ಬೆಂಗಳೂರು: ಮಹಿಳೆಯರು, ಬಡ ಮತ್ತು ಮಧ್ಯಮ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಸರ್ಕಾರ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ (Independence Day 2024).
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜಭವನದ ಅಂಗಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. ಕರ್ನಾಟಕದ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಭಾಷಣ ಆರಂಭಿಸಿದ ರಾಜ್ಯಪಾಲರು, ʼʼಆಗಸ್ಟ್ 15 ನಮಗೆ ಐತಿಹಾಸಿಕ ದಿನ. ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರು ಮತ್ತು ಹುತಾತ್ಮರನ್ನು ಸ್ಮರಿಸುವ ದಿನ. ಈ ದಿನ ಅವರಿಂದ ಸ್ಫೂರ್ತಿ ಪಡೆದು ಹೊಸ ಹಾದಿ ಮತ್ತು ಹೊಸ ಸಂಕಲ್ಪದೊಂದಿಗೆ ಮುನ್ನಡೆಯಲು ಅವಕಾಶವಿದೆʼʼ ಎಂದು ಹೇಳಿದ್ದಾರೆ.
ಕರ್ನಾಟಕ ದೇಶದ ಪ್ರಗತಿಪರ ರಾಜ್ಯ. ಇದು ಅಭಿವೃದ್ಧಿ ಉಪಕ್ರಮಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ ಎಂದು ತಿಳಿಸಿದ ಅವರು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಪೂರ್ಣಾಂಕ ನೀಡಿದ್ದಾರೆ. ʼʼಮಹಿಳೆಯರು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ಮೂಲಕ ನಿರುದ್ಯೋಗಿ ಯುವಕರಿಗೆ ಸಹಾಯ ಮಾಡಲಾಗುತ್ತಿದೆʼʼ ಎಂದು ಹೇಳಿದ್ದಾರೆ. ಸ್ವಾತಂತ್ರ್ಯಾನಂತರ ದೇಶ ಮತ್ತು ಕರ್ನಾಟಕದಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಿದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ
ರಾಜಭವನದ ಅಂಗಳದಲ್ಲಿರುವ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾಲಾರ್ಪಣೆ ಮಾಡಿದರು. ಬಳಿಕ ಧ್ವಜಾರೋಹಣ ನೆರವೇರಿಸಿದರು. ಜತೆಗೆ ಮುಖ್ಯ ಭದ್ರತಾ ಅಧಿಕಾರಿ ಎಸಿಪಿ ನಿಂಗಾರೆಡ್ಡಿ ನೇತೃತ್ವದ ಪೊಲೀಸ್ ತಂಡದ ಗೌರವ ರಕ್ಷೆ ಸ್ವೀಕರಿಸಿದರು. ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್, ರಾಜ್ಯಪಾಲರ ಆಪ್ತ ಕಾರ್ಯದರ್ಶಿ ಪಂಕಜ್ ಮೆಹ್ತಾ, ಉಪ ಕಾರ್ಯದರ್ಶಿ ಯೋಗೇಶ್ ಉಪಧ್ಯಾಯ್, ಎಡಿಸಿ ಸಾಬು ಥಾಮಸ್, ಎಡಿಸಿ ಸಂದೀಪ್ ಶರ್ಮಾ, ಒಎಸ್‌ಡಿಗಳಾದ ಶಂಕರ್ ಲಾಲ್ ಗುಜರ್, ಆದರ್ಶ್ ಪಾಸ್ವಾನ್ ಮತ್ತಿತರರು ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ ಎಂದ ಸಿಎಂ
ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮತ್ತೊಮ್ಮೆ ಭರವಸೆ ನೀಡಿದ್ದಾರೆ.
ʼʼಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಸಮಸ್ತ ಜನರ ಬದುಕಿಗೆ ಒಂದು ಆರ್ಥಿಕ ಭದ್ರತೆಯನ್ನು ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಈ ಯೋಜನೆ ಮುಂದುವರಿಯಲಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದು ಹೋಗಿರುವ ಜನರ ಬದುಕಿಗೆ ಈ ಯೋಜನೆಗಳು ನೆಮ್ಮದಿ ತಂದಿವೆ. ಈ ಯೋಜನೆಗಳ ಮೂಲಕ ಸಂಪತ್ತಿನ ಮರುಹಂಚಿಕೆಗೆ ಒತ್ತು ನೀಡುತ್ತಲೇ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರವಾದ ರೀತಿಯಲ್ಲಿ ಹೆಚ್ಚಿಸಲು ಕೂಡಾ ಅಷ್ಟೇ ಬದ್ಧತೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವುದರ ಜತೆಗೆ ಈ ನೆಲದ ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಪರಂಪರೆಯನ್ನು ಮುಂದುವರಿಸಿ ಕರ್ನಾಟಕವನ್ನು ನಿಜ ಅರ್ಥದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ರೂಪಿಸಲು ನಾವು ಕಾರ್ಯತತ್ಪರಾಗಿದ್ದೇವೆʼʼ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Independence day 2024: ವಿಕಸಿತ ಭಾರತ @2047 ಎಂಬುದು ಕೇವಲ ಪದಗಳಲ್ಲ..140 ಕೋಟಿ ಜನರ ಸಂಕಲ್ಪ-ಪ್ರಧಾನಿ ಮೋದಿ