Site icon Vistara News

Shivraj Singh Chouhan: ಮೋದೀಜಿ ನಾಯಕತ್ವದಲ್ಲಿ ಭಾರತ ವಿಶ್ವಗುರುವಾಗಲಿದೆ ಎಂದ ಶಿವರಾಜ್ ಸಿಂಗ್ ಚೌಹಾಣ್

Shivraj Singh Chouhan

ಕಲಬುರಗಿ: ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವಗುರುವಾಗಲಿದೆ. ಈ ನಿಟ್ಟಿನಲ್ಲಿ ಎನ್‍ಡಿಎ 400 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುವ ಮೋದಿಯವರ ಸಂಕಲ್ಪ ಈಡೇರಬೇಕಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಹೇಳಿದರು.

ಕಲಬುರಗಿಯಲ್ಲಿ ಆಯೋಜಿಸಿದ್ದ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ನಾಶ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ನೇತೃತ್ವ ವಹಿಸಿದ ಬಳಿಕ ಕಾಂಗ್ರೆಸ್ ಪಕ್ಷದ ಸ್ಥಿತಿ ಹದಗೆಟ್ಟಿದೆ ಎಂದು ವಿಶ್ಲೇಷಿಸಿದರು.

ಬಸವೇಶ್ವರರ ಪುಣ್ಯಭೂಮಿಗೆ ನಾನು ಬರಲು ಸಾಧ್ಯವಾಗಿದೆ, ಅವರಿಗೆ ನನ್ನ ನಮನಗಳು. ಜಗತ್ತಿನಲ್ಲಿ ಪ್ರಜಾಪ್ರಭುತ್ವ ಹುಟ್ಟಿದ್ದು ಈ ಪುಣ್ಯಭೂಮಿಯಲ್ಲಿ. ನಾವೆಲ್ಲರೂ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ನಿರತರಾಗಿದ್ದೇವೆ. ಕಾಂಗ್ರೆಸ್ ಕರ್ನಾಟಕ ಮತ್ತು ದೇಶವನ್ನು ಸರ್ವನಾಶ ಮಾಡಿದ್ದು, ಆ ಪಕ್ಷವನ್ನು ಕೊನೆಗಾಣಿಸುವ ನಿರ್ಧಾರವನ್ನು ಜನರು ಮಾಡಿದ್ದಾರೆ ಎಂದರು.

ಇದನ್ನೂ ಓದಿ | Fali s Nariman : ಹೋಗಿ ಬನ್ನಿ ನಾರಿಮನ್‌ ಸಾಬ್‌, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರು

ಪಂಡಿತ್ ಜವಾಹರಲಾಲ್ ನೆಹದು ಅವರು ಮಹಾತ್ಮ ಗಾಂಧಿ ಅವರ ಮಾತನ್ನು ಕೇಳಲಿಲ್ಲ, ಆದರೆ ರಾಹುಲ್ ಗಾಂಧಿಯವರು ಮಹಾತ್ಮ ಗಾಂಧಿ ಅವರ ಮಹಾನ್ ಭಕ್ತ, ಅವರು ಕಾಂಗ್ರೆಸ್ ಅನ್ನು ಕೊನೆಗೊಳಿಸುತ್ತಾರೆ. ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದ ಅವರು, ಬನಾರಸ್‍ನಲ್ಲಿ ಮಕ್ಕಳು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುತ್ತಾರೆ ಎಂಬಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರನ್ನು ಅವಮಾನಿಸುತ್ತಿದ್ದೀರಿ? ಸಾಮಾನ್ಯ ಪ್ರಜೆಯನ್ನು ಅವಮಾನಿಸುವುದು ಇಷ್ಟು ದೊಡ್ಡ ನಾಯಕನಿಗೆ ಸರಿಹೋಗುತ್ತದೆಯೇ? ಎಂದು ಪ್ರಶ್ನಿಸಿದರು.

