ಉಡುಪಿ: ಇಲ್ಲಿನ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ ಯೋಗ್ಯ ಶೌಚಾಲಯ (Eco friendly toilet) ನಿರ್ಮಾಣವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ಸ್ವಚ್ಛ ಭಾರತ ಕಲ್ಪನೆಗೆ ಅನುಗುಣವಾಗಿ ಕರ್ನಾಟಕದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರ ಪರಿಕಲ್ಪನೆಯಂತೆ ಈ ಶೌಚಾಲಯ ನಿರ್ಮಾಣಗೊಂಡಿದೆ.
ಭಾರತದ ರಕ್ಷಣಾ ಇಲಾಖೆಯಲ್ಲಿ (ಡಿ.ಆರ್.ಡಿ.ಓ) ಸುಮಾರು ಐವತ್ತು ವರ್ಷಗಳಿಂದ ಸಹಯೋಗ ಹೊಂದಿರುವ ತಮಿಳುನಾಡಿನ ಕೊಯಮುತ್ತೂರು ಮೂಲದ ಮ್ಯಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಪ್ರಥಮ ಬಾರಿಗೆ (ಸ್ಮಾರ್ಟ್ ಇ ಟಾಯ್ಲೆಟ್) ಪರಿಸರ ಯೋಗ್ಯ ಶೌಚಾಲಯವನ್ನು ನಿರ್ಮಾಣ ಮಾಡಿದೆ. ಇದನ್ನು ಮೊಡಿನ್ನೊ ಇನ್ನೋವೇಷನ್ ಇಂಡಿಯಾ ಪ್ರೈವೇಟ್ ಲಿ.ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಮೊದಲ ಶೌಚಾಲಯವನ್ನು ಉಡುಪಿ ಜಿಲ್ಲೆಯ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಅಳವಡಿಸಲಿದೆ.
ಸ್ವಚ್ಛ ಭಾರತ ಕಲ್ಪನೆಗೆ ಹೊಸ ಮುನ್ನುಡಿ
ಕಾರ್ಕಳದಲ್ಲಿ ನಿರ್ಮಾಣವಾಗಿರುವ ಶೌಚಾಲಯದ ವಿಶೇಷತೆಯೆಂದರೆ ಶೌಚದಲ್ಲಿ ಬಳಸಿದ ನೀರು ಮಾನವ ತ್ಯಾಜ್ಯದೊಂದಿಗೆ ಮ್ಯಾಕ್ ಬಯೋ ಡೈಜೆಸ್ಟರ್ ಮೂಲಕ ಯಾವುದೇ ರೀತಿಯ ವಿದ್ಯುತ್ ಅಥವಾ ಇಂಧನದ ಸಹಾಯವಿಲ್ಲದೆ ಮಾಲಿನ್ಯ ಸಂಸ್ಥೆ ನಿರೀಕ್ಷಿಸಿದ ಮಟ್ಟಕ್ಕೂ ಹೆಚ್ಚಿನ ರೀತಿಯಲ್ಲಿ ಶುದ್ಧೀಕರಣಗೊಂಡು ಪುನಃ ಸೋಲಾರ್ ಪಂಪ್ ಮೂಲಕ ಶೌಚಾಲಯದ ಮೇಲಿನ ಟ್ಯಾಂಕ್‌ಗೆ ವರ್ಗಾವಣೆಯಾಗುತ್ತದೆ. ಇದರಿಂದ ಬಳಸಿದ ನೀರನ್ನು ಪುನಃ ಸಂರಕ್ಷಿಸಿದಂತಾಗುತ್ತದೆ.
ಈ ಶೌಚಾಲಯವು ಕೇವಲ ೨೦ ದಿನಗಳಲ್ಲಿ ನಿರ್ಮಾಣ ಮಾಡಬಹುದಾಗಿದ್ದು ೩೦ ವರ್ಷಕ್ಕೂ ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ. ಶೌಚಾಲಯದ ಒಳಗಡೆಯ ವಿನ್ಯಾಸ ಪಂಚತಾರಾ ಹೋಟೆಲ್‌ಗಳಲ್ಲಿರುವ ಶೌಚಾಲಯದಂತೆ ನೈರ್ಮಲ್ಯದಿಂದ ಕೂಡಿದೆ. ಇದನ್ನು ಗ್ರಾಮದ ವಿದ್ಯುತ್ ಸಂಪರ್ಕ ಇಲ್ಲದ ಯಾವುದೇ ಜಾಗದಲ್ಲಿಯೂ ಕೂಡ ನಿರ್ಮಾಣ ಮಾಡಬಹುದಾಗಿದೆ.
ಇದನ್ನೂ ಓದಿ: ದೆಹಲಿ ಮಾದರಿಯಲ್ಲಿ ಇನ್ನೊಂದು ಅಪಘಾತ, ಬೈಕ್ ಸವಾರನನ್ನು 12 ಕಿಮೀ ಎಳೆದೊಯ್ದು ಸಾಯಿಸಿದ ಕಾರು
ಒಂದು ಸಾವಿರ ಲೀಟರ್ ಓವರ್‌ಹೆಡ್ ಟ್ಯಾಂಕ್ ಹೊಂದಿದೆ. ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆ ಬೆಳಕಿನ ವಿನ್ಯಾಸ ಹೊಂದಿದೆ. ಸ್ವಯಂ ಚಾಲಿತ ಶೌಚಾಲಯ ನೀರು, ಗಾಳಿ-ಬೆಳಕು ಸೌಕರ್ಯ ಸೇರಿದಂತೆ ಸಂಪೂರ್ಣ ಪರಿಸರ ಸ್ನೇಹಿ ಕಲ್ಪನೆಯಲ್ಲಿ ಮೂಡಿಬಂದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