Site icon Vistara News

Pralhad Joshi: ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ: ಪ್ರಲ್ಹಾದ್ ಜೋಶಿ

Pralhad Joshi

ಬೆಂಗಳೂರು: 10 ವರ್ಷಗಳ ಹಿಂದೆ ಭಾರತವನ್ನು ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರ ಎಂದೇ ಕರೆಯಲಾಗುತ್ತಿತ್ತು. ಆದರೆ ಇವತ್ತು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಡಿಯಲ್ಲಿ ಆದರಣೀಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮಾಹಿತಿ ನೀಡುವ ಆರ್‍ಸಿ ಡಿಜಿಟಲ್ ವಾಹನವು ಭಾನುವಾರ ಶಿವಾಜಿನಗರ ಕ್ಷೇತ್ರದ ವಸಂತನಗರ ವಾರ್ಡ್‌ಗೆ ಬಂದ ಸಂದರ್ಭದಲ್ಲಿ ಅವರು ಮಾತನಾಡಿದರು.

ಇಷ್ಟೊಂದು ಸಂಪದ್ಭರಿತ ರಾಷ್ಟ್ರ ಮತ್ತು ವಿಪುಲ ಮಾನವ ಸಂಪನ್ಮೂಲ ಇರುವ ದೇಶವಾದ ಭಾರತವನ್ನು ಸ್ವಾತಂತ್ರ್ಯಾ ನಂತರದ 75 ವರ್ಷಗಳ ಬಳಿಕವೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಕರೆಯಲಾಗುತ್ತಿದೆ. ದೇಶದ ಇತಿಹಾಸ 5 ಸಾವಿರ ವರ್ಷಗಳದ್ದಾಗಿದೆ. ಅದು ವಿಜಯದ ಇತಿಹಾಸ. ಇತಿಹಾಸವನ್ನೂ ಸುಳ್ಳಾಗಿ ಬರೆಯಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ | Driverless Car: ಭಾರತದಲ್ಲಿ ಡ್ರೈವರ್‌‌ಲೆಸ್ ಕಾರುಗಳಿಗೆ ಅನುಮತಿ ನೀಡಲ್ಲ ಎಂದ ನಿತಿನ್ ಗಡ್ಕರಿ

ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದದೆ ಇರುವ ಹಿಂದುಳಿದ ರಾಷ್ಟ್ರಗಳು ಎಂಬ 3 ವಿಭಾಗಗಳಿವೆ. ಇದು ಪರಿಭಾಷೆಯಾಗಿದೆ. 10 ವರ್ಷಗಳಿಂದ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುವತ್ತ ದೊಡ್ಡ ಹೆಜ್ಜೆಯನ್ನು ಇಡಲಾಗಿದೆ. ಮುಂದಿನ 10 ವರ್ಷವೂ ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ನಾವು ಎರಡು ಕಲ್ಪನೆಗಳನ್ನು ಇಟ್ಟುಕೊಂಡಿದ್ದೇವೆ. ಈಗಾಗಲೇ ನಮ್ಮ ದೇಶ ಜಗತ್ತಿನ 5ನೇ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. 10-11 ವರ್ಷಗಳ ಹಿಂದೆ 2009-14ರ ನಡುವಿನ ಅವಧಿಯಲ್ಲಿ ನಾವು ವಿರೋಧ ಪಕ್ಷದಲ್ಲಿದ್ದೆವು. ಆಗ ಸಂಸತ್ತಿನಲ್ಲಿ ಭಾರತದ ಆರ್ಥಿಕ ಸ್ಥಿತಿ ಗಂಭೀರವಾಗಿರುವುದು, ಭಾರತದ ಬ್ಯಾಂಕ್‍ಗಳ ಎನ್‍ಪಿಎ ಪರಿಣಾಮದ ಚರ್ಚೆ ನಡೆದಿತ್ತು. ಭಾರತವು ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರ ಎಂದೇ ಬಿಂಬಿತವಾಗಿತ್ತು ಎಂದು ತಿಳಿಸಿದರು.

ಇಂಗ್ಲೆಂಡನ್ನು ನಾವು ಹಿಂದಿಕ್ಕೆ ಐದನೇ ಸ್ಥಾನ ಪಡೆದಿದ್ದೇವೆ. ಮುಂದಿನ 3 ವರ್ಷಗಳಲ್ಲಿ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಬೇಕೆಂದು ಪ್ರಧಾನಿ ಮೋದಿಯವರು ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದರು. ಅಮೆರಿಕ, ಚೀನಾದ ಬಳಿಕ ನಮ್ಮ ಸ್ಥಾನ ಇರಲಿದೆ. ಮುಂದಿನ ವರ್ಷ ಇದೇ ಹೊತ್ತಿಗೆ ನಾವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದ್ದೇವೆ ಎಂದು ವಿಶ್ವಾಸದಿಂದ ತಿಳಿಸಿದರು.

