Site icon Vistara News

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

Children lock up their mother for property

ತುಮಕೂರು: ಮಕ್ಕಳಿಗಾಗಿ ಹಗಲಿರುಳು ದುಡಿಯುವ ಹೆತ್ತವರಿಗೆ ಕೆಲವೊಮ್ಮೆ ಮಕ್ಕಳೇ ಮುಳುವಾಗಿ ಬಿಡುತ್ತಾರೆ. ಮಕ್ಕಳು ಆಸ್ತಿಗಾಗಿ ಹೆತ್ತವಳನ್ನೇ (Inhuman Behaviour) ಗೃಹ ಬಂಧನದಲ್ಲಿಟ್ಟಿರುವ ಅಮಾನವೀಯ ಘಟನೆ ತುಮಕೂರಿನ ಶಿರಾ ಗೇಟ್ ಸಾಡೆಪುರದಲ್ಲಿ ನಡೆದಿದೆ. ಪಂಕಜಾಕ್ಷಿ (80) ಸಂತ್ರಸ್ತ ತಾಯಿ.

ಆಸ್ತಿಗಾಗಿ ವೃದ್ಧ ತಾಯಿಯನ್ನು ಕಳೆದ 11 ತಿಂಗಳಿನಿಂದ ಮಗ-ಸೊಸೆ ಬಂಧನದಲ್ಲಿಟ್ಟಿದ್ದರು. ನಿವೃತ್ತ ಸಿಡಿಪಿಓ ಆಗಿರುವ ಪಂಕಜಾಕ್ಷಿ ಅವರು 12 ಮನೆಗಳು ಸೇರಿದಂತೆ ಒಟ್ಟು ಆಸ್ತಿಗೆ ಹಕ್ಕುದಾರಾಗಿದ್ದಾರೆ. ಈಗಾಗಲೇ ಮಕ್ಕಳು ವೃದ್ಧೆಯ ಬಳಿ ಇದ್ದ ಒಡವೆಗಳನ್ನೆಲ್ಲ ಪಡೆದುಕೊಂಡಿದ್ದಾರೆ.

ಸದ್ಯ ಮನೆಗಳನ್ನು ಮಕ್ಕಳ ಹೆಸರಿಗೆ ಮಾಡಿಕೊಡಲು ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಮಗ ಜೇಮ್ ಸುರೇಶ್ ಹಾಗೂ ಸೊಸೆ ಆಶಾ ಮನೆಯಲ್ಲೇ ತಾಯಿಗೆ ದಿಗ್ಬಂಧನ ಹಾಕಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಸಾಂತ್ವನ ಕೇಂದ್ರ, ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತುಮಕೂರು ‌ನಗರ ಪೊಲೀಸರು ಹಾಗೂ ಸಾಂತ್ವಾನ ಕೇಂದ್ರ ಅಧಿಕಾರಿಗಳು ಸ್ಥಳಕ್ಕಾಗಮಿಸಿದರು. ಮನೆಯೊಳಗೆ ಕೂಡಿಹಾಕಿದ್ದ ವೃದ್ಧೆಯನ್ನು ರಕ್ಷಿಸಿ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿ: Road Accident : ಲಾರಿಗೆ ಟಿಟಿ ವಾಹನ ಡಿಕ್ಕಿ; ಮೂವರು ಸಾವು, ಮೂವರು ಗಂಭೀರ

ಮಾಹಿತಿ ನೀಡಿದ್ದರೂ ಬಾರದ ಮಕ್ಕಳು!

ಪಂಕಜಾಕ್ಷಿ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಈ ವಿಷಯವನ್ನು ಅಧಿಕಾರಿಗಳು ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಕ್ಕಳು ಬಾರದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾರಿಗೆ ದೂರು ನೀಡಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಹಾಗೂ ಸಾಂತ್ವಾನ ಕೇಂದ್ರದ ಸಿಬ್ಬಂದಿ ವೃದ್ಧೆಯನ್ನು ಮನೆಗೆ ಕರೆದುಕೊಂಡು ಹೋಗಿ ವಾಪಸ್ ಬಿಟ್ಟಿದ್ದಾರೆ. ವೃದ್ಧ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವಂತೆ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ. ನ್ಯಾಯಾಧೀಶರ ಮುಂದೆ ನಾಲ್ವರು ಮಕ್ಕಳು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ. ಸದ್ಯ ನ್ಯಾಯಾಧೀಶರ ಮಧ್ಯಪ್ರವೇಶದಿಂದ ಪ್ರಕರಣವು ಇತ್ಯರ್ಥವಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯಾಗಿಸಿ ಎಂಬ ಮಾತು ಅಕ್ಷರಶಃ ನಿಜವೆನ್ನಿಸುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version