ಬೆಂಗಳೂರು: ಇದುವರೆಗೆ ಹಾರುತ್ತಿದ್ದ ವಿಮಾನಗಳಲ್ಲಿ ಪ್ರಯಾಣಿಕರು ಸಹ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸುವುದು, ವಿಮಾನದ ಸಿಬ್ಬಂದಿಗೆ ಬೈಯುವುದು, ಕುಡಿತ ಮತ್ತಿನಲ್ಲಿ ಜಗಳ ಆಡುವುದು ಸೇರಿ ಹಲವು ದುರ್ವರ್ತನೆಗಳ ಪ್ರಕರಣಗಳು ಸುದ್ದಿಯಾಗುತ್ತಿದ್ದವು. ಈಗ ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru airport) ಆರು ಪ್ರಯಾಣಿಕರನ್ನು ಇಂಡಿಗೋ ವಿಮಾನದಿಂದ (IndiGo Flight) ಕೆಳಗಿಳಿಸಲಾಗಿದೆ. ಇಂಡಿಗೋ ಸಿಬ್ಬಂದಿಯ ಕುರಿತು ಪ್ರಯಾಣಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಭಾನುವಾರ (ನವೆಂಬರ್ 19) ರಾತ್ರಿ 9.30ರ ಸುಮಾರಿಗೆ ಇಂಡಿಗೋದ 6ಇ 478 ವಿಮಾನವು ಚೆನ್ನೈಗೆ ಹಾರಾಟ ನಡೆಸಬೇಕಿತ್ತು. ಅಮೃತಸರದಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ಹೊರಡಬೇಕಿತ್ತು. ಆದರೆ, ಬೆಂಗಳೂರಿನಿಂದ ಚೆನ್ನೈಗೆ ಹೊರಡಬೇಕಿದ್ದ ವಿಮಾನದಲ್ಲಿ ಆರೇ ಪ್ರಯಾಣಿಕರು ಇದ್ದ ಕಾರಣ ವಿಮಾನದ ಸಿಬ್ಬಂದಿಯು ಆರೂ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದೆ ಎಂದು ತಿಳಿದುಬಂದಿದೆ.
ಅಷ್ಟಕ್ಕೂ ಆಗಿದ್ದೇನು?
ಇಂಡಿಗೋ ವಿಮಾನದ ಸಿಬ್ಬಂದಿ ವರ್ತನೆ ಕುರಿತು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಸೇರಿ ಒಟ್ಟು ಆರು ಪ್ರಯಾಣಿಕರು ವಿಮಾನ ಹತ್ತಿದ್ದೆವು. ಎಲ್ಲರೂ ವಿಮಾನ ಟೇಕ್ ಆಫ್ ಆಗಲು ಕಾಯುತ್ತಿದ್ದೆವು. ಇದೇ ವೇಳೆ ನನಗೆ ಕರೆ ಮಾಡಿದ ವಿಮಾನದ ಸಿಬ್ಬಂದಿಯು ಕೆಳಗೆ ಇಳಿಯುವಂತೆ ಸೂಚಿಸಿದರು. ನಿಮಗೆ ಬೇರೊಂದು ವಿಮಾನದ ಮೂಲಕ ಚೆನ್ನೈಗೆ ಕಳುಹಿಸಲಾಗುತ್ತದೆ. ಕೆಲವೇ ಕ್ಷಣಗಳಲ್ಲಿ ವಿಮಾನ ಹೊರಡಲಿದೆ. ನೀವು ಬಂದು ಬೋರ್ಡಿಂಗ್ ಪಾಸ್ ತೆಗೆದುಕೊಳ್ಳಿ ಎಂದು ಹೇಳಿದರು. ಬೇರೆ ಪ್ರಯಾಣಿಕರಿಗೂ ಇದೇ ರೀತಿಯ ಕರೆ ಮಾಡಿ ಎಲ್ಲರನ್ನೂ ಕೆಳಗೆ ಇಳಿಸಿದರು. ಆದರೆ, ನಮಗೆ ಬೇರೆ ವಿಮಾನದ ವ್ಯವಸ್ಥೆ ಮಾಡದ ಕಾರಣ ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆಯಬೇಕಾಯಿತು” ಎಂದು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಇದನ್ನೂ ಓದಿ: IndiGo Flight: ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ದುರ್ವರ್ತನೆ ತೋರಿದ ಪ್ರಯಾಣಿಕ ಜೈಲಿಗೆ!
ಆರು ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಿಲ್ಲ. ಈ ಕುರಿತು ವಿಮಾನದ ಸಿಬ್ಬಂದಿ, ಅಧಿಕಾರಿಗಳಿಗೆ ಕೇಳಿದರೂ ಸರಿಯಾಗಿ ಸ್ಪಂದನೆ ದೊರೆತಿಲ್ಲ. ಇದರಿಂದಾಗಿ ಇಬ್ಬರು ಪ್ರಯಾಣಿಕರು ವಿಮಾನ ನಿಲ್ದಾಣದಿಂದ 13 ಕಿಲೋಮೀಟರ್ ದೂರದಲ್ಲಿ ಹೋಟೆಲ್ ಮಾಡಿ, ಅಲ್ಲಿ ತಂಗಿದರು. ನಾಲ್ಕು ಪ್ರಯಾಣಿಕರು ವಿಮಾನ ನಿಲ್ದಾಣದ ಲಾಂಜ್‌ನಲ್ಲಿಯೇ ಇಡೀ ರಾತ್ರಿ ಕಳೆದರು. ಸೋಮವಾರ ಅವರಿಗೆ ವಿಮಾನದ ವ್ಯವಸ್ಥೆ ಮಾಡಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಹಾಗಾಗಿ, ಇಂಡಿಗೋ ವಿಮಾನಯಾನ ಸಂಸ್ಥೆ ಸಿಬ್ಬಂದಿಯ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