ಬೆಂಗಳೂರು: ಸರಕಾರದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಚಿತ್ರ ಹಾಕಿಲ್ಲ ಎಂದು ಕಾಂಗ್ರೆಸ್ ಆಕ್ಷೇಪಿಸಿದ ಮತ್ತು ಹಲವರು ಪ್ರಶ್ನಿಸಿದ್ದಕ್ಕೆ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಸಾಫ್ಟ್ ಆಗಿ ಉತ್ತರ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಠೀರವ ಸ್ಟೇಡಿಯಂನಲ್ಲಿ ಖಡಕ್ಕಾಗಿ ಮರುದಾಳಿ ನಡೆಸಿದ್ದಾರೆ. ಮಾಣೆಕ್ ಸಾ ಪರೇಡ್ ಮೈದಾನದ್ದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಧಿಕೃತ ಸರಕಾರಿ ಕಾರ್ಯಕ್ರಮ, ಕಂಠೀರವದಲ್ಲಿ ನಡೆದದ್ದು ಬಿಜೆಪಿಯ ಅಧಿಕೃತ ಕಾರ್ಯಕ್ರಮ. ಈ ವೇದಿಕೆಯನ್ನು ಬೊಮ್ಮಾಯಿ ಕಾಂಗ್ರೆಸ್ ಮೇಲೆ ದಾಳಿಗೆ ಚೆನ್ನಾಗಿ ಬಳಸಿಕೊಂಡರು.
ಬಲಿದಾನ ಮಾಡಿದ ಎಲ್ಲರ ಹೆಸರೇಕೆ ದಾಖಲಾಗಿಲ್ಲ?
ನೆಹರು ಅವರ ಫೋಟೊವನ್ನು ಹಾಕಿಲ್ಲ ಎಂದು ಪ್ರಶ್ನಿಸಿದ ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬೊಮ್ಮಾಯಿ, ಅದೆಷ್ಟೋ ಮಂದಿ ತ್ಯಾಗಿಗಳ ಹೆಸರು ಸ್ವಾತಂತ್ರ್ಯದ ಇತಿಹಾಸದಲ್ಲಿ ದಾಖಲಾಗದೆ ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದರು.
ʻʻದೇವರ ಇಚ್ಛೆಯಂತೆ ನರೆಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ನಡೆಯುತ್ತಿದೆ. ಸ್ವಾತಂತ್ರ್ಯದ ಇತಿಹಾಸವನ್ನು ಬರೆಯುವವರು 75 ವರ್ಷದಲ್ಲಿ ಬದಲಾಗಿದ್ದಾರೆ. ಸತ್ಯವನ್ನು ಅರಿತುಕೊಳ್ಳುವ ಸಮಯ ಬಂದಿದೆ. ಸಾವಿರಾರು ಜನ ತ್ಯಾಗ, ಬಲಿದಾನ ನೀಡಿದ್ದಾರೆ. ಅಂತವರ ಹೆಸರು ಎಲ್ಲೂ ಉಲ್ಲೇಖವಾಗಿಲ್ಲ, ಪ್ರಕಟವಾಗಿಲ್ಲ. ಕರ್ನಾಟಕದಲ್ಲೇ ಅನೇಕರು ಮನೆ, ಮಠ ಕಳೆದುಕೊಂಡು ಹೋರಾಟ ಮಾಡಿದ್ದಾರೆ. ಅಂತವರ ಹೆಸರು ಯಾಕೆ ಎಲ್ಲೂ ಪ್ರಕಟವಾಗಿಲ್ಲ ಅಂತ ನಾನು ಪ್ರಶ್ನೆ ಮಾಡ್ತೀನಿʼʼ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ʻʻಜಲಿಯನ್ ವಾಲಾ ಬಾಗ್‌ನಲ್ಲಿ ಸಾವಿರಾರು ಜನ ಸತ್ತರು, ಅವರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖ ಮಾಡಿಲ್ಲ. ಅಂಕೋಲಾ ಸತ್ಯಾಗ್ರಹ, ಈಸೂರು ಸತ್ಯಾಗ್ರಹದಲ್ಲಿ ಅನೇಕರ ಬಲಿದಾನವಾಯಿತು. ಅವರ ಬಗ್ಗೆ ಇತಿಹಾಸ ಹೇಳಿಲ್ಲʼʼ ಎಂದು ಬೊಮ್ಮಾಯಿ ನೆನಪಿಸಿದರು.
ದೇಶದ ವಿಭಜನೆಯನ್ನು ವೀರ್ ಸಾವರ್ಕರ್ ಮತ್ತು ಖಾನ್ ಅಬ್ದುಲ್ ಜಫರ್ ಖಾನ್ ವಿರೋಧಿಸಿದರು. ಆದರೂ ವಿಭಜನೆ ಮಾಡಲಾಯಿತು. ದೇಶ ವಿಭಜನೆಯಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು. ೧೦ ಲಕ್ಷ ಜನ ಮನೆ ಮಠ ಕಳೆದುಕೊಂಡರು. ಅದನ್ನು ಯಾರೂ ಕೇಳುತ್ತಿಲ್ಲ ಎಂದು ಬೊಮ್ಮಾಯಿ ಖಾರವಾಗಿ ಪ್ರಶ್ನಿಸಿದ್ದಾರೆ.
