ಚಿಕ್ಕಮಗಳೂರು: ರಾಷ್ಟ್ರ ಭಕ್ತಿ ಮತ್ತು ರಾಷ್ಟ್ರ ಧ್ವಜದ ಮೇಲಿನ ಭಕ್ತಿ ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಇದೆ! ಹೌದು ಶೃಂಗೇರಿಯಲ್ಲಿ ಸೋಮವಾರ ನಡೆದ ವಿದ್ಯಮಾನ ಇದನ್ನು ನಿಜ ಎಂದು ಸಾಬೀತು ಮಾಡಿತು.
ಶೃಂಗೇರಿಯ ಆನೆ ಲಕ್ಷ್ಮಿ ಸೊಂಡಿಲಲ್ಲಿ ತ್ರಿವರ್ಣ ಧ್ವಜ ಹಿಡಿದು ಭಕ್ತಿಯಿಂದ ನಡೆದುಕೊಂಡಿದ್ದಾಳೆ. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆನೆಗೆ ತ್ರಿವರ್ಣದಿಂದ ಅಲಂಕಾರ ಮಾಡಲಾಗಿತ್ತು. ಯಾವುದೇ ವಿರೋಧವಿಲ್ಲದೆ ಅಲಂಕಾರ ಮಾಡಿಕೊಂಡ ಮುದ್ದು ಲಕ್ಷ್ಮಿ ರಾಷ್ಟ್ರ ಧ್ವಜ ಹಿಡಿದು ಗಜ ಗಾಂಭೀರ್ಯದಿಂದ ನಡೆದು ಬರುತ್ತಿದ್ದರೆ ನೋಡಿದವರೆಲ್ಲ ಒಮ್ಮೆಗೆ ಅವಾಕ್ಕಾದರು. ಬಳಿಕ ಖುಷಿಯಿಂದ ಕುಣಿದಾಡಿದರು.
ತ್ರಿವರ್ಣ ಧ್ವಜ ಹಿಡಿದು ಬಣದ ಆಕೆ ಮೊದಲು ಶಾರದಾಂಬೆ ಹಾಗೂ ಶಿವನಿಗೆ ಪ್ರಾರ್ಥನೆ ಸಲ್ಲಿಸಿದಳು. ನಂತರ ಅತ್ತಿತ್ತ ಓಡಾಡುತ್ತಾ ಎಲ್ಲರಿಗೂ ಮುದ ನೀಡಿದಳು. ಹಣೆಯಲ್ಲಿ ಕೇಸರಿ, ಬಿಳಿ, ಹಸಿರು ಮತ್ತು ತ್ರಿಶೂಲ ಶ್ರೀರಕ್ಷೆಯೊಂದಿಗೆ ಮಿಂಚಿದ ಲಕ್ಷ್ಮಿ ನೂರಾರು ಪ್ರವಾಸಿಗರನ್ನು ಋಂಜಿಸಿದಳು. ರಾಷ್ಟ್ರಧ್ವಜ ಹಿಡಿದ ಆನೆಯ ವಿಡಿಯೊ ಜಿಲ್ಲೆಯಾದ್ಯಂತ ಫುಲ್ ವೈರಲ್ ಆಗಿದೆ.