ಬೆಂಗಳೂರು: ಭಾರತವೀಗ ಅಭಿವೃದ್ಧಿಯ ವಾಯುವೇಗದಲ್ಲಿದೆ. ಕೇವಲ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕತೆ ಎರಡು ಟ್ರಿಲಿಯನ್‌ಗಳಷ್ಟು ಹೆಚ್ಚಿದೆ. ಜಾಗತಿಕ ಆರ್ಥಿಕತೆಯಲ್ಲಿ (World Economy) ಐದನೇ ಸ್ಥಾನದಲ್ಲಿರುವ ಭಾರತ (India in fifth Largest Economy) ಮುಂದಿನ ಐದು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೇರಲಿದೆ ಎಂದು ವಿಸ್ತಾರ ನ್ಯೂಸ್‌ನ (Vistara News) ಕಾರ್ಯ ನಿರ್ವಾಹಕ ಚೇರ್ಮನ್ (Executive Chairman) ಡಾ.ಎಚ್.ಎಸ್. ಶೆಟ್ಟಿ (Dr HS Shetty) ಹೇಳಿದರು.
ಅವರು ಮಂಗಳವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ವಿಸ್ತಾರ ನ್ಯೂಸ್ ಕಚೇರಿಯಲ್ಲಿ ಆಯೋಜಿಸಲಾದ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ (Independence day 2023) ಮಾತನಾಡಿದರು. ಒಂದು ಕಾಲದಲ್ಲಿ ಉದ್ಯಮಿಯಾಗಿ ನಾನು ವಿದೇಶಗಳಿಗೆ ಹೋಗುತ್ತಿದ್ದಾಗ ವಿಮಾನ ನಿಲ್ದಾಣವೂ ಸೇರಿದಂತೆ ಎಲ್ಲ ಕಡೆ ಭಾರತೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ನೋಡಲಾಗುತ್ತಿತ್ತು. ಆದರೆ, ಈಗ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ. ಈ ಬದಲಾವಣೆಯನ್ನು ಗಮನಿಸಿದಾಗ ನಮ್ಮ ದೇಶದ ಬಗ್ಗೆ ಹೆಮ್ಮೆ ಮೂಡುತ್ತದೆ ಎಂದು ಹೇಳಿದರು.
ಕೆಲವು ವರ್ಷಗಳ ಹಿಂದೆ ಏನನ್ನು ರಫ್ತು ಮಾಡಬೇಕು ಎಂದು ತಿಳಿಯದೆ ಗೊಂದಲದಲ್ಲಿದ್ದ ಭಾರತ ಈಗ ಯಾರೂ ನಂಬಲಾಗದಂತೆ ಯುದ್ಧ ಸಾಮಗ್ರಿಗಳನ್ನು ರಫ್ತು ಮಾಡುವಷ್ಟರ ಮಟ್ಟಕ್ಕೆ ಬೆಳೆದುನಿಂತಿದೆ ಎಂದು ಹೇಳಿದರು.
ಭಾರತದ ಜೀವನ ಪದ್ಧತಿ ಕಡೆಗೆ ಆಕರ್ಷಣೆ
ಭಾರತ ಎನ್ನುವುದು ಕೇವಲ ಒಂದು ಭೂಭಾಗವಲ್ಲ. ಅದಕ್ಕೆ ಗಡಿಗಳಿರುವುದು ಕೇವಲ ಮಿಲಿಟರಿ ಮತ್ತು ವಿದೇಶಿ ನೀತಿಗೆ. ಭಾರತೀಯತೆ ಎನ್ನುವುದು ಎಲ್ಲ ಗಡಿಗಳನ್ನು ಮೀರಿ ಪ್ರಪಂಚದಲ್ಲಿ ವ್ಯಾಪಿಸಿದೆ ಎಂದು ಹೇಳಿದ ಅವರು ಅದಕ್ಕೆ ಪೂರಕವಾಗಿ ಮೂರು ಉದಾಹರಣೆಗಳನ್ನು ನೀಡಿದರು.
- ನಮ್ಮ ಶ್ರೇಷ್ಠ ಗ್ರಂಥವಾಗಿರುವ ಭಗವದ್ಗೀತೆ ಮೇಲೆ ಜಗತ್ತಿಗೆ ಎಷ್ಟೊಂದು ಕುತೂಹಲವಿದೆ ಎಂದರೆ ಅರೆಬಿಕ್ ಭಾಷೆಯೊಂದರಲ್ಲೇ 15 ಕೋಟಿ ಪುಸ್ತಕಗಳು ಮಾರಾಟವಾಗಿವೆ.
- ಪ್ರಪಂಚದಲ್ಲಿ ಈಗ ಯಾವುದೇ ದೇವರನ್ನು ನಂಬದ ಒಂದು ವರ್ಗ ಸೃಷ್ಟಿಯಾಗಿದೆ (Peganism). ಆದರೆ ಅವರೆಲ್ಲರೂ ಅನುಸರಿಸುತ್ತಿರುವುದು ಭಾರತೀಯ ಜೀವನ ಪದ್ಧತಿಯನ್ನು.
- ಯುರೋಪ್‌ನಲ್ಲಿ ವೆಗನಿಸಂ (Veganism) ಸಂಸ್ಕೃತಿ ಹೆಚ್ಚುತ್ತಿದೆ. ಅಲ್ಲಿನ ಪ್ರಜೆಗಳು ಈಗ ಮಾಂಸ ಮತ್ತು ಹಾಲು ಸೇವನೆಯನ್ನು ಕಡಿಮೆ ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳು ನಮ್ಮ ಪ್ರಾಚೀನ ನಂಬಿಕೆಗಳನ್ನು ಆಧರಿಸಿದ್ದು.
ಭಾರತೀಯ ಸಂಸ್ಕೃತಿ, ಯೋಗ, ತತ್ವ, ಶಿಸ್ತುಗಳು ನಾವು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡದೆಯೇ ಜಗತ್ತಿನಾದ್ಯಂತ ತೆರೆಗೆದುಕೊಳ್ಳುತ್ತಿವೆ. ಇದು ನಮ್ಮ ಸಂಸ್ಕೃತಿಯ ಶಕ್ತಿ ಎಂದು ಅವರು ಹೆಮ್ಮೆ ಪಟ್ಟರು.
ಇದನ್ನೂ ಓದಿ : Independence Day 2023: ಮಣಿಪುರ ಶಾಂತಿಯಿಂದ ಡಿಜಿಟಲ್ ಕ್ರಾಂತಿವರೆಗೆ; ಮೋದಿ ಕೆಂಪು ಕೋಟಿ ಭಾಷಣದ ಮೋಡಿ
ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತಾರ ನ್ಯೂಸ್ ಚೇರ್ಮನ್ ಮತ್ತು ಆಡಳಿತ ನಿರ್ದೇಶಕರಾದ ಎಚ್.ವಿ. ಧರ್ಮೇಶ್ (HV Dharmesh), ವಿಸ್ತಾರ ನ್ಯೂಸ್‌ನ ಸಂಪಾದಕರಾದ ಶರತ್ ಎಂ.ಎಸ್, ಡಾ.ಎಚ್.ಎಸ್. ಶೆಟ್ಟಿ ಅವರ ಧರ್ಮಪತ್ನಿ ಡಾ. ಸುಮನಾ ಶೆಟ್ಟಿ ಅವರು ಉಪಸ್ಥಿತರಿದ್ದರು.