Site icon Vistara News

INDIA Bloc: ಇಂಡಿಯಾ ಒಕ್ಕೂಟ ಯಾವ ಧರ್ಮದ ವಿರುದ್ಧವೂ ಇಲ್ಲ ಎಂದ ಸಿದ್ದರಾಮಯ್ಯ

CM Siddaramaiah

ಕಲಬುರಗಿ: ಇಂಡಿಯಾ ಒಕ್ಕೂಟ ಯಾವ ಧರ್ಮದ ವಿರುದ್ಧ ಇಲ್ಲ. ನಾವು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ. ಧರ್ಮ ಎಂದರೆ ಬದುಕಿನ ದಾರಿ. ಜನರಿಗಾಗಿ ಧರ್ಮವಿರುವುದು, ಧರ್ಮಕ್ಕಾಗಿ ಜನ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್‌ ಸನಾತನ ಧರ್ಮದ ವಿರುದ್ಧವಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿ, ಧರ್ಮ ಮನುಷ್ಯನ ಒಳಿತಿಗಾಗಿ ಇದೆ. ದಯೆಯೇ ಧರ್ಮದ ಮೂಲ. ದಯೆ ಇಲ್ಲದ ಧರ್ಮ ಯಾವುದಯ್ಯಾ ಎಂದು ಬಸವಾದಿ ಶರಣರು ಹೇಳಿದ್ದಾರೆ. ಧರ್ಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇರಬೇಕು ಎಂದು ಹೇಳಿದರು.

ಕಾವೇರಿ ನೀರು ನಿಯಂತ್ರಣ ಸಮಿತಿ 5000 ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಸೂಚಿಸಿದೆ. ಅಷ್ಟು ನೀರು ಇಲ್ಲದಿರುವುದರಿಂದ ನಾವು ನೀರು ಬಿಟ್ಟಿಲ್ಲ. ಆದರೆ, ಈ ಬಗ್ಗೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆ ರಾಜಕೀಯವಾಗಿ ಪ್ರೇರಿತ ಅಷ್ಟೇ ಎಂದು ಹೇಳಿದರು.

ಇದನ್ನೂ ಓದಿ | Power Point with HPK : ಲೋಕಸಭೆಗೆ ಸ್ವತಂತ್ರ ಸ್ಪರ್ಧೆ ಸಾಧ್ಯವಿಲ್ಲದ್ದಕ್ಕೆ ಬಿಜೆಪಿ ಆಶ್ರಯ ಪಡೆದ ಜೆಡಿಎಸ್‌!

ನೀರು ಬಿಡಲು ನಮ್ಮ ಬಳಿ ನೀರಿಲ್ಲ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿದ್ದು, ನ್ಯಾಯಾಲಯ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಪ್ರಶ್ನಿಸಿದೆ. ನೀರು ಬಿಡಬೇಕೆಂದಿದ್ದರೂ ನಮಗೆ 106 ಟಿ. ಎಂ. ಸಿ ನೀರಿನ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ. ಕುಡಿಯುವ ನೀರಿಗೆ 30 ಟಿಎಂಸಿ, ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ಮತ್ತು ಕೈಗಾರಿಕೆಗಳಿಗೆ 3 ಟಿಎಂಸಿ ಅಗತ್ಯ. ಒಟ್ಟು 106 ಟಿಎಂಸಿ ನಮಗೆ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ ನೀರು. ನೀರು ಕೊಡಲು ನಮ್ಮ ಬಳಿ ನೀರಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಯಡಿಯೂರಪ್ಪ ಅವರ ಕಾಲದಲ್ಲಿ ಹಾಗೂ ಎಲ್ಲರ ಕಾಲದಲ್ಲಿ ಬಿಡಲಾಗಿದೆ ಎಂದು ತಿಳಿಸಿದರು.

ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ಬಿಡಲಾಗುತ್ತದೆ. ಈವರೆಗೆ 37.7 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಾವು ಬಿಡಬೇಕಿದ್ದುದ್ದು 99 ಟಿಎಂಸಿ ನೀರು. ಎಲ್ಲಿ ನೀರು ಬಿಟ್ಟಿದ್ದೇವೆ ಎಂದು ಮರು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆ ಅಭಿವೃದ್ಧಿ ಕೆಲಸ ಅಲ್ಲವೇ

ರಾಜ್ಯ ಸರ್ಕಾರ ಇನ್ನೂ ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿಯೇ ಇದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, 5 ಗ್ಯಾರಂಟಿ ಯೋಜನೆ ಅಭಿವೃದ್ಧಿ ಕೆಲಸ ಅಲ್ಲವೇ? ಯಾವ ಸರ್ಕಾರ 1.13 ಕೋಟಿ ಜನರಿಗೆ 2000 ರೂ.ಗಳನ್ನು ನೀಡಿದೆ? ಯಡಿಯೂರಪ್ಪ ಅವರು 10 ಕೆಜಿಯಲ್ಲಿ ಒಂದು ಕಾಳು ಕಡಿಮೆಯಾದರೂ ಪ್ರತಿಭಟಿಸುವುದಾಗಿ ಹೇಳಿದ್ದರು, ಮಾಡಿದರೇ ? ಅವರ ಕಾಲದಲ್ಲಿ 7 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು. ಅಲ್ಲೇ ಗಿರಕಿ ಹೊಡೆಯುತ್ತಿದ್ದಾರೆ. ನಾವು ಐದು ಗ್ಯಾರಂಟಿ ಕೊಟ್ಟಿದ್ದೇವೆಂದು ಪಾದಯಾತ್ರೆ ಮಾಡುತ್ತಿದ್ದಾರೆಯೇ ಎಂದು ವ್ಯಂಗವಾಡಿದರು. ಅವರು 600 ಭರವಸೆ ನೀಡಿ ಶೇ 10 ರಷ್ಟನ್ನೂ ಜಾರಿಗೆ ತರಲಿಲ್ಲ. ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಕಿಡಿಕಾರಿದರು.

ಮೂವರು ಡಿಸಿಎಂ; ವರಿಷ್ಠರ ತೀರ್ಮಾನ ಅಂತಿಮ

ಮೂವರು ಡಿಸಿಎಂ ಮಾಡುವ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿರುವ ಬಗೆ ಪ್ರತಿಕ್ರಿಯೆ ನೀಡಿ, ಅಂತಿಮವಾಗಿ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಈಗ ಒಬ್ಬರನ್ನು ಮಾಡಿದ್ದಾರೆ. ವರಿಷ್ಠರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ, ಮಾತನಾಡಲಿ. ಹೈ ಕಮಾಂಡ್ ನಿರ್ಧಾರವನ್ನು ಪಾಲಿಸುವುದಾಗಿ ಹೇಳಿದರು.

ಇದನ್ನೂ ಓದಿ | Vishwakarma Jayanti: ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ

ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಸರ್ವ ಪಕ್ಷ ನಿಯೋಗ

ಕೃಷ್ಣ ಮೇಲ್ದಂಡೆ ಯೋಜನೆ ವಿಚಾರ ನ್ಯಾಯಾಲಯದಲ್ಲಿದ್ದು, ಆಂಧ್ರ , ತೆಲಂಗಾಣ ಅರ್ಜಿ ಹಾಕಿದ್ದಾರೆ. ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯೇ ಹೊರಡಿಸಿಲ್ಲ. ಮಹದಾಯಿ ಯೋಜನೆಯಲ್ಲಿ ಗೆಜೆಟ್ ಅಧಿಸೂಚನೆ ಆಗಿದೆ. ಆದರೆ ಅರಣ್ಯ ಹಾಗೂ ಪರಿಸರ ತೀರುವಳಿ ನೀಡಿಲ್ಲ. ನಾಳೆ ಕೊಟ್ಟರೆ, ನಾಡಿದ್ದೇ ಕೆಲಸ ಶುರು ಮಾಡುತ್ತೇವೆ ಎಂದ ಸಿದ್ದರಾಮಯ್ಯ ಅವರು, ಅದಕ್ಕಾಗಿಯೇ ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ, ಯೋಜನೆಗಳ ಬಗ್ಗೆ ಸರ್ವಪಕ್ಷ ನಿಯೋಗ ತೆರಳಲು ದಿನಾಂಕ ನಿಗದಿಯಾಗುತ್ತಿಲ್ಲ ಎಂದರು.

Exit mobile version