿ ಆಶ್ರಯ ಪಡೆದರು. ಬಂಡಾಯ ಮುಂದಿನ ಆರೆಂಟು ವರ್ಷಗಳವರೆಗೆ ಪ್ರಬಲವಾಗಿಯೇ ಇತ್ತು.

ಹಲಗಲಿಯ ಬೇಡರು

ಸ್ವಾತಂತ್ರ್ಯಕ್ಕಾಗಿ ಹಂಬಲಿಸಿ ಜೀವತೆತ್ತ ಹಲವು ಘೋರ ರಕ್ತಸಿಕ್ತ ಇತಿಹಾಸಗಳಲ್ಲಿ ಹಲಗಲಿಯ ಬೇಡರದ್ದೂ ಒಂದು. ಎಲ್ಲಾ ಭಾರತೀಯರು ತಂತಮ್ಮ ಆಯುಧಗಳನ್ನು ಕಂಪನಿ ಸರಕಾರಕ್ಕೆ ಒಪ್ಪಿಸಬೇಕು ಮತ್ತು ಅದನ್ನು ಇರಿಸಿಕೊಳ್ಳುವುದಕ್ಕೆ ಪರವಾನಗಿ ತೆಗೆದುಕೊಳ್ಳಬೇಕು ಎಂಬ ಬ್ರಿಟಿಷ್‌ ಸರಕಾರದ ಆಜ್ಞೆಯ ಹಿಂದಿದ್ದಿದ್ದು ಒಂದೇ ಹುನ್ನಾರ- ಎಲ್ಲೆಡೆ ಜ್ವಲಿಸುತ್ತಿರುವ ಬಂಡಾಯವನ್ನು ಶಮನ ಮಾಡುವುದು. ಮುಧೋಳದ ಹಲಗಲಿಯ ಸ್ವಾಭಿಮಾನಿ ಬೇಡರು ಇದನ್ನು ಕೇಳಿ ಕೆರಳಿದರು. ಬೇಟೆಯನ್ನೇ ವೃತ್ತಿಯಾಗಿಸಿಕೊಂಡಿದ್ದರಿಂದ ಆಯುಧಗಳು ಅವರ ಬದುಕಿನ ಸಹಜ ಭಾಗವಾಗಿದ್ದವು. ಆಯುಧಗಳನ್ನು ಒಪ್ಪಿಸಲು ಸಾಧ್ಯವೇ ಇಲ್ಲ ಎಂದು ಬೇಡರು ತಿರುಗಿ ನಿಂತರು. ಇವರಿಗೆ ಒಂದಿಬ್ಬರು ಮರಾಠ ಸೈನಿಕರ ನೆರವೂ ಇತ್ತು. ಬೇಡರ ಪ್ರತಾಪಗಳ ಬಗ್ಗೆ ಅರಿತು ಬೆಚ್ಚಿದ ಬ್ರಿಟಿಷರು ಮೊದಲಿಗೆ ಸಂಧಾನಕಾರರನ್ನು ಕಳುಹಿಸುತ್ತಾರೆ. ಆದರೆ ಹತಾರ (ಆಯುಧ) ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಬೇಡರು ನಿರಾಕರಿಸುತ್ತಾರೆ.

