Site icon Vistara News

Independence day |ಬಿಜೆಪಿಗೆ ಕೌಂಟರ್‌: ಕಾಂಗ್ರೆಸ್‌ನ ಸ್ವಾತಂತ್ರ್ಯ ಸಂಭ್ರಮದಲ್ಲಿ ಮಿಂಚಿದ ನೆಹರು ಪವರ್‌

Congress independence day

ಬೆಂಗಳೂರು: ರಾಜ್ಯ ಸರಕಾರ ತನ್ನ ಜಾಹೀರಾತಿನಲ್ಲಿ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು ಅವರನ್ನು ನೆನಪಿಸಿಕೊಳ್ಳದೆ ಇರುವುದಕ್ಕೆ ಕಾಂಗ್ರೆಸ್‌ ಕೌಂಟರ್‌ ಕೊಟ್ಟಿದೆ. ಸೋಮವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕಾಗಿ (Independence day) ಕಾಂಗ್ರೆಸ್‌ ಭವನದಲ್ಲಿ ನಿರ್ಮಿಸಿದ್ದ ವೇದಿಕೆಯ ಹಿನ್ನೆಲೆಯಾಗಿ ನೆಹರೂ ಅವರನ್ನೇ ಬಳಸಿಕೊಂಡಿದೆ.

೧೯೪೭ರಲ್ಲಿ ಮೊದಲ ಸ್ವಾತಂತ್ರ್ಯೋತ್ಸವ ನಡೆದಾಗ ಆಗಿನ ಪ್ರಧಾನಿ ನೆಹರು ಅವರು ದಿಲ್ಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಚಿತ್ರವನ್ನು ದೊಡ್ಡ ಬ್ಯಾನರ್‌ ಆಗಿ ಮಾಡಲಾಗಿತ್ತು. ಅದರಲ್ಲಿ ʻಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯ ಮೇಲೆ ಜವಾಹರ ಲಾಲ್‌ ನೆಹರು ಅವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವುದುʼ ಎಂದು ಶೀರ್ಷಿಕೆ ಬರೆಯಲಾಗಿದೆ. ನೆಹರೂ ಮಾಡಿದ ಮಹಾಸಾಧನೆಯನ್ನು ಈ ಮೂಲಕ ಕಾಂಗ್ರೆಸ್‌ ಬಿಂಬಿಸಿದೆ.

ಜಾಹೀರಾತಿನಲ್ಲಿ ನೆಹರು ಅವರನ್ನು ಮರೆತಿರುವುದನ್ನು ಕಾಂಗ್ರೆಸ್‌ ತೀವ್ರವಾಗಿ ಆಕ್ಷೇಪಿಸಿತ್ತು. ಆದರೆ, ಹಲವು ಸಚಿವರು, ಬಿಜೆಪಿ ನಾಯಕರು ಸರಕಾರದ ಈ ನಿಲುವನ್ನು ಸಮರ್ಥಿಸಿದ್ದರು. ಆದರೆ, ಸಿಎಂ ಬೊಮ್ಮಾಯಿ ಅವರು ತಮ್ಮ ಸ್ವಾತಂತ್ರ್ಯ ಭಾಷಣಯಲ್ಲಿ ನೆಹರು ಅವರನ್ನು ಮರೆಯಲಾಗದು ಎಂದು ಹೇಳುವ ಮೂಲಕ ತೇಪೆ ಹಚ್ಚಿದ್ದರು. ಜತೆಗೆಯೇ ಕಾಂಗ್ರೆಸ್‌ ಕೂಡಾ ಹಲವು ನಾಯಕರನ್ನು ಮರೆತಿದೆ ಎಂದು ನೆನಪಿಸಿದ್ದರು.

ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಸಮಾರಂಭ. ಹಿನ್ನೆಲೆಯಲ್ಲಿ ನೆಹರೂ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಕ್ಷಣ

