ಮೈಸೂರು/ಕಾರವಾರ: 77ನೇ ಸ್ವತಂತ್ರ್ಯ ದಿನದ (Independence Day 2023) ಸುದೀರ್ಘ ಸಂದೇಶದ ಭಾಷಣವನ್ನು ಮಾಡುವಾಗ ಬಿಸಿಲ ಝಳಕ್ಕೆ ಸುಸ್ತಾಗಿ ಸಚಿವ ಡಾ.ಮಹದೇವಪ್ಪ ಕುಸಿದು ಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಇನ್ನೊಂದೆಡೆ ಕಾರವಾರದಲ್ಲಿ ಪರೇಡ್‌ನಲ್ಲಿ ಭಾಗಿಯಾಗಿದ್ದ ಮಹಿಳಾ ಪಿಎಸ್‌ಐ ತಲೆಸುತ್ತಿ ಬಿದ್ದರು. ಯಾದಗಿರಿ ಹಾಗೂ ಉಡುಪಿಯಲ್ಲಿ ವಿದ್ಯಾರ್ಥಿಗಳು ಕುಸಿದು ಅಸ್ವಸ್ಥಗೊಂಡರು.
ಭಾಷಣದ ನಡುವೆ ಎರಡು ಬಾರಿ ಸಚಿವ ಡಾ.ಮಹದೇವಪ್ಪ ನೀರು ಕುಡಿದಿದ್ದರು. ಭಾಷಣ ಮುಗಿದ ನಂತರ ಬಲೂನ್ ಹಾರಿಸುವ ಕಾರ್ಯ ಇತ್ತು. ಈ ವೇಳೆ ನಿಲ್ಲಲಾರದೆ ಸಚಿವರು ವೇದಿಕೆಗೆ ಒರಗಿದರು. ತಕ್ಷಣ ಸಹಾಯಕ್ಕೆ ಬಂದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಹದೇವಪ್ಪ ಅವರನ್ನು ಚೇರ್‌ನಲ್ಲಿ ಕೂರಿಸಿದರು. ಸ್ವಲ್ಪ ಸಮಯ ಸುಧಾರಿಸಿಕೊಂಡು ಬಳಿಕ ಕಾರ್ಯಕ್ರಮವನ್ನು ಮುಂದುವರಿಸಿದರು.
ಕಾರವಾರದಲ್ಲಿ ಪರೇಡ್‌ನಲ್ಲಿ ತಲೆಸುತ್ತಿ ಬಿದ್ದ ಮಹಿಳಾ ಪಿಎಸ್‌ಐ
ಸ್ವಾತಂತ್ರ್ಯೋತ್ಸವ ಪರೇಡ್ ವೇಳೆ ಮಹಿಳಾ ಪಿಎಸ್‌ಐ ತಲೆಸುತ್ತಿ ಬಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದಿದೆ. ಸೈಬರ್ ಅಪರಾಧ ಠಾಣೆಯ ಪಿಎಸ್‌ಐ ಕೋಕಿಲಾ ತಲೆಸುತ್ತಿ ಬಿದ್ದ ಕಮಾಂಡರ್ ಆಗಿದ್ದಾರೆ.
ಪರೇಡ್ ತಂಡಗಳು ಬೆಳಗಿನಿಂದ ಬಿಸಿಲಿನಲ್ಲೇ ನಿಂತಿದ್ದರು. ಇತ್ತ ಸಚಿವ ಮಂಕಾಳು ವೈದ್ಯ ಭಾಷಣದ ವೇಳೆ ಕೋಕಿಲಾ ಅವರಿಗೆ ತಲೆ ತಿರುಗಿದೆ. ಕೂಡಲೇ ಪೊಲೀಸ್ ಸಿಬ್ಬಂದಿ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಚೇತರಿಸಿಕೊಂಡ ಕೋಕಿಲಾ ಮತ್ತೆ ನಿರ್ಗಮನ ಪಥಸಂಚಲನದಲ್ಲಿ ಭಾಗಿಯಾದರು.
ಇದನ್ನೂ ಓದಿ: Road Accident : ವೀಲಿಂಗ್ ಪುಂಡರ ಹುಚ್ಚಾಟಕ್ಕೆ ಸವಾರ ಬಲಿ, ಮತ್ತೊಬ್ಬ ಗಂಭೀರ
ಲಕ್ಷ್ಮಿ ಹೆಬ್ಬಾಳ್ಕರ್ ಭಾಷಣದ ವೇಳೆ ಕುಸಿದು ಬಿದ್ದ ವಿದ್ಯಾರ್ಥಿಗಳು
ಇತ್ತ ಉಡುಪಿಯಲ್ಲೂ ವಿದ್ಯಾರ್ಥಿಗಳು ಕುಸಿದು ಬಿದ್ದ ಘಟನೆ ನಡೆದಿದೆ. ಉಡುಪಿ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆ ಪಥ ಸಂಚಲನ ದಳದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್ ಭಾಷಣದ ವೇಳೆ ಕೆಲ ವಿದ್ಯಾರ್ಥಿಗಳು ಕುಸಿದು ಬಿದ್ದರು.
ವಿವಿಧ ದಳದಲ್ಲಿ ಪರೇಡ್ ನಡೆಸಿ ಸುಸ್ತಾಗಿದ್ದ ವಿದ್ಯಾರ್ಥಿಗಳು ಕುಸಿದು ಬಿದ್ದರು. ತಕ್ಷಣವೇ ವಿದ್ಯಾರ್ಥಿಗಳಿಗೆ ಗ್ಲೂಕೋಸ್ ನೀಡಿ ಶಿಕ್ಷಕರು ಆರೈಕೆ ಮಾಡಿದರು. ಜಿಲ್ಲೆಯ ವಿವಿಧ ಶಾಲೆ, ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕವಾಯತು ನಿರ್ಗಮನದಂದು ಕುಸಿದು ಬಿದ್ದ ಮೂವರು ವಿದ್ಯಾರ್ಥಿಗಳು
ಇತ್ತ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಕವಾಯತು ನಿರ್ಗಮನದ ವೇಳೆ ಮೂವರು ಶಾಲಾ ವಿದ್ಯಾರ್ಥಿಗಳು ಕುಸಿದು ಬಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಪಥಸಂಚಲನ ಮುಕ್ತಾಯದ ವೇಳೆ ಈ ಘಟನೆ ನಡೆದಿದೆ.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ ಪಥ ಸಂಚಲನ ದಳದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಯಾದಗಿರಿ ನಗರದ ಆದರ್ಶ ಶಾಲೆಯ ಮೂವರು ವಿದ್ಯಾರ್ಥಿಗಳು ಕುಸಿದು ಬಿದ್ದರು. ಬೆಳಗ್ಗೆ ಬೇಗನೇ ಬಂದಿದ್ದರಿಂದ ಊಟ ಮಾಡದೆ ಪರೇಡ್ ನಡೆಸಿ ಸುಸ್ತಾಗಿದ್ದರು. ವಿದ್ಯಾರ್ಥಿಗಳಿಗೆ ತಕ್ಷಣವೇ ಗ್ಲೂಕೋಸ್ ನೀಡಿ ಶಿಕ್ಷಕರು ಆರೈಕೆ ಮಾಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