Site icon Vistara News

Karnataka Election: ಸೊರಬದಲ್ಲಿ ಪಕ್ಷೇತರರ ನಾಮಪತ್ರ ಸಲ್ಲಿಕೆ; ಎತ್ತಿನಗಾಡಿಯಲ್ಲಿ ಬಂದು ಗಮನ ಸೆಳೆದ ಜೆ.ಎಸ್. ಚಿದಾನಂದಗೌಡ

Independents file nominations in Soraba Karnataka Election updates

ಸೊರಬ: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ (ಏ. 18) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಂದುವರಿದಿದೆ. ಈ ವೇಳೆ ಪಕ್ಷೇತರ ಅಭ್ಯರ್ಥಿ, ಹೋರಾಟಗಾರ ಜೆ.ಎಸ್. ಚಿದಾನಂದಗೌಡ ಅವರು ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಲೂನು ಜೂಲಗಳ ಅಲಂಕೃತ ಎತ್ತುಗಳು, ಬಾಳೆಗಿಡ, ಹೂಗಳ ಸಿಂಗರಿಸಿದ ಎತ್ತಿನಗಾಡಿಯಲ್ಲಿ ಆಗಮಿಸಿದ ಚಿದಾನಂದಗೌಡ ಪಟ್ಟಣದ ತಾಲೂಕು ಕಚೇರಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಪಟ್ಟಣದ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ತಮ್ಮ ಬೆಂಬಲಿಗರು ಮತ್ತು ಆಪ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿ ವರೆಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಎಸ್. ಚಿದಾನಂದಗೌಡ ತಮ್ಮನ್ನು ಕ್ಷೇತ್ರದ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದರೆ ರಾಜ್ಯ ರಾಜಧಾನಿಯಲ್ಲಿ ವಾಸ ಮಾಡದೇ, ಸೊರಬದಲ್ಲಿಯೇ ಇರುತ್ತೇನೆ. ಜೊತೆಗೆ ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಪ್ರತಿ ಹೋಬಳಿ ಮಟ್ಟದಲ್ಲಿ ರೈತ ವೃತ್ತ ಸ್ಥಾಪನೆ ಮತ್ತು ರೈತ ದಿನಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Karnataka Election 2023: ಆಸ್ಪತ್ರೆ ಬೆಡ್‌ನಿಂದಲೇ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಚುನಾವಣಾ ಪ್ರಚಾರ

ಈ ಸಂದರ್ಭದಲ್ಲಿ ವೀರೇಂದ್ರಗೌಡ ಜೇಡಗೇರಿ, ಸದಾನಂದಗೌಡ ಜೇಡಗೇರಿ, ನಾರಾಯಣಪ್ಪ ಜೇಡಗೇರಿ, ಎಂ. ವೀರಭದ್ರ ಕಿರುಗುಣಸೆ, ಅಣ್ಣಾಜಿಗೌಡ ಜೇಡಗೇರಿ, ಧರ್ಮಪ್ಪ ಜೇಡಗೇರಿ, ಕಾಳಪ್ಪ ಜೇಡಗೇರಿ, ವೀರಭದ್ರ ಜಯಂತಿ ಗ್ರಾಮ, ಎಸ್.ಬಿ. ವಿನಯ್, ರಾಜು ಸಮನವಳ್ಳಿ, ಮಾಲತೇಶ್ ನಲ್ಲಿಕೊಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಗುಡ್ಡಪ್ಪ ಮರೂರು

ತಾಲೂಕು ಭ್ರಷ್ಟಾಚಾರದಿಂದ ಮುಕ್ತಿ ಹೊಂದಿಲ್ಲ : ಗುಡ್ಡಪ್ಪ ಮರೂರು

ತಾಲೂಕಿನಲ್ಲಿ ಭ್ರಷ್ಟಾಚಾರ, ದೌರ್ಜನ್ಯ ಮಿತಿ ಮೀರಿದ್ದು, ಬಗರ್‌ಹುಕುಂ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಳ್ಳಿ ಈವರೆಗಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಗುಡ್ಡಪ್ಪ ಮರೂರು ಆರೋಪಿಸಿದರು.