ಹಿಂದೆ ಯುಪಿಎ ಅವಧಿಯಲ್ಲಿ ಹಣದ ಕೊರತೆ ಕುರಿತು ಸ್ವತಃ ಸಚಿವರೊಬ್ಬರು ನನ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇವತ್ತು ಪ್ರತಿ ಸಂಪುಟ ಸಭೆಯಲ್ಲಿ ಪ್ರಧಾನಿಯವರು ವಿವಿಧ ಯೋಜನೆಗಳು, ಮಂಜೂರಾದ ಮೊತ್ತ, ಯೋಜನೆಯ ಪ್ರಗತಿ- ಸ್ಥಿತಿಗತಿ, ಖರ್ಚಾದ ಮೊತ್ತದ ಮಾಹಿತಿ ಪಡೆಯುತ್ತಾರೆ. ಹೆಚ್ಚು ಹಣ ಬೇಕಿದ್ದರೆ ಕೇಳಿ ಎನ್ನುತ್ತಾರೆ ಎಂದು ತಿಳಿಸಿದರು.

140 ಕೋಟಿ ಜನಸಂಖ್ಯೆ ನಮ್ಮದು. ಎಲ್ಲರ ತಲೆ ಮೇಲೊಂದು ಸೂರು (ಮನೆ) ನಮ್ಮ ಆಶಯ. 1960-2014ರವರೆಗೆ ಸುಮಾರು 54-55 ವರ್ಷಗಳಲ್ಲಿ 3.58 ಕೋಟಿ ಮನೆ ನಿರ್ಮಿಸಿದ್ದರು. ಮೋದಿಯವರ 10 ವರ್ಷ ಆಡಳಿತ ಮುಗಿಯುವ ಮೊದಲೇ 4 ಕೋಟಿ ಮನೆಗಳನ್ನು ಕಟ್ಟಿದ್ದೇವೆ. 2025-26ರಲ್ಲಿ ಮನೆ ಇಲ್ಲದ ಎಲ್ಲರಿಗೂ ಮನೆ ಕೊಡುವ ಗುರಿ ಇದೆ ಎಂದು ಹೇಳಿದರು.

ಯೋಜನೆಯ ಪ್ರಯೋಜನ ಪಡೆದವರ ಯಶೋಗಾಥೆಯನ್ನು ತಿಳಿಸಲಾಗುತ್ತಿದೆ. ಆ ಮೂಲಕ ವಿಶ್ವಾಸ ಬೆಳೆಸುವುದು, ಯೋಜನೆಯ ಪ್ರಯೋಜನ ಸಿಗದವರಿಗೆ ಅದನ್ನು ತಲುಪಿಸುವ ಉದ್ದೇಶ ಈ ವಾಹನದ್ದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | Criminal Cases: ಸಿದ್ದರಾಮಯ್ಯ, ಜೋಶಿ ನಡುವೆ ಕ್ರೈಂ ವಾರ್‌; ಏಟು-ಎದುರೇಟು!

ಇದು ಮೋದಿ ಗ್ಯಾರಂಟಿ ವಾಹನ

25 ಲಕ್ಷಕ್ಕಿಂತ ಕಡಿಮೆ ಮೊತ್ತದಲ್ಲಿ ಮನೆ ನಿರ್ಮಿಸುವ ಮಧ್ಯಮ ವರ್ಗದವರಿಗೆ ಶೇ 4 ಬಡ್ಡಿದರದ ಸಾಲ ಸಿಗುತ್ತಿದೆ. ಎಲ್ಲರಿಗೂ ವಿವಿಧ ಯೋಜನೆಗಳ ಲಾಭ ಸಿಗಲು ಈ ವಾಹನಗಳು ದೇಶದಲ್ಲಿ ಓಡಾಡುತ್ತಿವೆ ಎಂದರು. ಇದನ್ನು ಜನರು ‘ಮೋದಿ ಗ್ಯಾರಂಟಿ ವಾಹನ’ ಎಂದೇ ಕರೆಯುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಅವರು ತಿಳಿಸಿದರು.

ಸಂಸದ ಪಿ.ಸಿ.ಮೋಹನ್ ಬೆಂಗಳೂರು ಕೇಂದ್ರ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಎಂ.ಚಂದ್ರು, ಸಂಪತ್ ಕುಮಾರ್, ಎಂ.ಗೋಪಿ, ಗುಣಶೇಖರ್, ಮಂಡಲ ಅಧ್ಯಕ್ಷ ಬಾಲಾಜಿ ಮಣಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version