ಮೊದಲ ಬಾರಿ ಬ್ರಿಟಿಷ್‌ ಸೇನೆಗೆ ಸೋಲು…

ಮೊದಲ ಬಾರಿಗೆ ಬ್ರಿಟಿಷರು ಕಳಿಸಿದ ಸೇನೆಗೆ ಸೋಲಾಗುತ್ತದೆ. ಬೇಡರ ಪಡೆಯಲ್ಲಿ ಗಂಡಸರ ಸಮಸಮಕ್ಕೆ ನಿಂತು ಕಾಳಗ ಮಾಡುವ ಮಹಿಳೆಯರೂ ಇದ್ದರು. ಈ ಅಪ್ರತಿಮ ವೀರರ ದೆಸೆಯಿಂದ ಎರಡನೇ ಬಾರಿಯ ಯುದ್ಧದಲ್ಲೂ ಬ್ರಿಟಿಷರಿಗೇ ಸೋಲಾಗುತ್ತದೆ. ಕಡೆಗೆ 1857ರ ನವೆಂಬರ್‌ನಲ್ಲಿ ಬ್ರಿಟಿಷರ ಬೃಹತ್‌ ಪಡೆಯೊಂದು ಹಲಗಲಿಯನ್ನು ಮುತ್ತುತ್ತದೆ. ಅಷ್ಟು ದೊಡ್ಡ ಸೇನೆಯೂ ತತ್ತರಿಸುತ್ತಿರುವ ಹೊತ್ತಿನಲ್ಲಿ ಬೇಡರು ಸಿದ್ಧಗೊಳಿಸಿದ ಮದ್ದು-ಗುಂಡುಗಳು ನಿಷ್ಕ್ರಿಯವಾಗುವಂತೆ ಕುತಂತ್ರ ಎಸಗಲಾಗುತ್ತದೆ. ಇದರಿಂದ ಕಂಪನಿ ಸೇನೆಯ ಕೈ ಮೇಲಾಗಿ, ಭಯಾನಕ ಕ್ರೌರ್ಯದ ಅಧ್ಯಾಯವೊಂದು ತೆರೆದುಕೊಳ್ಳುತ್ತದೆ. ಬೇಡರ ಊರಿಗೇ ಬೆಂಕಿ ಇಡುವ ಬ್ರಿಟಿಷರು ಹೆಂಗಸರು-ಮಕ್ಕಳೆನ್ನದೆ ಸಿಕ್ಕವರನ್ನೆಲ್ಲಾ ಕೊಚ್ಚಿ ಹಾಕುತ್ತಾರೆ. ಸುಮಾರು ೩೦೦ ಮಂದಿ ಬೇಡರನ್ನು ಬಂಧಿಸಿ, ಅವರಲ್ಲಿ ಹಲವರನ್ನು ಸಾರ್ವಜನಿಕವಾಗಿ ನೇಣಿಗೆ ಒಡ್ಡಲಾಗುತ್ತದೆ. ಉಳಿದವರನ್ನು ಹಲಗಲಿಯಲ್ಲೇ ನೇಣಿಗೆ ಹಾಕಲಾಗುತ್ತದೆ

ಚಳವಳಿಗಳ ಪ್ರಭಾವ

ಗಾಂಧೀಜಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಚಳುವಳಿಗಳ ಪ್ರಭಾವ ಹಳ್ಳಿ-ದಿಲ್ಲಿ ಎನ್ನದೆ ಎಲ್ಲೆಡೆ ವ್ಯಾಪಿಸುತ್ತಿತ್ತು. 1893ರಲ್ಲೇ ಕಾಂಗ್ರೆಸ್‌ ಸಂಸ್ಥಾಪಕ ಎ. ಓ. ಹ್ಯೂಂ ಬೆಳಗಾವಿಗೆ ಬಂದು ಸ್ವರಾಜ್ಯದ ಬಗ್ಗೆ ಪ್ರಚಾರ ಮಾಡಿದ್ದರು. ಬಂಗಾಳದ ವಿಭಜನೆಯನ್ನು ವಿರೋಧಿಸಿ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಕಿತ್ತೂರು ಮುಂತಾದೆಡೆಗಳಲ್ಲಿ ಪ್ರತಿಭಟನೆಗಳು ನಡೆದವು. ಲೋಕಮಾನ್ಯ ಬಾಲಗಂಗಾಧರ ತಿಲಕರ ಪ್ರಭಾವ ಮುಂಬಯಿ ಕರ್ನಾಟಕದ ಎಷ್ಟೂ ಭಾಗಗಳಲ್ಲಿ ಪ್ರಬಲವಾಗಿಯೇ ಇತ್ತು. ತಿಲಕರ ಬೆಂಬಲಕ್ಕೆ ಆಲೂರು ವೆಂಕಟರಾವ್‌, ಹೊಸಕೇರಿ ಅಣ್ಣಾಚಾರ್ಯ, ಶ್ರೀನಿವಾಸ ಕೌಜಲಗಿ, ಗಂಗಾಧರ ದೇಶಪಾಂಡೆ ಮುಂತಾದವರಿದ್ದರು. ತಿಲಕರು 1916ರಲ್ಲಿ ಬೆಳಗಾವಿ, ಸಂಕೇಶ್ವರ, ಶಿರಸಿ, ಸಿದ್ದಾಪುರ, ಬಳ್ಳಾರಿ, ಹುಬ್ಬಳ್ಳಿ ಮುಂತಾದೆಡೆಗಳಲ್ಲಿ ಸಂಚರಿಸಿ, ಹೋಂ ರೂಲ್‌ ಚಳವಳಿಗೆ ಬಲ ತುಂಬಿದ್ದರು. 1916ರಲ್ಲಿ ಬೆಳಗಾವಿಯಲ್ಲಿ ಮತ್ತು 1918ರಲ್ಲಿ ವಿಜಯಪುರದಲ್ಲಿ ನಡೆದಿದ್ದ ರಾಜಕೀಯ ಸಮ್ಮೇಳನಗಳಿಗೆ ಗಾಂಧೀಜಿ ಹಾಜರಾಗಿದ್ದು, ಇಲ್ಲಿನವರ ಹೋರಾಟಕ್ಕೆ ಇನ್ನಷ್ಟು ಶಕ್ತಿ ಬಂದಿತ್ತು.