ಖರ್ಗೆಯವರ ಶಕ್ತಿಹೀನ ನಾಯಕತ್ವ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಿವರಾಜ್ ಸಿಂಗ್ ಚೌಹಾಣ್, ಇತ್ತೀಚಿನ ದಿನಗಳಲ್ಲಿ ಖರ್ಗೆ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಜನರು ಏಕೆ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದು ಕೇಳುತ್ತಿದ್ದಾರೆ. ಖರ್ಗೆ ಜೀ, ನೀವು ರಾಷ್ಟ್ರೀಯ ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಹಾಗಾಗಿಯೇ ದಿನವೂ ಯಾರೋ ಒಬ್ಬರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಿಮ್ಮ ನಾಯಕತ್ವದಲ್ಲಿ ಶಕ್ತಿ ಇಲ್ಲ, ಜನರ ಆಶಾಭಾವನೆಗೆ ಧಕ್ಕೆಯಾಗಿದೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯಂತಹ ನಾಯಕರು ಮಾತ್ರ ಕಾಂಗ್ರೆಸ್‍ನಲ್ಲಿ ಉಳಿಯುತ್ತಾರೆ ಹೊರತು ಬೇರೆ ಯಾರೂ ಉಳಿಯುವುದಿಲ್ಲ. ಕಾಂಗ್ರೆಸ್ ಹಾಳು ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದ ಅವರು, ಈಗ ಕಾಂಗ್ರೆಸ್ ಅಂತ್ಯ ಕಾಣುತ್ತಿದೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮಲಲ್ಲಾನ ಭವ್ಯ ಮಂದಿರವನ್ನು ನಿರ್ಮಿಸಲಾಯಿತು, ಇಡೀ ದೇಶ ಮಾತ್ರವಲ್ಲ, ಇಡೀ ಜಗತ್ತೇ ಸಂತೋಷ ಪಟ್ಟಿತು. ಪ್ರತಿ ಹಳ್ಳಿಯಲ್ಲಿ ಕೇಸರಿ ಧ್ವಜಗಳನ್ನು ಹಾರಿಸಲಾಯಿತು, ದೀಪಗಳನ್ನು ಬೆಳಗಿಸಲಾಯಿತು. ಸೋನಿಯಾ ಮೇಡಂ, ಖರ್ಗೆ ಜೀ ಮತ್ತು ರಾಹುಲ್ ಬಾಬಾ ಅವರಿಗೂ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗಿತ್ತು, ಆದರೆ ಮೋದೀಜಿಯನ್ನು ವಿರೋಧಿಸುತ್ತಲೇ ಕಾಂಗ್ರೆಸ್ ರಾಮನನ್ನೇ ವಿರೋಧಿಸತೊಡಗಿತು. ಕಾಂಗ್ರೆಸ್ಸಿಗರು ಅಲ್ಲಿ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಿದ್ದರು, ಆದರೆ ದಿನಾಂಕ ಹೇಳುವುದಿಲ್ಲ. ಈಗ ನೋಡಿ, ಜನವರಿ 22 ರಂದು, ಅಯೋಧ್ಯೆಯ ಭವ್ಯವಾದ ಮತ್ತು ದೈವಿಕ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆÀ ನಡೆದಿದೆ ಎಂದರು.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400 ದಾಟುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ. ಬಿಜೆಪಿ ಏಕಾಂಗಿಯಾಗಿ 370 ಮತ್ತು ಎನ್‍ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಮೋದಿಯವರನ್ನು ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿ ಮಾಡಬೇಕು. ಕರ್ನಾಟಕದಲ್ಲಿ ಈ ಬಾರಿ 28 ಲೋಕಸಭಾ ಸ್ಥಾನಗಳ ಪೈಕಿ 28 ಸ್ಥಾನ ಗೆಲ್ಲಬೇಕಿದೆ ಎಂದರು.

ಕರ್ನಾಟಕದಲ್ಲಿ ಬಿಜೆಪಿ 2014ರಲ್ಲಿ 17 ಮತ್ತು 2019ರಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು. ಈಗ 2024 ರಲ್ಲಿ ನಾವು ಎಲ್ಲಾ 28 ಸ್ಥಾನಗಳಲ್ಲಿ ಐತಿಹಾಸಿಕ ಗೆಲುವು ದಾಖಲಿಸಬೇಕಾಗಿದೆ. 2047ರ ವೇಳೆಗೆ ನಮ್ಮ ದೇಶ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವಾಗಲಿದೆ ಎಂಬುದು ಪ್ರಧಾನಿ ಮೋದಿಯವರ ಭರವಸೆ. ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಖರ್ಗೆಯವರ ಆರೋಪಗಳಿಗೆ ಉತ್ತರ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಮೋದಿಯವರ ನೇತೃತ್ವದಲ್ಲಿ ನವ ಭಾರತ ನಿರ್ಮಾಣ

