Site icon Vistara News

Underground Transformer: ಮಲ್ಲೇಶ್ವರದಲ್ಲಿ ದೇಶದ ಮೊದಲ ಭೂಗತ ವಿದ್ಯುತ್ ಪರಿವರ್ತಕ ಕೇಂದ್ರ ಲೋಕಾರ್ಪಣೆ

KJ George‌ in power transformer plant

ಬೆಂಗಳೂರು: ದೇಶದ ಮೊದಲ ಭೂಗತ ವಿದ್ಯುತ್‌ ಪರಿವರ್ತಕ ಕೇಂದ್ರ (Underground Transformer) ನಗರದ ಮಲ್ಲೇಶ್ವರದಲ್ಲಿ ಮಂಗಳವಾರ ಲೋಕಾರ್ಪಣೆಗೊಂಡಿದೆ. ಬೆಸ್ಕಾಂ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಒಟ್ಟು 1.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 500 ಕೆವಿಎ ಭೂಗತ ವಿದ್ಯುತ್ ಪರಿವರ್ತಕ ಕೇಂದ್ರವನ್ನು ಇಂಧನ ಸಚಿವ ಕೆ. ಜೆ. ಜಾರ್ಜ್‌ ಅವರು ಉದ್ಘಾಟಿಸಿದರು.

ಮಲ್ಲೇಶ್ವರದಲ್ಲಿ ಆಯೋಜಿಸಿದ್ದ ಭೂಗತ ವಿದ್ಯುತ್ ಪರಿವರ್ತಕ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಇಂಧನ ಸಚಿವ ಕೆ. ಜೆ. ಜಾರ್ಜ್‌ ಅವರು, ಪಾದಚಾರಿ ಮಾರ್ಗಗಳಲ್ಲಿ ಅಪಯಕಾರಿ ಸ್ಥಿತಿಯಲ್ಲಿರುವ ಟಿಸಿಗಳ ಸ್ಥಳಾಂತರದ ಜತೆಗೆ ಭೂಗತ ಟ್ರಾನ್ಸ್‌ಫಾರ್ಮರ್‌ಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಮಲ್ಲೇಶ್ವರದಲ್ಲಿ ಲೋಕಾರ್ಪಣೆಗೊಂಡಿರುವ ಕೇಂದ್ರ, ದೇಶದ ಮೊದಲ ಭೂಗತ ಪರಿವರ್ತಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಭೂಗತ ಪರಿವರ್ತಕ ಕೇಂದ್ರಗಳನ್ನು ನಿರ್ಮಿಸುವ ಕುರಿತು ಈಗಾಗಲೇ ಯೋಜನೆಯನ್ನು ರೂಪಿಸಿಕೊಂಡಿದ್ದು, ಪ್ರತಿ ಭೂಗತ ಟ್ರಾನ್ಸ್‌ಫಾರ್ಮರ್‌ಗಳ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂ ವ್ಯಯವಾಗುತ್ತದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ | Shopping Mall : ಮಾಲ್‌ನಲ್ಲೂ ಸಿಗಲಿದೆ ಎಣ್ಣೆ ; ಹೆಣ್ಮಕ್ಕಳು ಶಾಪಿಂಗ್‌ ಮಾಡುವಾಗ ಪುರುಷರು ಲಿಕ್ಕರ್‌ ಎಂಜಾಯ್‌ ಮಾಡ್ಬೋದು!

ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ಭೂಗತ ಉಪ ಕೇಂದ್ರಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಮೇಲ್ಮಾರ್ಗದ ಎಚ್.ಟಿ ವಿದ್ಯುತ್ ತಂತಿಗಳನ್ನು ಭೂಗತವಾಗಿ ಪರಿವರ್ತಿಸುವ ಯೋಜನೆಯನ್ನು ಬೆಸ್ಕಾಂ ಈಗಾಗಲೇ ಕಾರ್ಯಗತಗೊಳಿಸಿದೆ. ನೆಲದಡಿಯಲ್ಲಿ ಕೇಬಲ್ ಹಾಗೂ ವಿದ್ಯುತ್ ಪರಿವರ್ತಕ ವ್ಯವಸ್ಥೆಯು ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಲ್ಲೇಶ್ವರ ಕ್ಷೇತ್ರದ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಕಾಮಗಾರಿಯ ಕುರಿತು 2022ರಲ್ಲೇ ಇಂಧನ ಇಲಾಖೆಯೊಂದಿಗೆ ಚರ್ಚಿಸಲಾಗಿತ್ತು. ಅನುದಾನದ ಕೊರತೆ ಹಾಗೂ ನಾನಾ ಕಾರಣಗಳಿಂದ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮಲ್ಲೇಶ್ವರಂನಲ್ಲಿ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು.

