Site icon Vistara News

Aravind Limbavali | ಒಬ್ಬರೇ ಅಲ್ಲ ಲಿಂಬಾವಳಿ, ದೇಶಾದ್ಯಂತ ಇದೆ ಇಂಥ ರಾಜಕಾರಣಿಗಳ ಹಾವಳಿ!

Limbavali

ಬೆಂಗಳೂರು: ಚುನಾವಣೆಗೆ ಮೊದಲು ಜನರಿಗೆ ನೂರಾರು ಭರವಸೆ ನೀಡಿ, ಮತದಾರರ ಕಾಲಿಗೆ ಬಿದ್ದು, ಚುನಾವಣೆಯಲ್ಲಿ ಗೆದ್ದ ನಂತರ ಅದೇ ಮತದಾರರ ಮೇಲೆ ದರ್ಪ ತೋರಿಸುವುದು, ಬೈಯುವುದು, ಹಲ್ಲೆ ಮಾಡುವುದು ನಮ್ಮ ದೇಶದ ರಾಜಕಾರಣಿಗಳಿಗೆ ರೂಢಿಯಾಗಿದೆ. ಅರವಿಂದ್‌ ಲಿಂಬಾವಳಿ (Aravind Limbavali) ಅವರಂತಹ ದರ್ಪದ ರಾಜಕಾರಣಿಗಳು ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಇದ್ದಾರೆ.

ಸಾರ್ವಜನಿಕವಾಗಿಯೇ ಮತದಾರರ ಮೇಲೆ ಕೈ ಮಾಡಿದ, ಬೈದ, ಅವಾಚ್ಯ ಶಬ್ದಗಳನ್ನು ನಿಂದಿಸಿದ, ಮಾನ ಮರ್ಯಾದೆ ಬಿಟ್ಟು ವರ್ತಿಸಿದ ಘಟನೆಗಳು ಸಾಕಷ್ಟಿವೆ. ಕಳೆದ ಒಂದು ತಿಂಗಳಲ್ಲಿಯೇ ಹೀಗೆ ಸಭ್ಯತೆಯಿಲ್ಲದೆ ವರ್ತಿಸಿದ ದೇಶದ “ಅರವಿಂದ್‌ ಲಿಂಬಾವಳಿಗಳ” ಸಂಕ್ಷಿಪ್ತ ಮಾಹಿತಿ, ಘಟನೆಯ ವಿವರ ಹೀಗಿದೆ.

ಮನೆಗೆಲಸದಾಕೆ ಮೇಲೆ ಬಿಜೆಪಿ ನಾಯಕಿ ದರ್ಪ

ಸೀಮಾ ಪಾತ್ರಾ.

ಜಾರ್ಖಂಡ್‌ನಲ್ಲಿ ಕೆಲವು ದಿನಗಳ ಹಿಂದಷ್ಟೇ ಮನೆಗೆಲಸದ ಮಹಿಳೆಗೆ ಕಿರುಕುಳ ನೀಡಿದ ಕಾರಣಕ್ಕಾಗಿ ಪೊಲೀಸರು ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರನ್ನು ಬಂಧಿಸಿದ್ದಾರೆ. ರಾಂಚಿಯ ಅಶೋಕ್‌ ನಗರದಲ್ಲಿರುವ ನಿವಾಸದಲ್ಲಿ ಮನೆಗೆಲಸದಾಕೆಗೆ ಹಲವು ವರ್ಷಗಳಿಂದ ಸೀಮಾ ಪಾತ್ರಾ ಕಿರುಕುಳ, ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದರ ಕುರಿತು ಮನೆಗೆಲಸ ಮಾಡುತ್ತಿದ್ದ ಸುನೀತಾ ಎಂಬುವರು ಮಾಡಿದ ವಿಡಿಯೊ ವೈರಲ್‌ ಆದ ಬಳಿಕ ಬಿಜೆಪಿಯು ಪಾತ್ರಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.

ಆಪ್‌ ಶಾಸಕಿಗೆ ಪತಿಯಿಂದಲೇ ಕಪಾಳಮೋಕ್ಷ

ಆಪ್‌ ಶಾಸಕಿ ಬಲಜಿಂದರ್‌ ಕೌರ್.