ಮೋದಿಯವರ ನೇತೃತ್ವದಲ್ಲಿ ನವ ಭಾರತ ನಿರ್ಮಾಣವಾಗುತ್ತಿದೆ. ಆದರೆ ಕಾಂಗ್ರೆಸ್ ದೇಶವನ್ನು ಎಲ್ಲಿಗೆ ಕೊಂಡೊಯ್ದಿದೆ ನೋಡಿ ಎಂದ ಶಿವರಾಜ್ ಸಿಂಗ್ ಚೌಹಾಣ್, ಭಾರತವನ್ನು ಹಗರಣಗಳ ದೇಶ ಎಂದು ಕರೆಯಲಾಗುತ್ತಿತ್ತು, ಯಾರೂ ಹೂಡಿಕೆಗೆ ಬರಲು ಸಿದ್ಧರಿರಲಿಲ್ಲ. 2ಜಿ ಹಗರಣ, 4ಜಿ ಹಗರಣ, ಸೋದರ ಮಾವ ಹಗರಣ ಹೀಗೆ ಎಷ್ಟು ಹಗರಣಗಳು ನಡೆದಿವೆಯೋ ಗೊತ್ತಿಲ್ಲ, ಮೋದಿಜಿ ಭಾರತದ ಪ್ರಧಾನಿಯಾದ ಮೇಲೆ ನಾನು ತಿನ್ನುವುದಿಲ್ಲ, ಯಾರಿಗೂ ತಿನ್ನಲು ಬಿಡುವುದಿಲ್ಲ ಎಂದರು. ಮೊದಲು ಸಣ್ಣ ದೇಶಗಳು ನಮ್ಮನ್ನು ಹೆದರಿಸುತ್ತಿದ್ದವು, ಆದರೆ ಈಗ ಚೀನಾ ಸೈನಿಕರು ನಮ್ಮ ಗಡಿಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, ಭಾರತೀಯ ಸೇನೆ ಅವರನ್ನು ಓಡಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.

ರಷ್ಯಾ-ಉಕ್ರೇನ್ ಯುದ್ಧದಿಂದ ಹಲವು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದರು. ಮೋದಿ ಜೀ ಎರಡೂ ದೇಶಗಳ ಅಧ್ಯಕ್ಷರನ್ನು ಕರೆದು, ಭಾರತದ ಮಕ್ಕಳು ತ್ರಿವರ್ಣ ಧ್ವಜವನ್ನು ಹಿಡಿದು ಹೊರಬರುವಾಗ, ಯುದ್ಧವು ನಿಲ್ಲುತ್ತದೆ ಮತ್ತು ನಮ್ಮ ಮಕ್ಕಳು ಯುದ್ಧದ ಮಧ್ಯದಿಂದ ಸುರಕ್ಷಿತವಾಗಿ ಭಾರತಕ್ಕೆ ಬರುತ್ತಾರೆ ಎಂದು ಹೇಳಿದರು. ಭಾರತದ ಆರ್ಥಿಕತೆಯು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮೋದೀಜಿ ಅವರ ಮೂರನೇ ಅವಧಿಯಲ್ಲಿ, ನಮ್ಮ ಆರ್ಥಿಕತೆಯು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಮೋದಿಯವರ ನಾಯಕತ್ವದಲ್ಲಿ ಭಾರತ ಈಗ ವಿಶ್ವಗುರುವಾಗಲು ಹೊರಟಿದೆ ಎಂದು ವಿವರಿಸಿದರು.

ಇದನ್ನೂ ಓದಿ | Nadageethe Row : ಇದು ಎಡವಟ್ಟು ಗಿರಾಕಿ ಸರ್ಕಾರ, ಇಲ್ಲಿ ಅಧಿಕಾರಿಗಳದ್ದೇ ದರ್ಬಾರ್‌; ಅಶ್ವತ್ಥನಾರಾಯಣ

ಶಿವರಾಜ್ ಸಿಂಗ್ ಚೌಹಾಣ್ ಅವರು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರಲ್ಲದೆ, ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು. ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಗೋಡೆ ಬರಹ ಬರೆದರು. ಪ್ರತಿದಿನ ಸಸಿ ನೆಡುವ ಪ್ರತಿಜ್ಞೆಯ ಭಾಗವಾಗಿ ಸಸಿಗಳನ್ನು ನೆಟ್ಟರು.

Exit mobile version