Site icon Vistara News

Indira Canteen: ಬದಲಾಗಲಿದೆ ಇಂದಿರಾ ಕ್ಯಾಂಟೀನ್‌ ಮೆನು; ಸಿಗಲಿದೆ ಬನ್ಸ್‌, ಬ್ರೆಡ್‌ ಜಾಮ್!

Indira Canteen

#image_title

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳನ್ನು (Indira canteen) ಬಲಪಡಿಸುವ ವಾಗ್ದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಈಡೇರಿಸುವ ಹಾದಿಯಲ್ಲಿದ್ದಾರೆ. ಇದರ ಮೊದಲ ಹಂತವಾಗಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ಮೆನು ಬದಲಾವಣೆ ಮಾಡಿ ಗುಣಮಟ್ಟದ ಶುಚಿ-ರುಚಿ ಊಟ ನೀಡಲು ನಿರ್ಧರಿಸಲಾಗಿದೆ.

ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಐಟಂಗಳ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದ್ದು ಬೆಳಗ್ಗಿನ ತಿಂಡಿಯ ಮೆನುವಿನಲ್ಲಿ ಬ್ರೆಡ್ ಜಾಮ್ ಹಾಗೂ ಮಂಗಳೂರು ಬನ್ಸ್ ಸೇರ್ಪಡೆಯಾಗಿದೆ. ಮಧ್ಯಾಹ್ನದ ಊಟದಲ್ಲಿ ದಕ್ಷಿಣ ಕರ್ನಾಟಕ ಶೈಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಪ್ರಸಿದ್ಧವಾದ ಮುದ್ದೆ, ಸೊಪ್ಪು ಸಾರು ನೀಡಲು ಸೇರಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟಕ್ಕೆ ಸಿಗಲಿದೆ ಒಂದು ಸಿಹಿ ಪಾಯಸ ಅಥವಾ ಸಿಹಿ ತಿಂಡಿ ನೀಡಲು ತೀರ್ಮಾನಿಸಲಾಗಿದೆ.

ಮಧ್ಯಾಹ್ನದ ಊಟಕ್ಕೆ ಸಿಗಲಿದೆ ಪಾಯಸ

ಇಂದಿರಾ ಕ್ಯಾಂಟಿನ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಪಾಯಸವನ್ನು ನೀಡಲು ಬಿಬಿಎಂಪಿ ಮೆನು ಪಟ್ಟಿಯಲ್ಲಿ ಹೊಸದಾಗಿ ಪಾಯಸವನ್ನು ಸೇರ್ಪಡೆ ಮಾಡಿದೆ. ಒಂದು ದಿನ ಬಿಟ್ಟು ದಿನ ಮುದ್ದೆ ಊಟ ಒದಗಿಸುವ ಕುರಿತು ನಿರ್ಧಾರ ಮಾಡಲಾಗಿದೆ. ಮುದ್ದೆ ಇಲ್ಲದ ದಿನ ಚಪಾತಿ, ಸಾಗು ಊಟ ನೀಡಲು ಹೊಸ ಮೆನು ಮೂಲಕ ಯೋಜನೆ ಮಾಡಲಾಗಿದೆ. ಊಟ ಒದಗಿಸುವ ಏಜೆನ್ಸಿಗಳು ಈ ಹೊಸ ಮೆನುವಿನಲ್ಲಿರುವ ಊಟವನ್ನು ಕೊಡಲು ಫೈನಲ್ ಆಗುತ್ತಿದ್ದಂತೆ ಹೊಸ ಮೆನು ಪ್ರಕಾರ ಊಟ ಜಾರಿಗೆ ಬರಲಿದೆ ಎನ್ನಲಾಗಿದೆ.

ಹಾಗಿದ್ದರೆ ಮೂರೂ ಹೊತ್ತಿನ ಮೆನುವಿನಲ್ಲಿ ಏನೇನು ಇರುತ್ತದೆ?

ಬೆಳಗ್ಗಿನ ತಿಂಡಿಗಳು ಇವು ನೋಡಿ, ರೇಟೂ ಜಾಸ್ತಿಯಾಗಿದೆ.
ಇಡ್ಲಿ, ಪುಳಿಯೊಗರೆ, ಖಾರಾಬಾತ್, ಪೊಂಗಲ್‌ ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್‌, ಕೇಸರಿಬಾತ್‌ ನೀಡಲಾಗುತ್ತಿತ್ತು. ಬ್ರೆಡ್‌ ಜಾಮ್‌ ಮತ್ತು ಮಂಗಳೂರು ಬನ್ಸ್‌ ಹೆಚ್ಚುವರಿ ಸೇರ್ಪಡೆ ಆಗಲಿದೆ. ಈ ನಡುವೆಮ ಈವರೆಗೆ ಬೆಂಗಳೂರಿನಲ್ಲಿ ಬೆಳಗ್ಗಿನ ತಿಂಡಿಗೆ ಕೇವಲ 5 ರೂ. ಇದ್ದು, ಅದನ್ನು ರೂ.10ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.

ಮಧ್ಯಾಹ್ನದ ಊಟದಲ್ಲಿ ಏನೇನಿರುತ್ತದೆ?
ಮಧ್ಯಾಹ್ನ ಊಟದಲ್ಲಿ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಮಾತ್ರ ನೀಡಲಾಗುತ್ತಿತ್ತು. ಈಗ ಅದರ ಜೊತೆಗೆ ಹೊಸದಾಗಿ ಸಿಹಿ ಪಾಯಸ ಮತ್ತು ದಿನ ಬಿಟ್ಟು ದಿನ ಮುದ್ದೆ, ಸೊಪ್ಪುಸಾರು ಊಟ ಹಾಗೂ ಮುದ್ದೆ ಇಲ್ಲ ದಿನ ಚಪಾತಿ, ಸಾಗು ನೀಡಲು ಮೆನು ಸಿದ್ಧಪಡಿಸಲಾಗಿದೆ.

ರಾತ್ರಿ ಊಟಕ್ಕೆ ಏನೇನು ಇರಲಿದೆ?
ಟೊಮೆಟೋ ಬಾತ್‌, ಮೊಸರನ್ನ, ವಾಂಗಿಬಾತ್‌, ಬಿಸಿಬೆಳೆ ಬಾತ್, ಮೆಂತ್ಯೆ ಪಲಾವ್‌, ಪುಳಿಯೊಗರೆ, ಪಲಾವ್‌ ನೀಡಲಾಗುತ್ತಿದೆ. ಅದನ್ನೇ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದು ಹಿಂದಿನದೇ ಮೆನು ಆಗಿದೆ.

ಇದನ್ನೂ ಓದಿ: Indira Canteen : ಇನ್ನು ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಮಾಂಸಾಹಾರಕ್ಕೂ ಅವಕಾಶ

Exit mobile version