Site icon Vistara News

Nandan Nilekani: 47 ವರ್ಷದಲ್ಲಿ ಸಾಧಿಸುವುದನ್ನು 9 ವರ್ಷದಲ್ಲಿ ಸಾಧಿಸಿದ್ದೇವೆ; ಮೋದಿಗೆ ನಂದನ್‌ ನಿಲೇಕಣಿ ಜೈ

Nandan Nilekani On Digital India

India achieved in 9 years what would have taken 47 years by traditional means: Says Nandan Nilekani

ನವದೆಹಲಿ: ಭಾರತದಲ್ಲಿ ಡಿಜಿಟಲ್‌ ಏಳಿಗೆ ಕುರಿತು ಇನ್ಫೋಸಿಸ್‌ (Infosys) ಸಹ ಸಂಸ್ಥಾಪಕ, ಯುಐಡಿಎಐ (ಆಧಾರ್)‌ ಸಂಸ್ಥಾಪಕ ನಂದನ್‌ ನಿಲೇಕಣಿ (Nandan Nilekani) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ದೇಶವು 47 ವರ್ಷದಲ್ಲಿ ಸಾಧಿಸಬೇಕಾಗಿದ್ದನ್ನು ಕೇವಲ 9 ವರ್ಷದಲ್ಲಿ ಸಾಧಿಸಿದೆ ಎಂದು ನವದೆಹಲಿಯಲ್ಲಿ ನಡೆದ ಬಿ20 ಶೃಂಗಸಭೆಯಲ್ಲಿ (B20 Summit) ಮೋದಿ ಸರ್ಕಾರದ ಸುಧಾರಣೆ ಕ್ರಮಗಳನ್ನು ಶ್ಲಾಘಿಸಿದ್ದಾರೆ. ಅಂದಹಾಗೆ, ನಂದನ್‌ ನಿಲೇಕಣಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅನಂತ್‌ ಕುಮಾರ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

“ಭಾರತದಲ್ಲಿ ತಂತ್ರಜ್ಞಾನವು ಆರ್ಥಿಕ ಏಳಿಗೆಗೆ ಕಾರಣವಾಗಿದೆ. ಅದರಲ್ಲೂ, ತಂತ್ರಜ್ಞಾನವು ಡಿಜಿಟಲ್‌ ಪಬ್ಲಿಕ್‌ ಇನ್‌ಫ್ರಾಸ್ಟ್ರಕ್ಚರ್‌ (DPI) ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಅದರಲ್ಲೂ, ಆಧಾರ್‌ ಕಾರ್ಡ್‌, ಆಧಾರ್‌ ಐಡಿ, ಆಧಾರ್‌ ಐಡಿ ಲಿಂಕ್‌ ಮಾಡುವುದು ಜನರಿಗೆ ಸೌಲಭ್ಯ ಒದಗಿಸಲು ನೆರವಾಗಿದೆ. ಕೇಂದ್ರ ಸರ್ಕಾರ ಜನಧನ್‌ ಯೋಜನೆ ಅಡಿಯಲ್ಲಿ ಕೋಟ್ಯಂತರ ಜನರ ಬ್ಯಾಂಕ್‌ ಖಾತೆಗಳನ್ನು ತೆರೆದ ಕಾರಣ ಸರ್ಕಾರದ ಹಣವು ನೇರವಾಗಿ ಜನರಿಗೆ ಸೇರಲು ಕಾರಣವಾಗಿದೆ” ಎಂದು ತಿಳಿಸಿದರು.

ದೇಶದಲ್ಲಿ 70 ಕೋಟಿ ಜನ ಬ್ಯಾಂಕ್‌ ಖಾತೆಗಳನ್ನು ಆಧಾರ್‌ಗೆ ಲಿಂಕ್‌ ಮಾಡಿದ್ದಾರೆ. ಇದೇ ಕಾರಣಕ್ಕಾಗಿಯೇ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ 15 ಕೋಟಿ ಜನರ ಖಾತೆಗಳಿಗೆ 4.5 ಶತಕೋಟಿ ಡಾಲರ್‌ ವರ್ಗಾಯಿಸಲು ಸಾಧ್ಯವಾಯಿತು. ಇನ್ನು ಏಕೀಕೃತ ಪಾವತಿ ವ್ಯವಸ್ಥೆಯು (UPI) ದೇಶದಲ್ಲಿ ಆನ್‌ಲೈನ್‌ ವಹಿವಾಟಿನಲ್ಲಿ ಕ್ರಾಂತಿ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ: Nilekani | ನಂದನ್‌ ನಿಲೇಕಣಿಯವರ ಫಂಡಮೆಂಟಮ್‌ ಸಂಸ್ಥೆಗೆ 1,793 ಕೋಟಿ ರೂ. ಹೂಡಿಕೆ

“ದೇಶದಲ್ಲಿಂದು 130 ಕೋಟಿ ಜನ ಆಧಾರ್‌ ಡಿಜಿಟಿಲ್‌ ಐಡಿ ಹೊಂದಿದ್ದಾರೆ. ನರೇಂದ್ರ ಮೋದಿ ಸರ್ಕಾರ ಡಿಜಿ ಲಾಕರ್‌ ವ್ಯವಸ್ಥೆ ತಂದು ಜನರಿಗೆ ಅನುಕೂಲ ಮಾಡಿದೆ. ಇನ್ನು ನಿತ್ಯ ಯುಪಿಐ ಮೂಲಕ 8 ಕೋಟಿ ವಹಿವಾಟು (Transactions) ನಡೆಯುತ್ತಿದೆ. ಡಿಜಿಟಲ್‌ ಏಳಿಗೆಯಿಂದ ನವೋದ್ಯಮಗಳ ಸಂಖ್ಯೆಯೂ ಹೆಚ್ಚುತ್ತಿದೆ. 2016ರಲ್ಲಿ ಒಂದು ಸಾವಿರ ಇದ್ದ ನವೋದ್ಯಮಗಳ ಸಂಖ್ಯೆ (Startups) ಈಗ ಒಂದು ಲಕ್ಷ ದಾಟಿದೆ. ಇದು ಬಹುದೊಡ್ಡ ಆರ್ಥಿಕತೆಯ ಸೃಷ್ಟಿಗೆ ಕಾರಣವಾಗಿದೆ. ಇಷ್ಟೆಲ್ಲ ಸಾಧನೆಗೆ 47 ವರ್ಷ ಬೇಕು. ಆದರೆ, ಕೇವಲ 9 ವರ್ಷದಲ್ಲಿ ಭಾರತ ಇದೆಲ್ಲವನ್ನು ಸಾಧಿಸಿದೆ: ಎಂದು ನಿಲೇಕಣಿ ತಿಳಿಸಿದರು.

Exit mobile version