Site icon Vistara News

Shashi Taroor : ಪ್ರಜಾಪ್ರಭುತ್ವ ಆಶಯ ಉಳಿಸುವ ಹೊಣೆ ಯುವಜನರ ಹೆಗಲಲ್ಲಿ; ಯುವ ಮತ ಅಭಿಯಾನದಲ್ಲಿ ಶಶಿ ತರೂರ್‌

ShaShi taroor

#image_title

ಬೆಂಗಳೂರು: ಭಾರತದ ಶಕ್ತಿ ಎಂದರೆ ಯುವ ಸಮೂಹ. ಇಡೀ ವಿಶ್ವದ ಎಲ್ಲ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಶ್ರೀಮಂತವಾಗಿರುವುದೇ “ಯುವ” ಸಮುದಾಯದಿಂದ. ಇವರು ನಮ್ಮ ಪ್ರಜಾಪ್ರಭುತ್ವದ ಆಶಯಗಳನ್ನು ಮುಂದುವರಿಸಬೇಕಾದ ಜವಾಬ್ದಾರಿ ಇದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ, ವಿಶ್ವಸಂಸ್ಥೆಯಲ್ಲಿ ಪ್ರಮುಖ ಹುದ್ದೆ ನಿಭಾಯಿಸಿದ್ದ ಡಾ. ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಯಲಹಂಕ ಬಳಿ ನಡೆದ ಯುವ ಮತ ಸಂವಾದ ಕಾರ್ಯಕ್ರಮದಲ್ಲಿ ಡಾ. ಶಶಿ ತರೂರ್‌ ಹಲವಾರು ವಿಷಯ ಹಂಚಿಕೊಂಡರು. ಈ ಸಂವಾದಕ್ಕೆ ಕರ್ನಾಟಕದ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಡಾ. ಶಶಿ ತರೂರ್‌ ಉತ್ತರಿಸಿದರು.

ʻʻಈ ಬಾರಿಯ ಕರ್ನಾಟಕ ಚುನಾವಣೆ ಅತ್ಯಂತ ಪ್ರಮುಖವಾಗಿರುತ್ತದೆ. ಏಕೆಂದರೆ ಯುವ ಸಮೂಹದ ಪಾತ್ರ ಇದರಲ್ಲಿ ಮುಖ್ಯವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್‌ ಯುವ ಮತ ಅಭಿಯಾನ ಆರಂಭಿಸಿದೆ. ಕಳೆದ ಮಾರ್ಚ್‌ ಅಂತ್ಯದಿಂದ ಆರಂಭವಾದ ಅಭಿಯಾನಕ್ಕೆ 18 ಸಾವಿರಕ್ಕೂ ಹೆಚ್ಚು ಯುವಕರು ಕೈ ಜೋಡಿಸಿದ್ದಾರೆʼʼ ಎಂದರು.

ʻʻಈ ಬಾರಿ ಯುವ ಮತದಾರರು ಅದರಲ್ಲಿಯೂ ಮೊದಲ ಬಾರಿಗೆ ಮತ ಚಲಾಯಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇವರೆಲ್ಲರೂ ಭವಿಷ್ಯದ ಕುಡಿಗಳು. ಯುವ ಸಮುದಾಯ ಜವಾಬ್ದಾರಿಯುತವಾಗಿ ತಮ್ಮ ಮತ ಚಲಾಯಿಸಬೇಕು. ಯಾರೊಬ್ಬರೂ ಈ ಹಕ್ಕು ಚಲಾಯಿಸುವುದನ್ನು ಮರೆಯಬಾರದುʼʼ ಎಂದು ಡಾ. ಶಶಿ ತರೂರ್‌ ಕರೆ ನೀಡಿದರು.

ʻʻಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಯುವ ಮತ ಅಭಿಯಾನವನ್ನು ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಡೆಸುತ್ತಿರುವುದು ಸ್ವಾಗತಾರ್ಹ. ಈ ಅಭಿಯಾನ ಯಶಸ್ವಿಯಾಗಲಿ. ಯುವ ಮತದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿʼʼ ಎಂದು ಡಾ. ಶಶಿ ತರೂರ್‌ ಅಭಿಪ್ರಾಯಪಟ್ಟರು.

ʻʻಯುವ ಸಮೂಹದ ಅಭಿವೃದ್ಧಿಗೆ ಕಾಂಗ್ರೆಸ್‌ ಬದ್ಧವಾಗಿದೆ ಎನ್ನುವುದಕ್ಕೆ ಈಗ ಇಲ್ಲಿ ಜಾರಿಗೆ ತರುತ್ತಿರುವ ಯುವನಿಧಿ ಗ್ಯಾರಂಟಿ ಯೋಜನೆಯೇ ಸಾಕ್ಷಿ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000 ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ 1500 ರೂಪಾಯಿಯನ್ನು ಎರಡು ವರ್ಷಗಳ ಕಾಲ ನೀಡಲಾಗುವುದು. ಇದರಿಂದ ಉದ್ಯೋಗ ಅರಸುವವರಿಗೆ ಆಸರೆಯಾಗುತ್ತದೆʼʼ ಎಂದರು.