ಯಾರು ಯಾರು ಇದ್ದರು?
ರೇಸ್ ಕೋರ್ಸ್ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪಸ್ರಾದ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಸೇರಿದಂತೆ ಕೆಪಿಸಿಸಿ ಪದಾಧಿಕಾರಿಗಳು, ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು. ಧ್ವಜಾರೋಹಣಕ್ಕೂ ಮುನ್ನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ವೇದ ಪುರಾಣಕ್ಕಿಂತಲೂ ಇತಿಹಾಸ ಮುಖ್ಯ
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಎಐಸಿಸಿ ಸೂಚನೆ ಮೇರೆಗೆ ಪಾದಯಾತ್ರೆಯ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ʻʻತ್ರಿವರ್ಣ ಧ್ವಜವನ್ನು ನಮ್ಮ ದೇಶದ ಧ್ವಜವನ್ನಾಗಿ ನಮ್ಮ ಹಿರಿಯರು ಕೊಟ್ಟಿದ್ದರು. ಹಾಗಾಗಿ ಇದನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದೇವೆʼʼ ಎಂದು ಕಾಂಗ್ರೆಸ್‌ ವತಿಯಿಂದ ಸೋಮವಾರ ಆಯೋಜಿಸಲಾಗಿರುವ ಪಾದಯಾತ್ರೆಯ ಉದ್ದೇಶವನ್ನು ಸ್ಪಷ್ಟಪಡಿಸಿದರು.

ʻʻವೇದ, ಪುರಾಣ ಓದುವ ಮೊದಲು ಇತಿಹಾಸ ಓದಬೇಕು. ಟಿಪ್ಪು ಸುಲ್ತಾನ್, ಹೈದರಾಲಿ ಹೋರಾಟ ಮರೆಯಲು ಸಾಧ್ಯವಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ರಿಗೇ ನಡುಕ ಹುಟ್ಟಿಸಿದ್ದರು. ನಾವು ಸೂರಪುರದ ವೆಂಕಟಪ್ಪ ನಾಯಕರ ಹೋರಾಟ ನೆನಪು ಮಾಡಿಕೊಳ್ಳಬೇಕುʼʼ ಎಂದು ಕನ್ನಡ ನೆಲದ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳನ್ನು ನೆನಪಿಸಿದರು.

ಸ್ವಾತಂತ್ರ್ಯ ಕಾಪಾಡಿಕೊಳ್ಳೋಣ
ಧರ್ಮ ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ಸಂಘರ್ಷ ತರುವ ಯಾವುದೇ ಸಂಘಟನೆ ಅಥವಾ ನಾಯಕರ ವಿರುದ್ಧ ಹೋರಾಟ ನಡೆಸಿ ಸ್ವಾತಂತ್ರ್ಯ ಕಾಪಾಡಿಕೊಳ್ಳೋಣ ಎಂದು ಡಿ.ಕೆ.ಶಿ ಹೇಳಿದರು.

ಇತಿಹಾಸ ಎಂದೂ ತಿರುಚಲಾಗದು
ʻʻಹೈದರಾಲಿ, ಟಿಪ್ಪು ಸುಲ್ತಾನ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಇತಿಹಾಸವನ್ನು ತಿರುಚುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಗಾಂಧಿಯವರ ಜೊತೆಯಲ್ಲಿ ನೆಹರು, ಸುಭಾಷ್ ಚಂದ್ರ ಬೋಸ್, ಆಜಾದ್ ಸೇರಿದಂತೆ ಹಲವರು ಹೋರಾಟ ನಡೆಸಿದರು. ಕಾಂಗ್ರೆಸ್ ರಾಷ್ಟ್ರೀಯ ಹೋರಾಟದ ಮುಂಚೂಣಿಯಲ್ಲಿ ಇತ್ತು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರ ನೆನಪಿಸಿಕೊಳ್ಳಬೇಕುʼʼ ಎಂದರು ಡಿಕೆಶಿ.

ʻʻಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಅಂಬೇಡ್ಕರ್ ಅವರನ್ನು ನೇಮಿಸುವಲ್ಲಿ ನೆಹರು ಅವರ ದೂರದೃಷ್ಟಿ ಬಹಳ ಕೆಲಸ ಮಾಡಿತ್ತು, ಇದನ್ನು ಯಾರೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲʼʼ ಎಂದೂ ಡಿಕೆಶಿ ನುಡಿದರು.

ಇದನ್ನೂ ಓದಿ| ವಿವಾದಕ್ಕೆ ತೆರೆ: ನೆಹರೂ ಸೇರಿದಂತೆ ಯಾವ ಪ್ರಧಾನಿಯನ್ನೂ ಮರೆಯುವ ಪ್ರಶ್ನೆಯೇ ಇಲ್ಲ ಎಂದ ಬೊಮ್ಮಾಯಿ


Exit mobile version