ಬೆಂಗಳೂರು: ಬಡವರು, ನಿರ್ಗತಿಕರು, ಅಸಂಘಟಿತ ವಲಯದ ಕಾರ್ಮಿಕರು, ಕಟ್ಟಡ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗೆ (Indira Canteen) ಬೀಗ ಬೀಳುತ್ತಾ ಎಂಬ ಅನುಮಾನ ಶುರುವಾಗಿದೆ. ಬಿಬಿಎಂಪಿ vs ಗುತ್ತಿಗೆ ಸಂಸ್ಥೆಯ ಬಡಿದಾಟದಲ್ಲಿ ಕೂಸು ಬಡವಾಯಿತು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಬಿಎಂಪಿ ಹಾಗೂ ಗುತ್ತಿಗೆ ಪಡೆದಿರುವ ಚೆಫ್ ಟಾಕ್ ಕಂಪನಿ ನಡುವೆ ಬಿಲ್ ವಿಚಾರದಲ್ಲಿ ಕಿರಿಕ್ ಶುರುವಾಗಿದೆ. ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸುವ ಚೆಫ್ ಟಾಕ್ ಸಂಸ್ಥೆಗೆ ಕಳೆದೊಂದು ವರ್ಷದಿಂದ 47 ಕೋಟಿ ರೂ. ಬಿಲ್ ಬಾಕಿಯನ್ನು ಬಿಬಿಎಂಪಿ ಉಳಿಸಿಕೊಂಡಿದೆ.
ಹೀಗಾಗಿ 15 ದಿನಗಳ ಒಳಗಾಗಿ ಬಿಲ್ ಕ್ಲಿಯರ್ ಮಾಡದೇ ಇದ್ದರೆ ಆಹಾರ ಪೂರೈಕೆ ಸ್ಥಗಿತ ಮಾಡುವ ಎಚ್ಚರಿಕೆಯನ್ನು ನೀಡಿದೆ. ಚೆಫ್ ಟಾಕ್ ಬೆದರಿಕೆಗೆ ಕೌಂಟರ್ ಕೊಟ್ಟಿರುವ ಬಿಬಿಎಂಪಿ ಅಧಿಕಾರಿಗಳು, ಆಹಾರ ಸರಬರಾಜು ನಿಲ್ಲಿಸಿದರೆ ಬ್ಲಾಕ್ ಲಿಸ್ಟ್‌ಗೆ ಹಾಕುವ ಬೆದರಿಕೆ ಒಡ್ಡಿದೆ. ಚೆಫ್ ಟಾಕ್ ಕಂಪನಿಯು 96 ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರವನ್ನು ಒದಗಿಸುತ್ತಿದೆ.
ಮತ್ತೊಂದು ಕಡೆ ಕಡಿಮೆ ಆಹಾರ ಕೊಟ್ಟು ಜಾಸ್ತಿ ಬಿಲ್ ಹಾಕಿದ್ದಾರೆ ಎಂದು ಬಿಬಿಎಂಪಿ ಆರೋಪಿಸಿದೆ. ಹೀಗಾಗಿ ಆಡಿಟ್ ಮಾಡಿ ಬಿಲ್ ಕ್ಲಿಯರ್ ಮಾಡುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಚೆಫ್ ಟಾಕ್ ಸಂಸ್ಥೆ ಆಹಾರ ಪೂರೈಕೆ ನಿಲ್ಲಿಸಿದರೆ ಬ್ಲಾಕ್ ಲಿಸ್ಟ್‌ಗೆ ಹಾಕಿ ಟೆಂಡರ್ ರದ್ದು ಮಾಡಿ ಬದಲಿಗೆ ಹೊಸ ಟೆಂಡರ್ ಕರೆಯಲು ಬಿಬಿಎಂಪಿ ಚೀಫ್ ಕಮಿಷನರ್ ಚಿಂತಿಸಿದ್ದಾರೆ.
ಇದನ್ನೂ ಓದಿ: Corona Alert: ರಾಜ್ಯಕ್ಕೆ ಶುರುವಾಯ್ತು ಮತ್ತೆ ಕೊರೊನಾ ಆತಂಕ, 4 ಜಿಲ್ಲೆಗಳಿಗೆ ಅಲರ್ಟ್
ಇತ್ತ ಬಿಬಿಎಂಪಿ ಹಾಗೂ ಗುತ್ತಿಗೆ ಸಂಸ್ಥೆಗಳ ನಡುವಿನ ಕಿತ್ತಾಟದಿಂದಾಗಿ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದಂತಾಗುತ್ತದೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಕಡಿಮೆ ದರದಲ್ಲಿ ಸಿಗುತ್ತಿದ್ದ ಊಟಕ್ಕೆ ಈ ಬಿಲ್ ಬಡಿದಾಟದಿಂದ ಕೊಕ್ಕೆ ಬೀಳುವ ಭೀತಿ ಎದುರಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