ಪಟ್ಟಣದ ಮಂಗಳವಾರ ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಪ್ರತಿ ಹಳ್ಳಿಗಳಿಗೂ ಸಂಚರಿಸಿ, ಜನರ ನಾಡಿಮಿಡಿತ ಅರಿತು ಮತದಾರರನ್ನು ಸಂಘಟಿಸಿದ್ದೇನೆ. ತಾಲೂಕಿನಲ್ಲಿ ಆರಿಸಿ ಬಂದ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಗೆಲುವು ಸಾಧಿಸಿದ ನಂತರ ಕ್ಷೇತ್ರವನ್ನೇ ಮರೆಯುತ್ತಿದ್ದಾರೆ. ಈ ಕಾರಣದಿಂದ ಪ್ರತಿ ಇಲಾಖೆಯಲ್ಲಿಯೂ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಶಾಸಕರ ಕುಮ್ಮಕ್ಕು ಇದ್ದು, ಜನತೆ ಇವರಿಂದ ರೋಸಿ ಹೋಗಿದ್ದಾರೆ. ಈ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದು, ತಮಗೆ ಮತದಾರರು ಬೆಂಬಲಿಸುವ ಮೂಲಕ ಗೆಲುವು ತಂದುಕೊಡುವ ವಿಶ್ವಾಸವಿದೆ ಎಂದರು.

2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧೆ ಮಾಡಿ ಗೌರವಯುತ ಮತಗಳಿಸಿ ಚಿರಪರಿತನಾಗಿದ್ದೇನೆ. ಈ ಚುನಾವಣೆಯಲ್ಲೂ ಸಹ ಬಿಎಸ್‌ಪಿಯಿಂದ ಸ್ಪರ್ಧೆಸಲು ಬಯಸಿದ್ದರೂ ರಾಜ್ಯ ಮತ್ತು ಜಿಲ್ಲಾ ಮುಖಂಡರು ಟಿಕೆಟ್ ನೀಡದಂತೆ ತಮಗೆ ವಂಚಿಸಿದ್ದಾರೆ. ಈ ಕಾರಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಜನರ ಆಶೀರ್ವಾದ ತಮ್ಮ ಮೇಲಿದೆ ಎಂದರು.

ಇದನ್ನೂ ಓದಿ: Karnataka Election 2023: ಬೆಳಗಾವಿಯಲ್ಲಿ ರಮೇಶ್‌ ಜಾರಕಿಹೊಳಿ, ಲಕ್ಷ್ಮಣ್‌ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್‌ ನಾಮಪತ್ರ ಸಲ್ಲಿಕೆ

ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ಮುಖ್ಯರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಪ್ರವೀಣ್ ಜೈನ್ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದಿವಾಕರ ಕೊರಕೋಡು, ಅರುಣ್‌ಗೌಡ ಪಾಟೀಲ್ ತಿಗಣಿ, ಮಂಜುನಾಥಗೌಡ್ರು ಬಂಕವಳ್ಳಿ, ರಾಜು ಸೊರಬ, ಮಂಜು ಜಡೆ, ಚಂದು ಕೊರಕೋಡು, ಕೃಷ್ಣ ಕೊಡಕೋಡು, ಮಹೇಂದ್ರಗೌಡ ದುಗ್ಲಿ, ಸಂತೋಷ್‌ಗೌಡ ಸಂಪಗೋಡು, ಹನುಮಂತಪ್ಪ ತವನಂದಿ, ಗೋಣ್ಯಪ್ಪ ಕಾತುವಳ್ಳಿ ಇದ್ದರು.

ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಕೆ.ವೈ. ಚಂದ್ರಶೇಖರ್ ಅವರು ನಾಮಪತ್ರ ಸಲ್ಲಿಸಿದರು.