ʻಯಲಹಂಕದ ಹೊಸಳ್ಳಿ ಏರ್‌ ಸ್ಟೇಷನ್‌ ಸಮೀಪ ಎಂಬೆಸಿ ಬೌಲೆವರ್ಡ್‌ನಲ್ಲಿ ನಡೆದ “ಯುವಮತʼʼ ಜಾಗೃತಿ ಆಂದೋಲನದ ಭಾಗವಾಗಿ ಅನ್‌ಪ್ಲಗ್ಡ್‌ ಡಾ. ಶಶಿ ತರೂರು ಕಾರ್ಯಕ್ರಮದಲ್ಲಿ ಆಂದೋಲನದ ರೂವಾರಿ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಆಂದೋಲನದ ಉಸ್ತುವಾರಿ ರಕ್ಷಾ ರಾಮಯ್ಯ ಮಾತನಾಡಿ, “ಯುವಮತʼʼವು ಹೊಸ ಮತದಾರರು ಮತ್ತು ಯುವಜನರ ಮತದಾನವು ದೇಶದ ರಾಜಕೀಯ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗೆ ಕಾರಣವಾಗುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ವಿವರಿಸಿದರು. ಈ ವಿಶೇಷ ಸಂವಾದದಲ್ಲಿ ಶಾಸಕ ಕೃಷ್ಣ ಭೈರೇಗೌಡ, ಯುವ ಮುಖಂಡರಾದ ಅಭಿಷೇಕ್‌ ದತ್‌, ಯುವ ಸಮುದಾಯ, ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಯುವ ಸಮುದಾಯ ಕೇಳಿದ ಪ್ರಶ್ನೆಗಳು ಹೀಗಿವೆ

1) ಟ್ರಾಫಿಕ್‌, ನಿರುದ್ಯೋಗ, ಶಿಕ್ಷಣ ಸಾಲ ಮನ್ನಾ, ಸಾರ್ವಜನಿಕ ಸಾರಿಗೆ, ಬೆಲೆ ಏರಿಕೆ, 40 % ಭ್ರಷ್ಟಾಚಾರ, ದ್ವೇಷ ಮತ್ತು ಅಹಿತಕರ ಘಟನೆಯಂಥ ಸಮಸ್ಯೆಗಳು.
2) ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು.
3) ಬೆಂಗಳೂರನ್ನು ಮೂರು ಪದದಲ್ಲಿ ವಿವರಿಸಿ.
4) ನಕಲಿ ಸುದ್ದಿಗಳು ಮತ್ತು ಅಸಲಿ ಸುದ್ದಿಗಳ ಮೂಲಗಳ ಬಗ್ಗೆ ತಿಳಿಯುವುದು ಹೇಗೆ?
5) ದಮನಿತರ ರಕ್ಷಣೆ: ಪ್ರಾಣಿಗಳು.
6) ಪ್ರಜಾಪ್ರಭುತ್ವದ ಪ್ರಸ್ತುತ ಸ್ಥಿತಿ ಮತ್ತು ಜಾಗತಿಕ ಮಟ್ಟದಲ್ಲಿ ಅದರ ನಿಲುವು.
7) ಚುನಾಯಿತ ಪ್ರತಿನಿಧಿಗಳ ಪಾತ್ರ ಮತ್ತು ಅವರ ಜೀವನ.
8) ಮಾಧ್ಯಮದ ಸ್ಥಿತಿ ಮತ್ತು ಪತ್ರಕರ್ತರು ಸುರಕ್ಷಿತವಾಗಿದ್ದಾರೆಯೇ?
9) ತೆರಿಗೆದಾರರ ಹಣವನ್ನು ಬಳಸದಿರುವುದು.

ಈ ಎಲ್ಲ ವಿಚಾರಗಳಿಗೆ ಶಶಿ ತರೂರು ಅವರು ಸಮರ್ಪಕ ಉತ್ತರಗಳನ್ನು ನೀಡಿದರು.

ಇದನ್ನೂ ಓದಿ : ಬಾಲಕಿಯ ಪ್ರಾಣ ಉಳಿಸಲು 7 ಲಕ್ಷ ರೂ. ಜಿಎಸ್‌ಟಿ ಬಿಟ್ಟ ಕೇಂದ್ರ, ಮಾನವೀಯತೆ ಮೆರೆದ ಶಶಿ ತರೂರ್‌

Exit mobile version