ಅಸಹಕಾರ ಚಳವಳಿ

1920ರಲ್ಲಿ ಅಸಹಕಾರ ಚಳವಳಿ ಆರಂಭಗೊಂಡಾಗಿನಿಂದ ಜನರ ಪಾಲ್ಗೊಳ್ಳುವಿಕೆ ಇನ್ನಷ್ಟು ಹೆಚ್ಚಾಯಿತು. ಶಾಲಾ ಕಾಲೇಜುಗಳು ಬಂದಾದವು. ಮಹಿಳೆಯರು, ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಹೋರಾಟಕ್ಕೆ ಧುಮುಕಿದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಗಾಂಧೀಜಿ, ಪಾನ ನಿಷೇಧ ಮತ್ತು ಅಸ್ಪೃಶ್ಯತಾ ನಿವಾರಣೆಗೆ ಕರೆಕೊಟ್ಟರು. 1930ರಲ್ಲಿ ಗುಜರಾತ್‌ನ ದಂಡಿಯಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸುತ್ತಿದ್ದಂತೆಯೇ, ಅಂಕೋಲೆಯ ಸಮುದ್ರ ತೀರದಲ್ಲಿ ಎಂ.ಪಿ. ನಾಡಕರ್ಣಿ ಅವರ ನೇತೃತ್ವದಲ್ಲಿ ಸತ್ಯಾಗ್ರಹಿಗಳು ಸೇರಿದ್ದರು. ಸುಮಾರು 40,000 ಸಂಖ್ಯೆಯಲ್ಲಿದ್ದ ಅವರು ಬ್ರಿಟಿಷರ ಕಾನೂನಿಗೆ ವಿರುದ್ಧವಾಗಿ ಉಪ್ಪನ್ನು ತಯಾರಿಸಿ, ಪೋಲೀಸರ ಎದುರೇ ಸಂತೆಯಲ್ಲಿ ಮಾರಾಟ ಮಾಡಿದರು. ಮಹಿಳೆಯರೂ ಉಪ್ಪಿನ ಸತ್ಯಾಗ್ರಹದಲ್ಲಿ ಸೇರಿ, ಕರಾವಳಿಯಾದ್ಯಂತ ಚಳುವಳಿ ತೀವ್ರವಾಗಿ ನಡೆಯಿತು.

