Site icon Vistara News

Independence Day | ದೇಶವನ್ನು ಮತ್ತೊಮ್ಮೆ ಒಗ್ಗೂಡಿಸಿದ ತಿರಂಗಾ: ನಳಿನ್‌ ಕುಮಾರ್‌ ಕಟೀಲ್‌

BJP office

ಬೆಂಗಳೂರು: ಹಿಂದೆ ವಂದೇ ಮಾತರಂ ಹೇಗೆ ಎಲ್ಲರನ್ನು ಒಗ್ಗೂಡಿಸಿತೋ ಹಾಗೆ ತಿರಂಗ ಯಾತ್ರೆ ನಮ್ಮೆಲ್ಲರನ್ನೂ ಮತ್ತೆ ಒಗ್ಗೂಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಅಂಗವಾಗಿ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಗೌರವ ಸೂಚಿಸಿದ ಕಟೀಲ್ ಅವರು ಇಡೀ ಜಗತ್ತೇ ಈಗ ನಮ್ಮ ದೇಶವನ್ನು ಗೌರವಿಸುತ್ತಿದೆ ಎಂದರು.

ಸಾಕಷ್ಟು ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಗುಲಾಮಗಿರಿಯಿಂದ ತಾಯಿ ಭಾರತಿಯನ್ನು ರಕ್ಷಿಸಲು ನಾವು ಬಹಳ ಹೋರಾಟ ಮಾಡಿದ್ದೇವೆ. ಈ ಕಳೆದ ೭೫ ವರ್ಷಗಳಲ್ಲಿ ಸೈನಿಕರ ತ್ಯಾಗದಿಂದ ಸ್ವಾತಂತ್ರ್ಯ ಉಳಿದಿದೆ. ಅಂಥ ಯೋಧರಿಗೆ ನಾವು ನಮಿಸೋಣ ಎಂದರು ನಳಿನ್‌ ಕುಮಾರ್‌ ಕಟೀಲ್‌.

ʻʻ250 ವರ್ಷ ಮೊಘಲರು ಆಳಿದ ನಂತರ ಬ್ರಿಟಿಷರು ಆಕ್ರಮಣ ನಮ್ಮ ಮೇಲೆ ಆಕ್ರಮಣ ಮಾಡಿದರು. 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ತಾತ್ಯಾ ಟೋಪಿ, ಮಂಗಲ್ ಪಾಂಡೆ ಹೋರಾಟ ಸ್ವಾತಂತ್ರ್ಯಕ್ಕೆ ದಿಕ್ಸೂಚಿಯಾಯಿತು. ಕಾಂತ್ರಿಕಾರಿ ಪುರುಷರ ಹೋರಾಟ, ನಿರಂತರ ಬಲಿದಾನ ಸ್ವಾತಂತ್ರ್ಯಕ್ಕೆ‌ ಕಾರಣವಾಯಿತು. ಮಹಾತ್ಮಾ ಗಾಂಧಿ ಅವರ ಅಹಿಂಸಾ ಹೋರಾಟ ಪ್ರೇರಣೆ ನೀಡಿತು. ಬಂಕಿಮ ಚಂದ್ರ ಚಟರ್ಜಿಯವರ ವಂದೇ ಮಾತರಂ ಪ್ರತಿಯೊಬ್ಬ ನಾಗರಿಕರನ್ನು ಒಗ್ಗೂಡಿಸಿತುʼʼ ಎಂದ ನಳಿನ್‌ ಕುಮಾರ್‌ ಕಟೀಲ್‌, ಈಗ ತಿರಂಗವೇ ಇಡೀ ದೇಶವನ್ನು ಬೆಸೆದಿದೆ ಎಂದು ಹೇಳಿದರು.

ʻʻಹಿಂದೆ ಯುದ್ಧವಾದಾಗ, ಕ್ರಿಕೆಟ್‌ ಮ್ಯಾಚುಗಳು ನಡೆದಾಗ ನಾವು ಒಗ್ಗೂಡಿದ್ದೇವೆ. ಆಗಲೂ ತಿರಂಗಾ ಹಿಡಿದೇ ನಾವು ಒಂದಾಗಿದ್ದು. ಈ ನಡುವೆ ಕೆಲವೊಮ್ಮೆ ತಿರಂಗಾ ಹಾರಿಸಲು ಕೂಡಾ ವಿರೋಧ ವ್ಯಕ್ತವಾಯಿತು. ಆದರೆ, ಈ ಬಾರಿ ಮೋದಿ ಅವರ ಒಂದೇ ಕರೆಗೆ ಇಡೀ ದೇಶವೆ ತಿರಂಗಾ ಹಿಡಿದುಕೊಂಡಿದೆʼʼ ಎಂದರು ನಳಿನ್‌ ಕುಮಾರ್‌ ಕಟೀಲ್‌.

ʻʻಮುಂದೆ ಬರುತ್ತಿರುವುದು ಅಮೃತ ಕಾಲ. ಇದರಲ್ಲಿ ಪ್ರತಿಯೊಬ್ಬ ನಾಗರಿಕರೂ ಭಾಗಿಯಾಗಬೇಕು. ಇನ್ನು 25 ವರ್ಷಗಳ ಕಾಲ ಯಶಸ್ವಿಯಾಗಿ ಹೆಜ್ಜೆ ಹಾಕಬೇಕುʼʼ ಎಂದ ನಳಿನ್‌ ಇಡೀ ಜಗತ್ತೇ ನಮ್ಮದಾಗಬೇಕು ಎನ್ನುವುದು ಮೋದಿ ಕನಸು, ಅದು ಸಾಕಾರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್, ಬಿಜೆಪಿ ರಾಜ್ಯ ಸಂಘಟನಾ ಪ್ರದಾನ ಕಾರ್ಯದರ್ಶಿ ರಾಜೇಶ್, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಪರಿಷತ್ ಸದಸ್ಯ ಎನ್.ರವಿಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ| ಚಾಮರಾಜಪೇಟೆ ಮೈದಾನದಲ್ಲಿ ತಿರಂಗಾ ಅರಳಿತು, ಇನ್ನು ಗಣೇಶೋತ್ಸವ ಮಾಡಿಯೇ ಸಿದ್ಧ ಎಂದ ಶ್ರೀರಾಮ ಸೇನೆ

Exit mobile version