ಮಂಗಳೂರು: ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ (Indigo Negligence) ಮಂಗಳೂರಿಗೆ ಗುರುವಾರ ಬೆಳಗ್ಗೆ ತಲುಪಬೇಕಾಗಿದ್ದ ಸುಮಾರು 12 ಮಂದಿ ಪ್ರಯಾಣಿಕರು ಮುಂಬಯಿಯಲ್ಲೇ ಬಾಕಿಯಾಗಿದ್ದಾರೆ. ಹಲವು ಪ್ರಮುಖ ಕೆಲಸಗಳನ್ನು ಇಟ್ಟುಕೊಂಡು ಬಂದಿದ್ದವರು ಈಗ ಮುಂಬಯಿಯಲ್ಲಿ ಸಿಕ್ಕಿಬಿದ್ದಿದ್ದು, ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬೆಹರೈನ್‌ನಿಂದ ಬಂದಿದ್ದ ವಿಮಾನದ ಸಂಚಾರದಲ್ಲಿ ತಡವಾಗಿದ್ದು ಮತ್ತು ಮುಂಬಯಿಯಿಂದ ಮಂಗಳೂರಿಗೆ ಬರುವ ಕನೆಕ್ಟಿಂಗ್ ಫ್ಲೈಟ್ 12 ಮಂದಿ ಪ್ರಯಾಣಿಕರನ್ನು ಬಿಟ್ಟೇ ಹಾರಾಟ ನಡೆಸಿದ್ದು ಈ ಸಮಸ್ಯೆಗೆ ಮೂಲ ಕಾರಣ.
ಹಾಗಿದ್ದರೆ ಒಟ್ಟಾರೆ ಆಗಿದ್ದೇನು?
ಕರಾವಳಿಯ ಹನ್ನೆರಡು ಮಂದಿ ಪ್ರಯಾಣಿಕರು ಬೆಹರಿನ್‌ನಿಂದ ಬುಧವಾರ ರಾತ್ರಿ ಹೊರಡುವ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಎಲ್ಲರೂ ವಿಮಾನವನ್ನು ಹತ್ತಿ ಕುಳಿತಿದ್ದರೂ ಒಬ್ಬ ಪ್ರಯಾಣಿಕ ಮಾತ್ರ ಇನ್ನೂ ವಿಮಾನ ಏರಿರಲಿಲ್ಲ. ಬೋರ್ಡಿಂಗ್‌ನಲ್ಲಿ ಚೆಕ್ ಇನ್ ಮಾಡಿ ಲಗೇಜನ್ನು ದಾಟಿಸಿದ್ದರೂ ಆತ ಮಾತ್ರ ಕಾಣಿಸಿರಲಿಲ್ಲ.
ಆತ ಎಲ್ಲಿ ಹೋದ ಎಂದು ಎಲ್ಲ ಕಡೆ ತಪಾಸಣೆ ನಡೆಸಿ, ಮೈಕ್‌ನಲ್ಲಿ ಘೋಷಿಸಿದರೂ ಸಿಗಲಿಲ್ಲ. ಸುಮಾರು ಎರಡು ಗಂಟೆ ಕಾದ ಬಳಿಕ ಆತನ ಲಗೇಜನ್ನು ಕೆಳಗಿಳಿಸಿ ವಿಮಾನವನ್ನು ಹಾರಿಸಲಾಯಿತು. ಅಲ್ಲೇ ಎರಡು ಗಂಟೆ ತಡವಾಗಿದ್ದ ಹಿನ್ನೆಲೆಯಲ್ಲಿ ಮುಂಬಯಿಗೆ ಬೆಳಗ್ಗೆ 5.30ಕ್ಕೆ ತಲುಪಬೇಕಾಗಿದ್ದ ವಿಮಾನ ಲ್ಯಾಂಡ್ ಆಗುವಾಗ 7.30ಕ್ಕೆ ತಲುಪಿದೆ.