ಕರ ನಿರಾಕರಣೆ ಚಳವಳಿ

ಇದರ ಬೆನ್ನಿಗೇ ಕರ ನಿರಾಕರಣೆ ಮತ್ತು ಕಾನೂನು ಭಂಗ ಚಳುವಳಿಯೂ ಆರಂಭವಾಯಿತು. ಅಂಕೋಲಾ, ಶಿರಸಿ, ಸಿದ್ದಾಪುರ ಮುಂತಾದೆಡೆಗಳಲ್ಲಿ ಈಗಾಗಲೇ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಚಳುವಳಿಯ ಶಿಸ್ತು, ಸಂಯಮ ಮೈಗೂಡಿಸಿಕೊಂಡಿದ್ದ ಜನ, ಬ್ರಿಟಿಷರ ಯಾವ ಪ್ರತಿಕ್ರಿಯೆಗೂ ಬಗ್ಗದೆ ನಡೆಸಿದ ಕರ ನಿರಾಕರಣೆಗೆ ಅಭೂತಪೂರ್ವ ಬೆಂಬಲ ಜನತೆಯಿಂದ ದೊರೆಯಿತು. ಇದೇ ದಿನಗಳಲ್ಲಿ ನಾ. ಸು. ಹರ್ಡೀಕರ್‌ ಸೇವಾದಳ ಸ್ಥಾಪಿಸಿದರು. ಎನ್‌. ಬಿ. ಕಬ್ಬೂರರ ನೇತೃತ್ದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಸತ್ಯಾಗ್ರಹ ನಡೆಯಿತು. ಏನೇ ಬಂದರೂ ಸ್ವರಾಜ್ಯ ಬೇಕು ಎಂಬ ನಿಲುವಿಗೆ ಈಗಾಗಲೇ ಬದ್ಧರಾಗಿದ್ದ ಜನ ಕ್ವಿಟ್‌ ಇಂಡಿಯಾ ಚಳುವಳಿ ಪ್ರಾರಂಭವಾದಾಗ ತೀವ್ರಗತಿಯಲ್ಲಿ ಸ್ಪಂದಿಸಿದರು.

ಈ ಸುದ್ದಿಯನ್ನೂ ಓದಿ: Independence Day 2023: ಹೀಗಿತ್ತು ಸ್ವತಂತ್ರ ಭಾರತ ಸಾಗಿ ಬಂದ ಹಾದಿ!

ನಾಡಿನ ಎಲ್ಲಾ ಸೆರೆಮನೆಗಳೂ ಹೋರಾಟಗಾರರಿಂದ ತುಂಬಿ ತುಳುಕುತ್ತಿದ್ದವು. ಪಾಠಶಾಲೆ, ಛತ್ರ, ಪ್ರವಾಸಿ ಮಂದಿರ- ಹೀಗೆ ಯಾವ್ಯಾವುದೋ ಕಟ್ಟಡಗಳನ್ನು ಹಂಗಾಮಿ ಸೆರೆಮನೆಗಳಾಗಿ ಮಾಡಲಾಗಿತ್ತು. ಕೆಲವೆಡೆಗಳಲ್ಲಿ ನಿತ್ಯವೂ ಬೆಳಗ್ಗೆ ಬಂಧಿಸಿ, ಸಂಜೆ ಬಿಡಗಡೆ ಮಾಡುವ ಸ್ಥಿತಿ ಎದುರಾಗಿತ್ತು. ಗೋಲೀಬಾರು, ಲಾಠಿ ಏಟು ನಿತ್ಯದ ವಿಷಯವಾಯಿತು. ಇದೇ ದಿನಗಳಲ್ಲಿ ಹಲವಾರು ಚಳುವಳಿಗಾರರು ಭೂಗತರಾಗಿ ಚಟುವಟಿಕೆ ನಡೆಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವವರೆಗೂ ಮುಂಬಯಿ ಕರ್ನಾಟಕ ಭಾಗದಲ್ಲಿ ಚಳುವಳಿಗಳು ತೀವ್ರವಾಗಿಯೇ ಪ್ರತಿಧ್ವನಿಸಿದವು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version