ಬೆಂಗಳೂರು: ಸ್ವಿಜರ್ಲೆಂಡ್‌ನ ಬರ್ನ್‌ನಲ್ಲಿ ನಡೆದ ವರ್ಲ್ಡ್‌ಸ್ಕಿಲ್ಸ್ ಕಾಂಪಿಟಿಷನ್-೨೦೨೨ನ ಪ್ರೊಟೊಟೈಪ್ ಮಾಡಲಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನ ಲಿಖಿತ್ ಎಮ್ಮೆದೊಡ್ಡಿ ಪ್ರಕಾಶ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಯತೀಶ್ ಅವರು ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ಮೆಕಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪಡೆದು ಈ ಜಾಗತಿಕ ಮಟ್ಟದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಜಪಾನ್, ಕಜಕಸ್ತಾನ, ಕೊರಿಯಾ, ಚೈನೀಸ್ ತೈಪೆ ಮತ್ತು ಥಾಯ್ಲೆಂಡ್ ದೇಶದ ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಲಿಖಿತ್ ಸಾಧನೆ ಮಾಡಿದ್ದಾರೆ. ಸ್ಪರ್ಧೆಗಾಗಿ ಈ ವರ್ಷದ ಆರಂಭದಿಂದಲೇ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಭಾಸ್ಕರ್ ಸಿಂಗ್ ಅವರು ತರಬೇತಿಯನ್ನು ನೀಡಿದ್ದರು. ಲಿಖಿತ್ ಅವರು ಈ ಹಿಂದೆ ಇಂಡಿಯಾಸ್ಕಿಲ್ಸ್ 2021 ಅನ್ನು ಗೆದ್ದೂ ಸಾಧನೆ ಮಾಡಿದ್ದರು.
ರೈತರ ಮಗನಾದ ಲಿಖಿತ್ ಜಾಗತಿಕ ಮಟ್ಟದ ಸ್ಪರ್ಧೆಗಾಗಿ ಸತತ ತರಬೇತಿ ಪಡೆಯುವ ಜತೆಗೆ ತಾವೂ ಉತ್ತಮ ಪ್ರಯತ್ನ ಮಾಡಿದ್ದಾರೆ. ಕೌಶಲಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ (MSDE) ಅಡಿಯಲ್ಲಿ ಬರುವ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ (NSDC) ವರ್ಲ್ಡ್ ಸ್ಕಿಲ್ಸ್ ಇಂಡಿಯಾವು ಭಾರತದಲ್ಲಿ ಕೌಶಲ್ಯ ಸ್ಪರ್ಧೆಗಳನ್ನು ನಡೆಸಲು ಮತ್ತು ಅಂತರರಾಷ್ಟ್ರೀಯ ಕೌಶಲ್ಯ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಲು ಯುವಕರಿಗೆ ತರಬೇತಿ ನೀಡುತ್ತಿದೆ. ಈ ಯೋಜನೆಯಡಿ ಲಿಖಿತ್ ಅಂತಾರಾಷ್ಟ್ರಿಯ ಮಟ್ಟದಲ್ಲಿ ಸ್ಪರ್ಧೆ ಮಾಡಿ ಕಂಚು ಗೆದ್ದಿದ್ದಾರೆ.
ವರ್ಲ್ಡ್‌ಸ್ಕಿಲ್ಸ್ ಸ್ಪರ್ಧೆಯು ಜಾಗತಿಕ ಉದ್ಯಮದ ಮಾನದಂಡಗಳನ್ನು ಪ್ರತಿಬಿಂಬಿಸುವ ವಿಶ್ವದ ಅತಿ ದೊಡ್ಡ ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಶ್ರೇಷ್ಠತೆಯ ಕಾರ್ಯಕ್ರಮ. ವರ್ಲ್ಡ್‌ಸ್ಕಿಲ್ಸ್ ಸ್ಪರ್ಧೆ 2022 ಚೀನಾದ ಶಾಂಘೈನಲ್ಲಿ ನಡೆಯಬೇಕಿತ್ತು. ಅಲ್ಲಿ ಕೊರೊನಾ ನಿರ್ಬಂಧಗಳಿರುವ ಕಾರಣ ೧೫ ದೇಶಗಳಲ್ಲಿ ಸೆಪ್ಟೆಂಬರ್ 7ರಿಂದ ನವೆಂಬರ್ ೨೨ರವರೆಗೆ ಸ್ಪರ್ಧೆ ನಡೆಯಲಿದೆ.
ವರ್ಲ್ಡ್‌ಸ್ಕಿಲ್ಸ್ ಸ್ಪರ್ಧೆಯು ವರ್ಲ್ಡ್‌ಸ್ಕಿಲ್ಸ್ ಇಂಟರ್‌ನ್ಯಾಷನಲ್‌ನ ಸದಸ್ಯ ರಾಷ್ಟ್ರಗಳ ನಡುವಿನ ನುರಿತ ಯುವಕರ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದೆ. ಪ್ರೊಟೊಟೈಪ್ ಮಾಡೆಲಿಂಗ್, ಹಲವು ಕೌಶಲ್ಯ ಸ್ಪರ್ಧೆಗಳಲ್ಲಿ ಒಂದಾಗಿದ್ದು, ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಎಂಜಿನಿಯರ್‌ಗಳು ಮತ್ತು ವಿನ್ಯಾಸಕರು ಪರೀಕ್ಷಿಸಲು, ನಿರ್ಣಯಿಸಲು ಮತ್ತು ಮಾರ್ಪಡಿಸಲು ಅನುಮತಿಸುವ ಮೂಲ ಮಾದರಿಗಳನ್ನು ರಚಿಸುವುದು ಈ ಸ್ಪರ್ಧೆಯ ನಿಯಮಗಳಾಗಿವೆ.