ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿ ರಾಜ್ಯದ ಪ್ರಧಾನ ಕಾರ್ಯಕ್ರಮ ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆಯಿತು. ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ರೀತಿಯಲ್ಲಿ ಗಮನ ಸೆಳೆದರು.
ನೆಹರೂ ನೆನಪಿಸಿದರೂ ವಿಪಕ್ಷಗಳ ಕೆಣಕಿದರು
ಜಾಹೀರಾತಿನಲ್ಲಿ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಚಿತ್ರವನ್ನು ಬಿಟ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಸಿಎಂ ಬೊಮ್ಮಾಯಿ ಅವರು, ಪ್ರಧಾನ ಭಾಷಣದಲ್ಲಿ ನೆಹರು ಅವರನ್ನು ಸ್ಮರಿಸಿ ತಿದ್ದುಪಡಿ ಮಾಡಿಕೊಂಡರು. ಆದರೆ, ಅದೇ ವೇಳೆ ವಿರೋಧ ಪಕ್ಷಗಳನ್ನು ಚೆನ್ನಾಗಿಯೇ ಕೆಣಕಿದ್ದಾರೆ.
ನೆಹರೂ ಮೊದಲಾದ ಪ್ರಧಾನಿಗಳನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ, ಕೆಲವರನ್ನು ಬಿಂಬಿಸುವ ನೆಪದಲ್ಲಿ ಅಂಬೇಡ್ಕರ್ ಅವರನ್ನು ಮರೆಸುವ ಪ್ರಯತ್ನ ಆಗ್ತಿದೆ ಎಂದು ಹೇಳಿದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿ ಅವರನ್ನು ಕೂಡಾ ಮರೆಯಲಾಗುತ್ತಿದೆ ಎಂದು ಕಾಂಗ್ರೆಸ್‌ನ್ನು ಕೆಣಕಿದರು. ಇವರೆಲ್ಲರನ್ನು ನೆನಪಿಸುವ ಮ್ಯೂಸಿಯಂನ್ನು ಮೋದಿ ಸ್ಥಾಪಿಸಿದ್ದಾರೆ ಎಂದು ಹೇಳಿಕೊಂಡರು.
ಪುಸ್ತಕ ನೋಡದೆ ಭಾಷಣ
ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಪುಸ್ತಕ ನೋಡಿ ಸ್ವಾತಂತ್ರ್ಯ ಭಾಷಣ ಮಾಡುವುದು ರೂಢಿ. ಆದರೆ, ಈ ಸಂಪ್ರದಾಯವನ್ನು ಮುರಿದ ಬೊಮ್ಮಾಯಿ ಪುಸ್ತಕವನ್ನು ನೋಡದೆಯೇ ೪೫ ನಿಮಿಷಗಳ ಕಾಲ ಮಾತನಾಡಿದರು.
ಮೊದಲ ಬಾರಿಗೆ ಬುಕ್ ನೋಡದೇ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುಸ್ತಕದಲ್ಲಿ ಇಲ್ಲದೆ ಇರುವ ಹಲವಾರು ವಿಚಾರಗಳನ್ನೂ ಪ್ರಸ್ತಾಪ ಮಾಡಿದರು.
ಬುಲೆಟ್ ಪ್ರೂಫ್ ಗಾಜು ತೆಗೆಸಿದರು
ಈ ನಡುವೆ, ಭಾಷಣಕ್ಕೆ ಮುನ್ನ ಪೋಡಿಯಂಗೆ ಹಾಕಿದ್ದ ಬುಲೆಟ್ ಪ್ರೂಫ್ ಗಾಜನ್ನು ಪೊಲೀಸರು ತೆಗೆದರು. ಸಿಎಂ ಸೂಚನೆಯಂತೆ ಈ ರೀತಿ ಮಾಡಲಾಯಿತು.
ಇದನ್ನೂ ಓದಿ| ವಿವಾದಕ್ಕೆ ತೆರೆ: ನೆಹರೂ ಸೇರಿದಂತೆ ಯಾವ ಪ್ರಧಾನಿಯನ್ನೂ ಮರೆಯುವ ಪ್ರಶ್ನೆಯೇ ಇಲ್ಲ ಎಂದ ಬೊಮ್ಮಾಯಿ