ಭೂಗತ ಟಿಸಿ ವಿವರ

ಬೆಸ್ಕಾಂ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಒಟ್ಟು 1.97 ಕೋಟಿ ವೆಚ್ಚದಲ್ಲಿ ಈ ಪರಿವರ್ತಕ ಕೇಂದ್ರವನ್ನು (ಟಿಸಿ) ಮಲ್ಲೇಶ್ವರಂನ 15ನೇ ಅಡ್ಡರಸ್ತೆಯ ಪಾದಚಾರಿ ಮಾರ್ಗದಡಿಯಲ್ಲಿ ನಿರ್ಮಿಸಲಾಗಿದ್ದು, ಈ ಕೇಂದ್ರದ ಉದ್ದ 14 ಮೀಟರ್, ಅಗಲ 5 ಮೀಟರ್ ಹಾಗೂ ಆಳ 4 ಮೀಟರ್‌ಗಳಿಷ್ಟಿದೆ.

ಬೆಸ್ಕಾಂ 1.33 ಕೋಟಿ ರೂ. ವೆಚ್ಚದಲ್ಲಿ 500 ಕೆವಿಎ ತೈಲರಹಿತ ಪರಿವರ್ತಕ, 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯುನಿಟ್, 5 ವೇ ಎಲ್.ಟಿ. ವಿತರಣಾ ಪೆಟ್ಟಿಗೆ, 2 ಕೆವಿಎ ಯುಪಿಎಸ್, 1 ಹೆಚ್.ಪಿ ವಾಟರ್ ಪಂಪ್ (ಸ್ವಯಂಚಾಲಿತ), ಹವಾನಿಯಂತ್ರಣ ವ್ಯವಸ್ಥೆ (ಸ್ವಯಾಂಚಾಲಿತ), ವಿದ್ಯುತ್ ದೀಪಗಳು, ಅಗ್ನಿಶಾಮಕ ಉಪಕರಣಗಳು ಸೇರಿದಂತೆ ಭೂಗತ ಪರಿವರ್ತಕ ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ವಿದ್ಯುತ್ ಉಪಕರಣಗಳನ್ನು ಅಳವಡಿಸಿದೆ. ಈ ಯೋಜನೆಯ ಸಿವಿಲ್‌ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂ. ಗಳ ಅನುದಾನವನ್ನು ಒದಗಿಸಿದೆ.

ವಿತರಣ ಪರಿವರ್ತಕಗಳು, ರಿಂಗ್ ಮೇನ್ ಯೂನಿಟ್’ಗಳು, ಫಿಡರ್ ಪಿಲ್ಲರ್ ಬಾಕ್ಸ್‌ಗಳು ಸೇರಿ ಸಂಪೂರ್ಣ ವ್ಯವಸ್ಥೆಯನ್ನು ಭೂಗತವಾಗಿ ಪರಿವರ್ತಿಸಲಾಗುತ್ತಿದ್ದು, ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸುವುದರ ಜತೆಗೆ ವಿದ್ಯುತ್‌ ಪೂರೈಕೆ ನಷ್ಟವನ್ನು ತಗ್ಗಿಸಬಹುದಾಗಿದೆ. ಜತೆಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ | Human Animal Conflict : 15 ದಿನದಲ್ಲಿ ವನ್ಯಜೀವಿ -ಮಾನವ ಸಂಘರ್ಷಕ್ಕೆ 11 ಜನ ಸಾವು; ತಡೆಗೆ 500 ಕೋಟಿ ರೂ. ಅನುದಾನಕ್ಕೆ ಮನವಿ

ಸಮಾರಂಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಭೂಗತ ಪರಿವರ್ತಕ ಕೇಂದ್ರದ ಕುರಿತು ಮಾಹಿತಿ ನೀಡಿದರು. ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ ಅವರು ಸ್ವಾಗತಿಸಿ ಯೋಜನೆ ವೆಚ್ಚದ ಕುರಿತು ವಿವರಿಸಿದರು.

ಬೆಸ್ಕಾಂ ನಿರ್ದೇಶಕರು (ಹಣಕಾಸು) ದರ್ಶನ್.ಜೆ, ನಿರ್ದೇಶಕರು (ತಾಂತ್ರಿಕ) ರಮೇಶ್‌ ಎಚ್‌.ಜೆ.,
ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಬಿಬಿಎಂಪಿ ವಲಯ ಆಯುಕ್ತರಾದ ಡಾ.ದೀಪಕ್, ಬೆವಿಕಂ ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Exit mobile version