ಬೆಂಗಳೂರು: ಪ್ರತಿ ಆರು ಜನರ ಪೈಕಿ ಒಬ್ಬರು ಬಂಜೆತನ ಸಮಸ್ಯೆಯಿಂದ (Infertility problem) ಬಳಲುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಈ ರೀತಿಯ ಬಂಜೆತನ ಸಮಸ್ಯೆಯು ಪ್ರತ್ಯೇಕ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ, ಹಿಂದುಳಿದ ದೇಶಗಳು ಎಂಬ ಯಾವುದೇ ವ್ಯತ್ಯಾಸ ಇಲ್ಲದೆ ಮಹಿಳೆಯರಲ್ಲಿ ಬಂಜೆತನ ಹೆಚ್ಚಾಗಿದೆ ಎಂದು ತಿಳಿಸಿದೆ.
ಬೇರೆ ಬೇರೆ ದೇಶಗಳಲ್ಲಿ ಶೇ.17.5 ರಷ್ಟು ಬಂಜೆತನ ಇರುವುದು ಕಂಡು ಬಂದಿದೆ. ಬಂಜೆತನ ಹೆಚ್ಚಾಗಲು ಹಲವಾರು ಕಾರಣಗಳಿದ್ದು, ಇದರೊಂದಿಗೆ ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿಯೂ ನೋವುಗಳನ್ನು ದಂಪತಿ ಅನುಭವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ಕುರಿತು ಸ್ತ್ರೀ ರೋಗ ತಜ್ಞೆ ಪದ್ಮಿನಿ ಪ್ರಸಾದ್ ಪ್ರತಿಕ್ರಿಯಿಸಿದ್ದು, ಇತ್ತೀಚೆಗೆ ತಡವಾಗಿ ಮದುವೆ ಆಗುವುದು, ಕೆಲಸದಲ್ಲಿ ಒತ್ತಡ, ಕೆರಿಯರ್ ಲೈಫ್ ಚಿಂತೆ ಸೇರಿ ಜೀವನ ಶೈಲಿ ಬದಲಾವಣೆಯಿಂದಾಗಿ ಮಹಿಳೆಯರು ಮಾತ್ರವಲ್ಲದೆ ಪುರಷರಲ್ಲಿಯೂ ಬಂಜೆತನದ ಸಮಸ್ಯೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತ ವಿಶ್ವ ಆರೋಗ್ಯ ಸಂಸ್ಥೆ ಆತಂಕಕಾರಿ ವಿಷಯವನ್ನು ಉಲ್ಲೇಖಿಸಿದ್ದು, ಪ್ರಪಂಚದಾದ್ಯಂತ ಬಂಜೆತನ ಸಮಸ್ಯೆ ಹೆಚ್ಚಿದೆ. ಆದರೆ ಇದಕ್ಕೆ ನೀಡುವ ಚಿಕಿತ್ಸೆಯು ಗುಣಮಟ್ಟದ ರೀತಿಯಲ್ಲಿ ಇಲ್ಲ. ಬಂಜೆತನಕ್ಕೆ ನೀಡುವ ಚಿಕಿತ್ಸೆಯ ಖರ್ಚು- ವೆಚ್ಚವೂ ಹೆಚ್ಚಿದೆ. ಈ ದುಬಾರಿ ವೆಚ್ಚವನ್ನು ಜನರ ಕೈಗೆಟಕುವಂತೆ ಮಾಡಬೇಕೆಂದು ವರದಿಯಲ್ಲಿ ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಫ್ಯಾಮಿಲಿ ಲೈಫ್‌ಗಿಂತ ಕರಿಯರ್ ಲೈಫ್ ಹಿಂದೆ ಬಿದ್ದ ಯುವಸಮೂಹ
ಈ ಹಿಂದೆಲ್ಲ ಕುಟುಂಬದಲ್ಲಿ ಹುಡುಗ-ಹುಡುಗಿಗೆ 30 ವರ್ಷ ದಾಟುವುದರೊಳಗೆ ವಿವಾಹ ಮಾಡುತ್ತಿದ್ದರು. ಆದರೆ ಈಗೀಗ ಲೇಟ್ ಮ್ಯಾರೇಜ್ ಟ್ರೆಂಡ್ ಹೆಚ್ಚಾಗುತ್ತಿದೆ. ಜತೆಗೆ ವೈವಾಹಿಕ ಜೀವನಕ್ಕಿಂತ ವೃತ್ತಿ ಜೀವನಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
ಇದನ್ನೂ ಓದಿ: Fraud Case: ಏಷ್ಯನ್ ಪೇಂಟ್ಸ್ ಹೆಸರಲ್ಲಿ ನಕಲಿ ಪೇಂಟ್ ಮಾರಾಟ ಮಾಡುತ್ತಿದ್ದ ಉದ್ಯಮಿ ಬಂಧನ
ಅದರಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿರುವ ಮಹಿಳೆಯರು 30 ವರ್ಷ ದಾಟಿದರೂ ಮದುವೆ ಬಗ್ಗೆ ಯೋಚಿಸುತ್ತಿಲ್ಲ. ಮದುವೆ ಆದರೂ ಕರಿಯರ್ ಎಂದು ಗರ್ಭ ಧರಿಸುವುದನ್ನು ಮುಂದೂಡುತ್ತಾ ಬರುತ್ತಿದ್ದಾರೆ. 35ರ ನಂತರ ಮಗುವಿನ ಆಲೋಚನೆ ಮಾಡಿದರೆ ಹೆಚ್ಚಿನ ಸಮಸ್ಯೆಗೆ ಒಳಗಾಗಬೇಕಾಗುತ್ತದೆ ಹೆಚ್ಚು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.