ಈ ನಡುವೆ ಮುಂಬಯಿಯಿಂದ ಮಂಗಳೂರಿಗೆ ಬರುವ ಇಂಡಿಗೋ ಕನೆಕ್ಟಿಂಗ್ ಫ್ಲೈಟ್ 7.45ಕ್ಕೆ ಹೊರಡಬೇಕಿತ್ತು. ಅಲ್ಲಿ ಎರಡು ಗಂಟೆ ವಿಳಂಬವಾಗಿದೆ. ವಿಮಾನ ತಡವಾಗಿ ಬಂದಿದೆ ಎನ್ನುವ ವಿಷಯ ತಿಳಿದಿದ್ದರೂ ಕನೆಕ್ಟಿಂಗ್ ವಿಮಾನವನ್ನು ಮಾತ್ರ ಸರಿಯಾದ ಸಮಯಕ್ಕೇ ಹಾರಿಸಲಾಗಿದೆ. ಹೀಗಾಗಿ ಬೆಹರೈನ್‌ನಿಂದ ಬಂದಿರುವ ಯಾವ ಕರಾವಳಿ ಪ್ರಯಾಣಿಕರಿಗೂ ಕನೆಕ್ಟಿಂಗ್ ಫ್ಲೈಟ್ ಸಿಗಲೇ ಇಲ್ಲ. ಅವರೆಲ್ಲ ಮುಂಬೈ ವಿಮಾನ ನಿಲ್ದಾಣದಲ್ಲಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಯಿತು.
ಬೆಹರೈನ್‌ನಲ್ಲಿ ಎರಡು ಗಂಟೆ ಕಾಲ ಒಬ್ಬ ಪ್ರಯಾಣಿಕನಿಗಾಗಿ ಕಾದಿದ್ದ ಸಂಸ್ಥೆ, ಇಲ್ಲಿ ಒಂದರ್ಧ ಗಂಟೆ ಕಾದಿದ್ದರೆ ಏನಾಗುತ್ತಿತ್ತು ಎಂದು ಪ್ರಯಾಣಿಕರು ಪ್ರಶ್ನಿಸಿ ಜಗಳ ಮಾಡಿದರು. ಕೇವಲ 15 ನಿಮಿಷದಲ್ಲಿ ಒಂದು ವಿಮಾನದಿಂದ ಇನ್ನೊಂದು ವಿಮಾನಕ್ಕೆ ಶಿಫ್ಟ್ ಮಾಡುವುದು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಈ ನಡುವೆ, ಮುಂಬಯಿಯಿಂದ ಮಂಗಳೂರಿಗೆ ಇಂಡಿಗೋ ಸಂಸ್ಥೆಯ ಮುಂದಿನ ವಿಮಾನ ಇರುವುದು ಸಂಜೆ 7 ಗಂಟೆಗೆ. ಅಲ್ಲಿವರೆಗೆ ಪ್ರಯಾಣಿಕರನ್ನು ಒಂದು ಹೋಟೆಲ್‌ನಲ್ಲಿ ಉಳಿಸಲಾಗಿದೆ. ನಾನಾ ಕಾರ್ಯಕ್ರಮಗಳನ್ನು ಗುರಿಯಾಗಿಟ್ಟುಕೊಂಡು ಊರಿಗೆ ಬಂದಿದ್ದವರಿಗೆ ಈ ವಿಮಾನ ಸಮಸ್ಯೆ ಭಾರಿ ತೊಂದರೆಯನ್ನು ಉಂಟು ಮಾಡಿದೆ. ಹೀಗಾಗಿ ಅವರೆಲ್ಲ ಇಂಡಿಗೊ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ : ಮದ್ಯದ ಬಾಟಲಿ ಹಿಡಿದು ವಿಮಾನದಲ್ಲಿ ಓಡಾಡುತ್ತ, ಅವ್ಯವಸ್ಥೆ ಸೃಷ್ಟಿಸಿದ ಇಬ್ಬರು ಪ್ರಯಾಣಿಕರು; ಈ ವರ್ಷದ 7ನೇ ಅಶಿಸ್ತಿನ ಕೇಸ್ ಇದು!