ʻʻಅನ್ನ ಕೊಡುವ ರೈತರಿಗೆ ನಾನು ನಮನ ಹೇಳುತ್ತೇನೆ. ಯುದ್ಧದಲ್ಲಿ ಚೀನಾದ ವಿರುದ್ದ ಮಾತ್ರ ನಾವು ಹಿಂದೆ ಇದ್ದೆವು. ಅದು ಕೂಡ ಅಂದಿನ ಸರ್ಕಾರಗಳು ಬೇಕಾದ ಬೆಂಬಲ ಕೊಟ್ಟಿದ್ದರೆ ಚೀನಾವನ್ನು ಕೂಡ ಹಿಮ್ಮೆಟ್ಟಿಸುತ್ತಿದ್ದೆವು. ಅಂಥ ವೀರ ಯೋಧರಿಗೆ ನಮನ ಸಲ್ಲಿಸುತ್ತೇನೆ. ಬಡವರು, ಕೂಲಿಕಾರ್ಮಿಕರು, ವಿಜ್ಞಾನಿಗಳು, ವೈದ್ಯರು ಎಲ್ಲರಿಗೂ ನಮನಗಳನ್ನು ಹೇಳ್ತೇನೆʼʼ ಎಂದು ನೆನಪಿಸಿಕೊಳ್ಳಬೇಕಾದ ಸಾಕಷ್ಟು ಬೇರೆ ವ್ಯಕ್ತಿಗಳಿದ್ದಾರೆ ಎಂದು ಬೊಮ್ಮಾಯಿ ಸೂಚ್ಯವಾಗಿ ಹೇಳಿದರು.
ನೆಹರು ಹೆಸರು ಹೇಳದ ಬೊಮ್ಮಾಯಿ
ʻʻಇವತ್ತು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಅಂತ ಹೋರಾಟ, ಚರ್ಚೆ ಮಾಡ್ತಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಡವರು ಅನಾಮಧೇಯರು. ಸುಭಾಷ್ ಚಂದ್ರ ಬೋಸ್, ಗಾಂಧಿ, ಪಟೇಲ್, ಲಾಲ ಲಜಪತರಾಯ, ವೀರ ಸಾವರ್ಕರ್, ತಾಂತ್ಯ ಟೋಪೆ, ಮಂಗಲ್ ಪಾಂಡೆ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಎಲ್ಲರೂ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆʼʼ ಎಂದು ಹೇಳಿದ ಬೊಮ್ಮಾಯಿ ಅವರು ಈ ಪಟ್ಟಿಯಲ್ಲಿ ನೆಹರು ಹೆಸರನ್ನು ಉಲ್ಲೇಖಿಸಲಿಲ್ಲ.
ನೆಹರು ಫೋಟೊ ಹಾಕಿದ್ದೆವು
ʻʻನಿನ್ನೆ ನಾವು ದೇಶದ ಸ್ವಾತಂತ್ರ್ಯ ಹೋರಾಟಗಾರ ಫೋಟೊ ಹಾಕಿದ್ದೆವು. ಈ ಎಲ್ಲಾ ನಾಯಕರನ್ನು ಗುರುತಿಸಿ ಫೋಟೊ ಹಾಕಿದ್ದಕ್ಕೆ ಯಾರು ಏನು ಮಾತನಾಡಿಲ್ಲ. ಆದ್ರೆ ಅವರ ನಾಯಕರ ಫೋಟೊ ತೆಗೆದಿದ್ದಕ್ಕೆ ದುಃಖವಾಗಿದೆ ಎಂದು ಮಾತನಾಡಿದರು. ನೆಹರು ಅವರ ಕೆಲಸವನ್ನು ನಾವು ಗೌರವಿಸಿದ್ದೇವೆ. ನೆಹರುರವರ ಫೋಟೊ ಕೂಡ ಪ್ರಕಟಣೆಯಲ್ಲಿತ್ತುʼʼ ಎಂದರು ಬೊಮ್ಮಾಯಿ.
ಲಾಭ ಪಡೆದುಕೊಂಡವರು ಯಾರು?
ಸುಭಾಷ್ ಚಂದ್ರ ಬೋಸ್, ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಅಂಬೇಡ್ಕರ್ ಕುಟುಂಬದವರು ಯಾರಾದರೂ ಇಂದು ರಾಜಕಾರಣದಲ್ಲಿ ಇದ್ದಾರಾ? ಹಾಗಿದ್ದರೆ ಸ್ವಾತಂತ್ರ್ಯದ ಲಾಭ ಪಡೆದುಕೊಂಡ ಕುಟುಂಬದವರು ಇದಕ್ಕೆ ಉತ್ತರ ಕೊಡಬೇಕು ಎಂದು ಬೊಮ್ಮಾಯಿ ಕಾಂಗ್ರೆಸ್‌ನ್ನು ಕೆಣಕಿದರು.
ಇದನ್ನೂ ಓದಿ| ವಿವಾದಕ್ಕೆ ತೆರೆ: ನೆಹರೂ ಸೇರಿದಂತೆ ಯಾವ ಪ್ರಧಾನಿಯನ್ನೂ ಮರೆಯುವ ಪ್ರಶ್ನೆಯೇ ಇಲ್ಲ ಎಂದ ಬೊಮ್ಮಾಯಿ