ರಾಜಕಾರಣಿಗಳಿಗೆ ಹಣ, ಅಧಿಕಾರದ ದರ್ಪ ಇರುತ್ತದೆ. ಹಾಗಾಗಿ ಅವರು ಮತದಾರರ ಮೇಲೆ ದೌರ್ಜನ್ಯ ಎಸಗುತ್ತಾರೆ. ಆದರೆ, ಪಂಜಾಬ್‌ ಶಾಸಕಿ ಬಲಜಿಂದರ್‌ ಕೌರ್‌ ಅವರ ಮೇಲೆ ಪತಿ ಸುಖರಾಜ್‌ ಸಿಂಗ್‌ ಅವರು ಕಪಾಳಮೋಕ್ಷ ಮಾಡಿದ ವಿಡಿಯೊ ಕೆಲ ದಿನಗಳ ಹಿಂದಷ್ಟೇ ವೈರಲ್‌ ಆಗಿತ್ತು. ಹಾಗೆಯೇ, ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಕೇಟರಿಂಗ್‌ ಮ್ಯಾನೇಜರ್‌ಗೆ ಶಿವಸೇನೆ ಶಾಸಕ ಹಲ್ಲೆ

ಮಹಾರಾಷ್ಟ್ರದಲ್ಲಿ ಎರಡು ದಿನಗಳ ಹಿಂದಷ್ಟೇ ಶಿವಸೇನೆ ಶಾಸಕ ಸಂತೋಶ್‌ ಬಂಗಾರ್‌ ಅವರು ಖಾಸಗಿ ಕೇಟರಿಂಗ್‌ ಮ್ಯಾನೇಜರ್‌ ಒಬ್ಬರಿಗೆ ಅವಾಚ್ಯವಾಗಿ ಬೈದ, ಹಲ್ಲೆ ನಡೆಸಿದ ವಿಡಿಯೊ ವೈರಲ್‌ ಆಗಿತ್ತು. ತಮ್ಮ ಕ್ಷೇತ್ರದ ಕೆಲಸಗಾರರಿಗೆ ಕಳಪೆ ಆಹಾರ ಸರಬರಾಜು ಮಾಡಿದ ಹಿನ್ನೆಲೆಯಲ್ಲಿ ಶಾಸಕ ಮಹೋದಯರು ಮ್ಯಾನೇಜರ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ನಿವೃತ್ತ ಸೈನಿಕನಿಗೆ ಬಿಜೆಪಿ ಯುವ ಮುಖಂಡನಿಂದ ಥಳಿತ

ಸೈನಿಕರ ಬಗ್ಗೆ ಗೌರವ ಇರುವ ಏಕೈಕ ಪಕ್ಷ ಎಂಬಂತೆ ಬಿಜೆಪಿ ನಾಯಕರು ವರ್ತಿಸುತ್ತಾರೆ. ಆದರೆ, ಕಳೆದ ಮಂಗಳವಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಋತುರಾಜ್‌ ಚತುರ್ವೇದಿ ಎಂಬುವರು ನಿವೃತ್ತ ಯೋಧರೊಬ್ಬರನ್ನು ಥಳಿಸಿದ್ದರು. ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ವೈರಲ್‌ ಆಗಿತ್ತು. ರಾತ್ರೋರಾತ್ರಿ ಸಲೂನ್‌ಗೆ ನುಗ್ಗಿ ಋತುರಾಜ್‌ ಹಾಗೂ ಅವರ ಆಪ್ತರು ಹಲ್ಲೆ ನಡೆಸಿದ್ದರು.

ಪಕ್ಕದ ಮನೆಯ ಮಹಿಳೆಗೆ ಬೈದ ಬಿಜೆಪಿ ನಾಯಕನ ಬಂಧನ

ನೊಯ್ಡಾದಲ್ಲಿ ಮಹಿಳೆ ಜತೆ ಶ್ರೀಕಾಂತ್‌ ತ್ಯಾಗಿ ವಾಗ್ವಾದ.

ಉತ್ತರ ಪ್ರದೇಶದ ನೊಯ್ಡಾದಲ್ಲಿ ಪಕ್ಕದ ಮನೆಯ ಮಹಿಳೆಗೆ ಬೈದು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಬಿಜೆಪಿ ನಾಯಕ ಶ್ರೀಕಾಂತ್‌ ತ್ಯಾಗಿ ಅವರನ್ನು ಬಂಧಿಸಲಾಗಿದೆ. ಬಿಜೆಪಿ ಕಿಸಾನ್‌ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂದು ಹೇಳಿಕೊಳ್ಳುವ ಶ್ರೀಕಾಂತ್‌, ನೊಯ್ಡಾದ ೯೩ ಸೆಕ್ಟರ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪಕ್ಕದ ಮನೆಯ ಮಹಿಳೆಯೊಬ್ಬರಿಗೆ ಬೈದ ವಿಡಿಯೊ ವೈರಲ್‌ ಆಗಿತ್ತು. ಇದಾದ ಬಳಿಕ ಪ್ರಕರಣ ದಾಖಲಾಗಿ, ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ | ಬೆಂಗಳೂರು| ಅಹವಾಲು ಸಲ್ಲಿಸಲು ಬಂದ ಮಹಿಳೆಗೆ ಶಾಸಕ ಅರವಿಂದ್‌ ಲಿಂಬಾವಳಿ ಆವಾಜ್

Exit mobile version