ಐದು ದಶಕಗಳಿಂದ ಒಂದೇ ಕುಟುಂಬದ ಆಳ್ವಿಕೆ: ಕೆ.ವೈ. ಚಂದ್ರಶೇಖರ್

ಐದು ದಶಕಗಳ ಅವಧಿಯಲ್ಲಿ ಒಂದೇ ಕುಟುಂಬದ ಆಳ್ವಿಕೆಗೆ ಒಳಪಟ್ಟ ಪರಿಣಾಮ ನಂಜುಂಡಪ್ಪ ವರದಿಯನ್ವಯ ನಮ್ಮ ತಾಲೂಕು ಅತ್ಯಂತ ಹಿಂದುಳಿದ ಕ್ಷೇತ್ರವಾಗಿ ಉಳಿದಿದೆ ಎಂದು ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಕೆ.ವೈ. ಚಂದ್ರಶೇಖರ್ ಆರೋಪಿಸಿದರು.

ಮಂಗಳವಾರ ಪಟ್ಟಣದ ರಂಗನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮುಖಾಂತರ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದೆ. ಮೂಲ ಸೌಕರ್ಯಗಳ ಈಡೇರಿಸುವಲ್ಲಿ ವಿಫಲಗೊಂಡಿರುವ ಜನಪ್ರತಿನಿಧಿಗಳು ಜನರನ್ನು ವಂಚಿಸುತ್ತಲೇ ಆಡಳಿತ ನಡೆಸಿದ್ದಾರೆ. ಶಿಕ್ಷಣ, ಆರೋಗ್ಯ ಹಾಗೂ ನೀರಾವರಿ ವ್ಯವಸ್ಥೆಗೆ ತಾಲ್ಲೂಕಿನ ಜನರು ಪರದಾಡುವಂತಾಗಿದೆ. ಈ ಬಾರಿ ಮತದಾರರು ಬದಲಾವಣೆ ಬಯಸಿ ಆಮ್ ಆದ್ಮಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಸರ್ಕಾರ ಹಳೆ ವ್ಯವಸ್ಥೆಗಳನ್ನು ಬದಲಾಯಿಸಿ ಸಾಮಾನ್ಯ ಜನರಿಗೆ ನೆಮ್ಮದಿ ಬದುಕು ಕಲ್ಪಿಸಿಕೊಟ್ಟಿದೆ. ರಾಜ್ಯದಲ್ಲಿಯೂ ಬದಲಾವಣೆಗೆ ಜನರು ಆಮ್ ಆದ್ಮಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಇದನ್ನೂ ಓದಿ: BL Santhosh : ಚರೈವೇತಿ ಚರೈವೇತಿ, ಯಹೀ ತೋ ಮಂತ್ರ್‌ ಹೈ ಅಪ್ನಾ; ಶೆಟ್ಟರ್‌ ಆರೋಪಗಳಿಗೆ ಪ್ರತಿಯಾಗಿ ಬಿ.ಎಲ್‌ ಸಂತೋಷ್‌ ಹೇಳಿದ್ದೇನು?

ಆಮ್ ಆದ್ಮಿ ತಾಲೂಕು ಅಧ್ಯಕ್ಷ ಡಿ. ಲಕ್ಷ್ಮಣಪ್ಪ, ಮುಖಂಡರಾದ ಎಂ.ಕೆ.ಮೋಹನ್, ರವಿ ತಾವರೆಕೊಪ್ಪ, ವಿರೇಶ್, ಗಣೇಶ್, ಸುಜಾತ ಆನವಟ್ಟಿ, ನಾಗೇಶ್ ದ್ವಾರಳ್ಳಿ, ಸುನಂದಾ ಜಡೆ, ನೇತ್ರಾವತಿ, ಶಿವಕುಮಾರ್ ಗೌಡ, ಭರತ್ ಹಳೇಸೊರಬ ಇದ್ದರು.

Exit mobile version