ಬೆಳಗಾವಿ: ಈಗ ರಾಜ್ಯಾದ್ಯಂತ ವಿದ್ಯುತ್ ದರ (Electricity Bill) ಏರಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯರ ಸಹಿತ ಕೈಗಾರಿಕೋದ್ಯಮಿಗಳೂ ಈಗ ಭ್ರಮನಿರಸನಗೊಂಡಿದ್ದು, ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದಾರೆ. ಈ ನಡುವೆ ಕೈಗಾರಿಕೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲೇ ಸಂಕಷ್ಟದಲ್ಲಿದ್ದು, ಇದರ ಜತೆಗೆ ಶುಲ್ಕ ಹೆಚ್ಚಳದ ಬರೆ ಎಳೆಯಲಾಗಿದೆ. ಸರ್ಕಾರ ಕೂಡಲೇ ದರವನ್ನು ಇಳಿಕೆ ಮಾಡದೇ ಇದ್ದಲ್ಲಿ, ಮಹಾರಾಷ್ಟ್ರದತ್ತ ಮುಖ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಒಂದು ಕೈಗಾರಿಕೆ ಆಗಲು ಹತ್ತು ವರ್ಷ ಬೇಕಾಗುತ್ತದೆ. ತಕ್ಷಣ ಹೋಗೋಕೆ ಅದೇನು ಡಬ್ಬಾ ಅಂಗಡಿಯೇ? ಚಹಾ ಅಂಗಡಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಒಂದು ದಿವಸದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಆಗಲ್ಲ. ಮಹಾರಾಷ್ಟ್ರಕ್ಕೆ ಹೋಗಲು ಹತ್ತು ವರ್ಷ ಬೇಕು. ತಕ್ಷಣ ಹೋಗೋಕೇ ಅದೇನು ಡಬ್ಬಾ ಅಂಗಡಿಯೇ ಅಥವಾ ಚಹಾ ಅಂಗಡಿಯೇ? ಅದಕ್ಕೆ ಎಷ್ಟು ಶ್ರಮ, ಎಷ್ಟು ದುಡ್ಡು ಆಗುತ್ತದೆ. ಹಾಗೆ ಹೋಗಲು ಆಗಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Hydropower Project: ಚೀನಾ ಗಡಿಯಲ್ಲಿ ಭಾರೀ ವೆಚ್ಚದ ಮೆಗಾ ಹೈಡ್ರೋಪವರ್ ಪ್ರಾಜೆಕ್ಟ್! 213 ಶತಕೋಟಿ ರೂ. ವೆಚ್ಚ
ನಮಗೂ ಗೊಂದಲ ಇದೆ
ನೋಡೋಣ ವಿದ್ಯುತ್ ದರ ಏರಿಕೆ ಬಗ್ಗೆ ನಮಗೂ ಗೊಂದಲ ಇದೆ. ಮೂರು ಪಟ್ಟು ವಿದ್ಯುತ್ ಬಿಲ್ ಹೆಚ್ಚಾಗಿದೆ. ಏಕೆ ಹೆಚ್ಚಾಗಿದೆ ಎಂದು ಸಂಜೆಯೊಳಗೆ ತಿಳಿದುಕೊಂಡು ಹೇಳುತ್ತೇವೆ. ಅಷ್ಟೆಲ್ಲ ಹೆಚ್ಚಳ ಮಾಡಬಾರದು. ಕೆಇಆರ್‌ಸಿಯವರು ಹತ್ತು ಪರ್ಸೆಂಟ್ ಮಾತ್ರ ಹೆಚ್ಚು ಮಾಡಿದ್ದಾರೆ. ಇಷ್ಟು ಹೆಚ್ಚು ಏಕೆ ಆಗಿದೆ ಎಂದು ನಮಗೂ ಗೊತ್ತಾಗುತ್ತಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಹಿಂದಿನ ಸರ್ಕಾರ ಮುಂದಿನ ಸರ್ಕಾರ ಅನ್ನೋ ಪ್ರಶ್ನೆ ಇಲ್ಲ. ಸರ್ಕಾರ ಸರ್ಕಾರವೇ. ವಿದ್ಯುತ್ಛಕ್ತಿ ನಿಯಂತ್ರಣ ಆಯೋಗವೇ ಬೇರೆ ಇದೆ. ಇದಕ್ಕೂ ಪಕ್ಷಕ್ಕೆ ಏನೂ ಸಂಬಂಧ ಇರುವುದಿಲ್ಲ. ಏಪ್ರಿಲ್ 1ರಂದು ಆದೇಶ ಆಗಿರಬಹುದು. ಚುನಾವಣೆ ಹಿನ್ನೆಲೆಯಲ್ಲಿ ಕೊಟ್ಟಿಲ್ಲ ಅನಿಸುತ್ತದೆ. ಎರಡ್ಮೂರು ತಿಂಗಳು ಸೇರಿಸಿ ಈಗ ಕೊಟ್ಟಿರಬೇಕು ಎಂಬುದು ನನ್ನ ಅಂದಾಜು. ಏಪ್ರಿಲ್, ಮೇ ತಿಂಗಳದ್ದು ಸೇರಿಸಿ ಬಿಲ್ ಕೊಟ್ಟಿರಬೇಕು ಎಂಬುದು ನನ್ನ ಅಂದಾಜು. ನಾನು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ವಲಸೆ ಹೋಗುವುದಿಲ್ಲ. ಇದು ತಾತ್ಕಾಲಿಕ ಸಮಸ್ಯೆ ಅಷ್ಟೇ. ವಿದ್ಯುತ್ ದರ ಏರಿಕೆ ಕೇವಲ ಕರ್ನಾಟಕದ ಸಮಸ್ಯೆ ಅಲ್ಲ. ಇಡೀ ದೇಶದ ಆಯಾ ರಾಜ್ಯಗಳಲ್ಲಿ ಕಾಲಕ್ಕೆ ತಕ್ಕಂತೆ ಏರಿಕೆ ಮಾಡಲಾಗುತ್ತದೆ. ಇದು ಹೊಸದೇನಲ್ಲ ಪ್ರತಿ ವರ್ಷ ಪರಿಷ್ಕರಣೆ ಮಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಸರ್ಕಾರ ಸ್ಪಂದಿಸದಿದ್ರೆ ಮಹಾರಾಷ್ಟ್ರದತ್ತ ಮುಖ ಮಾಡುವ ಎಚ್ಚರಿಕೆ
ವಿದ್ಯುತ್ ದರ ಏರಿಕೆ ಖಂಡಿಸಿ ಕೈಗಾರಿಕೋದ್ಯಮಿಗಳು ಬೆಳಗಾವಿಯಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಮೌನವಾಗಿ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಹೇಮಂತ ಪೋರವಾಲ್ ನೇತೃತ್ವದಲ್ಲಿ ರ‍್ಯಾಲಿ ನಡೆದಿದೆ. ಬೆಳಗಾವಿಯ ಉದ್ಯಮ ಭಾಗ, ಮಚ್ಛೆ ಇಂಡಸ್ಟ್ರಿಯಲ್ ಪ್ರದೇಶದ ನೂರಾರು ಉದ್ಯಮಿಗಳು ಭಾಗಿಯಾಗಿದ್ದರು.
ಈ ಮೊದಲಿದ್ದ ಕನಿಷ್ಠ ವಿದ್ಯುತ್ ಶುಲ್ಕವನ್ನು ದುಪ್ಪಟ್ಟು ಮಾಡಿರುವುದರಿಂದ ಉದ್ಯಮಿಗಳಿಗೆ ಸಂಕಷ್ಟ ಎದುರಾಗಿದೆ. ತಕ್ಷಣವೇ ಸರ್ಕಾರ ವಿದ್ಯುತ್ ದರ ಇಳಿಸಿ ಉದ್ಯಮಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ: BJP Karnataka: ಪ್ರತಾಪ್ ಸಿಂಹ ʼತುರಿಕೆʼ ಮಾತಿನಿಂದ ಬಿಜೆಪಿಯಲ್ಲಿ ಕಸಿವಿಸಿ: ಜಾರಿಕೊಂಡ ಸಿ.ಟಿ. ರವಿ, ಪೂಜಾರಿ!
ಮಹಾರಾಷ್ಟ್ರ ಸರ್ಕಾರವು ಎಲ್ಲ ಸೌಕರ್ಯವನ್ನು ಕಲ್ಪಿಸಿ ಕೊಡುತ್ತೇವೆ. ಅಲ್ಲಿಗೆ ಬನ್ನಿ ಎಂದು ಆಹ್ವಾನ ನೀಡಿದೆ. ಸರ್ಕಾರ ನಮಗೆ ಸೂಕ್ತವಾಗಿ ಸ್ಪಂದಿಸದೇ ಇದ್ದರೆ ಮಹಾರಾಷ್ಟ್ರದತ್ತ ಮುಖ ಮಾಡಲಾಗುವುದು ಎಂದು ಕೈಗಾರಿಕೋದ್ಯಮಿಗಳು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.